ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಒಡಲು ಗುಡುಗಿತು, ಕೆನ್ನೀರ ಜಲಸ್ಫೋಟ... ಸಂತ್ರಸ್ತರ ನೋವು, ಭಾವನೆಯ ಸಾಲು

ವಿಭಿನ್ನವಾಗಿ ನಡೆದ ‘ಸಂತ್ರಸ್ತರಿಗೆ ಸಾಂತ್ವನ’ ಕವಿಗೋಷ್ಠಿ, ಪ್ರೇಕ್ಷಕರಿಗೆ ತಣ್ಣೀರು ವಿತರಣೆ
Last Updated 16 ಅಕ್ಟೋಬರ್ 2018, 13:20 IST
ಅಕ್ಷರ ಗಾತ್ರ

ಮಡಿಕೇರಿ: ಅಲ್ಲಿ ಬರೀ ಭಾವನೆಗಳೇ ಮಾತಾಡಿದವು, ಪ್ರಕೃತಿಯ ರಮಣೀಯ ತಾಣ ಕೊಡಗು ಜಿಲ್ಲೆಗೆ ಏಕೆ ಈ ಪರಿಸ್ಥಿತಿ ಬಂತು ಎಂದು ಕವಿಗಳು ನೊಂದರು, ಮಳೆಗೆ ನಡುಗಿದ ಇಳೆ, ಭೂಮಿ ಬಾಯ್ತೆರೆದು ಕೊಚ್ಚಿ ಹೋದ ಬದುಕನ್ನು ಜಿಲ್ಲೆಯ ಕವಿಗಳು ಅಕ್ಷರ ರೂಪಕ್ಕೆ ಇಳಿಸಿ ನೋವು ಮರೆಸಿ ಕಣ್ಣೀರು ಒರೆಸುವ ಕೆಲಸ ಮಾಡಿದರು. ಅದು ಬರೀ ಕವಿಗೋಷ್ಠಿ ಆಗಿರಲಿಲ್ಲ. ಅದು ನೊಂದ ಜೀವಗಳಿಗೆ ಸಾಂತ್ವನ ಹೇಳುವ ಕಾರ್ಯಕ್ರಮವಾಗಿ ಬದಲಾಗಿತ್ತು.

ದಸರಾ ಸಮಿತಿ ಅನುದಾನ ನೀಡದ ಕಾರಣ ಮಡಿಕೇರಿ ದಸರಾ ಪರ್ಯಾಯ ಕವಿಗೋಷ್ಠಿ ಸಮಿತಿ ಬುಧವಾರ ‘ಸಂತ್ರಸ್ತರಿಗೆ ಸಾಂತ್ವನ’ ಹೆಸರಿನಲ್ಲಿ ಬಂದವರಿಗೆ ತಣ್ಣೀರು ಶಿರೋನಾಮೆ ಅಡಿ ಕವಿಗೋಷ್ಠಿ ಅಯೋಜಿಸಿತ್ತು.

ಕಾಫಿ, ಟೀ, ಆಹ್ವಾನ ಪತ್ರಿಕೆ, ಗೌರವ ಧನ, ಊಟದ ವ್ಯವಸ್ಥೆ ಯಾವುದೂ ಇರಲಿಲ್ಲ. ಸರಳವಾಗಿ ಕವಿಗೋಷ್ಠಿ ನಡೆಯಿತು.

‘ಕೊಡಗಿನ ಒಡಲು ಗುಡುಗಿತು
ಕೆನ್ನೀರ ಜಲಸ್ಫೋಟ
ಮಾಧ್ಯಮಗಳಲ್ಲಿ ವರದಿ ಕೊಡಗು ನಲುಗಿದೆ– ಮುಳುಗಿದೆ ಎಂದು
ಮಮತೆಯ ಮನಸುಗಳು ಹರಿದು ಬಂದವು
ಧನ– ಧಾನ್ಯಗಳೊಂದಿಗೆ
ಬಿಲದಿಂದ ಹೊರಟವು ಇಲಿ, ಹೆಗ್ಗಣಗಳು...’

ಎಂಬ ಅಲ್ಲಾರಂಡ ವಿಠಲ್‌ ನಂಜಪ್ಪ ಅವರ ಕವಿತೆ ಎಲ್ಲರ ಮನತಟ್ಟಿತು. ಪ್ರವಾಹದ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳು ಹರಿದು ಬಂದರೂ ಅದು ಅನ್ಯರ ಪಾಲಾಗಿದ್ದಕ್ಕೆ ಕವಿತೆ ಮೂಲಕ ಚಾಟಿ ಬೀಸಿದರು.

ಯುವ ಸಾಹಿತಿ ಶ್ರೀನಿವಾಸ್‌ ಅವರು,

ಶುರುವಾಯ್ತು...! ಶುರುವಾಯ್ತು ಮರಗಳ ಹನನ
ಬೆಟ್ಟದಂಚಿನ ದಹನ
ಗಗನಕ್ಕೇರಲು ಸೈಟು
ಬೆಟ್ಟದ ಮೇಲೂ ವ್ಯೂ ಪಾಯಿಂಟ್‌
ಅದಕ್ಕಗಲ ರಸ್ತೆ
ಪ್ರಕೃತಿ ಮಾತೆಯ ಎದೆ ಮೇಲಿಂದಲೇ...’
ಎಂದು ತಮ್ಮ ಕವನ ವಾಚಿಸಿದರು.

ರಮೇಶ್‌ ಉತ್ತಪ್ಪ ಅವರು,

‘ಕಾಪಾಡಮ್ಮ ಪ್ರಕೃತಿ ಮಾತೆಯೇ ಕಾಪಾಡು’ ಎಂಬ ಶೀರ್ಷಿಕೆ ಅಡಿ
‘ಅಂದು ಕಾಲೂರಿಕೊಂಡೇ ನಡೆದಾಡಿದ್ದೇ ಕಾಲೂರಿನಲ್ಲಿ
ಪ್ರಕೃತಿ ಸಿರಿ ಕಂಡು ಹೆಮ್ಮೆಪಟ್ಟಿದ್ದೆ ಹೆಮ್ಮೆತಾಳುವಿನಲ್ಲಿ
ವನಸಿರಿ ಕಂಡು ಮೇಘದಲ್ಲಿ ತೇಲುತ್ತಿದ್ದೆ ಮೇಘತಾಳುವಿನಲ್ಲಿ
ಅಮ್ಮನ ಮಡಿಲಿನಲ್ಲಿ ನಿದ್ರಿಸುತ್ತಿದ್ದೆ ಮುಕ್ಕೋಡ್ಲಿನಲ್ಲಿ
ಹಾಲು ಕುಡಿಯಬೇಕೆನಿಸುತ್ತಿತ್ತು ಹಾಲೇರಿಯಲ್ಲಿ...’

ಎಂದು ಪ್ರಕೃತಿ ವಿಕೋಪ ಸಂದರ್ಭ ದಲ್ಲಿ ಪುಟ್ಟ ಬಾಲಕನ ನೋವನ್ನು ಕವಿತೆ ಮೂಲಕ ಅಭಿವ್ಯಕ್ತಪಡಿಸಿದರು. ಆಗ ಎಲ್ಲರ ಕಣ್ಣಾಲಿಗಳೂ ತೇವಗೊಂಡವು. ಇನ್ನು ವಿಘ್ನೇಶ್‌ ಭೂತನಕಾಡು ಸಹ ‘ಇದ್‌ ನಡಂದದ್‌ ನೆಸಂದಾನಾ’ (ಇದು ನಡೆದಿದ್ದು ನಿಜಾನಾ?) ಎಂದು ತಮಿಳು ಕವಿತೆ ವಾಚಿಸಿದರು.

ಅದಕ್ಕೂ ಮೊದಲು ಕವಿಗೋಷ್ಠಿ ಸಮಿತಿ ಅಧ್ಯಕ್ಷ ರಮೇಶ್‌ ಉತ್ತಪ್ಪ ಮಾತನಾಡಿ, ‘ದಸರಾ ಸಮಿತಿ ಆಶ್ರಯದಲ್ಲಿ ಇದುವರೆಗೂ ಬಹುಭಾಷಾ ಕವಿಗೋಷ್ಠಿ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಆದರೆ, ಈ ಕವಿಗೋಷ್ಠಿಯನ್ನೇ ರದ್ದು ಮಾಡಲಾಯಿತು. ಅದರ ಪ್ರತಿಭಟನೆಯ ಸಂಕೇತವಾಗಿ ಈ ಕವಿಗೋಷ್ಠಿ ಆಯೋಜಿಸಲಾಗಿದೆ’ ಎಂದು ಹೇಳಿದರು.

‘ದಸರಾ ಅದ್ಧೂರಿ ಆಗಲಿದೆ ಎಂಬ ಕಾರಣಕ್ಕೆ ಕ್ರೀಡಾಕೂಟ, ಕವಿಗೋಷ್ಠಿ ರದ್ದು ಮಾಡಿದ್ದೇವೆ ಎಂದು ನೆಪ ಹೇಳಲಾಯಿತು. ಸಾಹಿತ್ಯ ಚಟುವಟಿಕೆಯ ಮೂಲಕ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬಹುದಿತ್ತು. ವ್ಯವಸ್ಥೆ ಸರಿ ಮಾಡಲು ಮುಂದಾಗಿದ್ದಕ್ಕೆ ನಮ್ಮನ್ನೇ ಹೊರಗಿಡುವ ಪ್ರಯತ್ನಗಳು ನಡೆದವು’ ಎಂದು ಆಕ್ರೋಶ ಹೊರಹಾಕಿದರು.

ಪತ್ರಕರ್ತ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ದಸರಾ ಸಮಿತಿಯಲ್ಲಿ ಸಮನ್ವಯತೆ ಕೊರತೆಯಿದೆ. ಅದೇ ಕಾರಣಕ್ಕೆ ಅಧ್ವಾನ ಆಗಿದೆ ಎಂದು ದೂರಿದರು.

‘ಮನಸ್ಸಿದ್ದರೆ ಯಾವುದೇ ಅನುದಾನ ಬೇಕಿಲ್ಲ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಾತಿ ಭೇದ ಮಾಡದೆ ಸಂತ್ರಸ್ತರ ರಕ್ಷಣೆ ಮಾಡಲಾಯಿತು. ಅವರಿಗೋಸ್ಕರ ಈ ಕಾರ್ಯಕ್ರಮ ಮಾಡಲು ಅನುದಾನ ನೀಡಬೇಕಿತ್ತು. ಆದರೆ, ದಸರಾ ಸಮಿತಿ ಎಡವಿದೆ’ ಎಂದು ದೂರಿದರು.

ಚಾಮುಂಡೇಶ್ವರಿ ಬಡಾವಣೆ, ಇಂದಿರಾ ನಗರಗಳು ಅಪಾಯದಲ್ಲಿವೆ ಎಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಪದೇ ಪದೇ ಎಚ್ಚರಿಸುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿಲ್ಲ ಎಂದು ಸವಿತಾ ದೂರಿದರು.

ಸಾಹಿತಿ ನಾಗೇಶ್‌ ಕಾಲೂರು ಮಾತನಾಡಿ, ‘ಅಕ್ಷರ ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸರಸ್ವತಿ ಆರಾಧಿಸದಿದ್ದರೆ ನವರಾತ್ರಿ ಅಪೂರ್ಣ ಆಗಲಿದೆ’ ಎಂದು ದಸರಾ ಸಮಿತಿಯ ನಡೆಗೆ ಆಕ್ಷೇಪಿಸಿದರು.

ಕೊಡಗು ಜಿಲ್ಲೆಯಲ್ಲಿ ಆದ ಅನಾಹುತವನ್ನು ಮಳೆಯಿಂದ ಆಗಿರುವ ಹಾನಿಯೆಂದು ಹೇಳುತ್ತಿದ್ದಾರೆ. ಆದರೆ, ಪ್ರಕೃತಿ ವಿಕೋಪದಿಂದ ಆಗಿರುವ ದುರಂತ ಇದು ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಎಂ.ಎನ್‌. ನಾಸೀರ್‌ ಹಾಜರಿದ್ದರು. ಕಿಶೋರ್‌ ರೈ ಕತ್ತಲೆಕಾಡು ನಿರೂಪಿಸಿದರು. ಆನಂದ್‌ ಕೊಡಗು ನಿರ್ಣಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT