ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಅಧಿಕಾರಿಗಳಿಗೆ ಚಾಟಿ ಬೀಸಿದ ಸಚಿವರು, ಶಾಸಕರು

ಕೆಡಿಪಿ ಸಭೆಯಲ್ಲಿ ಚಳಿಯಲ್ಲೂ ಬೆವರಿದ ಅಧಿಕಾರಿಗಳು
Published 7 ಜುಲೈ 2024, 5:24 IST
Last Updated 7 ಜುಲೈ 2024, 5:24 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಮುಂದೆ ದಿನ ಓಡಾಡುವಾಗ ನಿಮಗೇನು ಅನ್ನಿಸುವುದಿಲ್ಲವೇ? ನ್ಯಾಯವಾಗಿ ಒಂದೆರಡು ಮರ ಕಡಿಯುವ ರೈತರಿಗೆ ಕಿರುಕುಳ, ನೂರಾರು ಮರ ಕಡಿಯುತ್ತಿದ್ದರೂ ಸುಮ್ಮನಿರುವುದು ತರವೇ?  ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೀಗೆ, ನಾನಾ ಪ್ರಶ್ನೆಗಳಿಂದ ತಿವಿದು, ಎಚ್ಚರಿಸಿದರು. ಜೊತೆಗೆ, ಮುಂಗಾರು ಮುಗಿಯುವವರೆಗೂ ಅಧಿಕಾರಿಗಳಿಗೆ ರಜೆ ನೀಡದಂತೆಯೂ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ, ಅರಣ್ಯ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತೀವ್ರತರವಾದ ತರಾಟೆಗೆ ಒಳಗಾದರು. ಈ ಇಲಾಖೆಗಳ ಪ್ರಗತಿ ತೀರಾ ನಿರಾಶದಾಯಕ ಎಂದು ಸಚಿವರು ಅತೃಪ್ತಿ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ ಅವರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಈ ಮೂವರೂ ಇದೇ ರೀತಿ ಕಾರ್ಯನಿರ್ವಹಿಸಿದರೆ ಅಮಾನತುಗೊಳಿಸುವ ಎಚ್ಚರಿಕೆಯನ್ನೂ ನೀಡಿದರು.

ಇಲಾಖೆ ವತಿಯಿಂದ ಕೊಡವ ಹೆರಿಟೇಜ್, ಮಿನಿ ವಿಧಾನಸೌಧ, ಸುವರ್ಣ ಕರ್ನಾಟಕ ಸಮುಚ್ಛಯ ಭವನ, ಮಂಗಳೂರು ರಸ್ತೆಯ ತಡೆಗೋಡೆ ಸೇರಿದಂತೆ ಹಲವು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಹಣವಿದ್ದರೂ ಸಹ ಕಾಮಗಾರಿಗಳನ್ನು ಏಕೆ ಪೂರ್ಣಗೊಳಿಸಿಲ್ಲ ಎಂದು ತರಾಟೆ ತೆಗೆದುಕೊಂಡ ಸಚಿವರು ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಖುದ್ದು ಪರಿಶೀಲನೆ ನಡೆಸಿ ನಿಖರ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.  

ಶಾಸಕ ಮಂತರ್‌ಗೌಡ ಅವರಂತೂ, ‘ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಮುಂದೆ ದಿನ ಓಡಾಡುವಾಗ ನಿಮಗೇನು ಅನ್ನಿಸುವುದಿಲ್ಲವೇ?’ ಎಂದು ಖಾರವಾಗಿ ಪ್ರಶ್ನಿಸಿದರು. ‘ಚೆನ್ನಾಗಿರುವ ರಸ್ತೆಗೆ ರಾತ್ರಿ ವೇಳೆ ನಮ್ಮ ಗಮನಕ್ಕೆ ತಾರದೆ ಡಾಂಬರು ಹಾಕುತ್ತೀರಿ. ಇದೆಯೇ ಏನು ನಿಮ್ಮ ಕಾರ್ಯ ವೈಖರಿ’ ಎಂದು ಕಿಡಿಕಾರಿದರು.

ಶಾಸಕ ಎ.ಎಸ್.ಪೊನ್ನಣ್ಣ ಅವರೂ, ‘ಒಮ್ಮೆ ಕರಿಕೆಗೆ ಬಸ್‌ನಲ್ಲಿ ಪ್ರಯಾಣ ಮಾಡಿ, ಜನರು ಹೇಗೆ ಕುಳಿತುಕೊಳ್ಳುತ್ತಾರೆ ಎಂಬುದನ್ನಾದರೂ ನೋಡಿದ ಮೇಲೆ ಅಲ್ಲಿ ರಸ್ತೆಬದಿಗೆ ಚಾಚಿಕೊಂಡಿರುವ ಮುಳ್ಳುಗಂಟಿ ಗಿಡಗಳನ್ನು ಕಡಿಯುತ್ತೀರೇನೋ’ ಎಂದು ಚಾಟಿ ಬೀಸಿದರು.

ಸಭೆಯ ಆರಂಭದಲ್ಲೇ ಪ್ರಸ್ತಾಪವಾದ ಡೆಂಗಿ ರೋಗದ ಕುರಿತ ಚರ್ಚೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ವಿರುದ್ಧ ಭೋಸರಾಜು ಅಸಮಾಧಾನ ಹೊರ ಹಾಕಿದರು. ಜನವರಿಯಿಂದ ಇಲ್ಲಿಯವರೆಗೂ ಕೇವಲ 915 ಮಂದಿಯನ್ನಷ್ಟೇ ಡೆಂಗಿ ಪರೀಕ್ಷೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಮಾಸಿಕ ಗುರಿ ನಿಗದಿಪಡಿಸಿ ಪರೀಕ್ಷಿಸಲು ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಜೊತೆಗೆ, ಈಗ ದಾಖಲಾಗಿರುವ ಮಕ್ಕಳ ಪ್ಲೇಟ್‌ಲೇಟ್‌ಗಳ ಸಂಖ್ಯೆಯ ಮಾಹಿತಿಯನ್ನೂ ಪಡೆದರು.

ಪ್ರಾಕೃತಿಕ ವಿಕೋಪಗಳ ಕುರಿತ ಚರ್ಚೆಯ ವೇಳೆ ‘ಶೂನ್ಯ ಗಾಯಾಳು’ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕ‌ಟ್ ರಾಜಾ ವಿವರಣೆ ನೀಡಿದರು. ಜೊತೆಗೆ, ಈಗಾಗಲೇ ಜಲಪ್ರವೇಶ ಹಾಗೂ ಗಾಜಿನ ಸೇತುವೆಗಳನ್ನು ನಿಷೇಧಿಸಿರುವ ಕುರಿತು ಮಾಹಿತಿ ನೀಡಿದರು.

ವಿರಾಜಪೇಟೆ ತಾಲ್ಲೂಕಿನ ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ, ತೋರ, ಪ್ರವಾಹ ಪೀಡಿತ ಪ್ರದೇಶಗಳಾದ ಬೇತ್ರಿ, ಕರಡಿಗೋಡು, ಗುಹ್ಯ ಮತ್ತಿತರ ಕಡೆಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಪೊನ್ನಣ್ಣ ಅವರು ಸೂಚಿಸಿದರು.

ಅತಿಥಿ ಶಿಕ್ಷಕರು ಸಿಗದಿರುವ ಶಾಲೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರಿಸಲು ಡಿಡಿಪಿಐ ರಂಗಧಾಮಪ್ಪ ಪರದಾಡಿದರು. ಜಿಲ್ಲಾಸ್ಪತ್ರೆಯ ಹೊಸ ಕಟ್ಟಡಕ್ಕೆ ಪುರಾತತ್ವ ಇಲಾಖೆಯ ಅನುಮತಿ ಪಡೆದಿಲ್ಲ ಎಂಬ ವಿಷಯ ತಿಳಿಯುತ್ತಲೇ ಕೋಪಗೊಂಡ ಸಚಿವರು, ‘ಕಟ್ಟಡ ನಿರ್ಮಾಣದ ವೆಚ್ಚವನ್ನು ನಿಮ್ಮಿಂದಲೇ ವಸೂಲು ಮಾಡುತ್ತೇವೆ’ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ವಿಶಾಲ್ ಅವರಿಗೆ ಎಚ್ಚರಿಕೆಯನ್ನೂ ನೀಡಿದರು.

ಸಮಿತಿ ಸದಸ್ಯರಾದ ಕಾವೇರಿ, ಸುನಿತಾ ಹಾಗೂ ಇತರರು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Highlights - ಮುಂಗಾರು ಮುಗಿಯುವವರೆಗೂ ಅಧಿಕಾರಿಗಳಿಗಿಲ್ಲ ರಜೆ ಮುಂಜಾಗ್ರತೆ ವಹಿಸಲು ಸೂಚನೆ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ

Cut-off box - ಅತಿ ನೋವಿನಿಂದ ಹೇಳುತ್ತಿರುವ ಕೊಡಗಿನ ಪರಿಸರ ಉಳಿಯದು; ಪೊನ್ನಣ್ಣ ಅರಣ್ಯ ಇಲಾಖೆಯ ಗಮನಕ್ಕೆ ಬಾರದೇ ಮುನ್ರೋಟ್ ವಲಯದಲ್ಲಿ ನೂರಾರು ಮರಗಳನ್ನು ಕಡಿದ ವಿಚಾರ ಪ್ರಸ್ತಾಪಿಸಿದ ಶಾಸಕ ಎ.ಎಸ್.ಪೊನ್ನಣ್ಣ ‘ಅರಣ್ಯಾಧಿಕಾರಿಗಳು ಇದೇ ರೀತಿ ಕಾರ್ಯನಿರ್ವಹಿಸಿದರೇ ಮುಂದೆ ನಮ್ಮ ಮಕ್ಕಳ ಕಾಲಕ್ಕೆ ಕೊಡಗಿನ ಪರಿಸರ ಉಳಿಯುವುದಿಲ್ಲ. ಈಗಲೇ ನಮಗೆ ಮುಂಚಿನ ಕೊಡಗಿನ ಪರಿಸರ ಅನುಭವಕ್ಕೆ ಸಿಗುತ್ತಿಲ್ಲ’  ಎಂದು ಬೇಸರ ವ್ಯಕ್ತಪಡಿಸಿದರು. ಒಂದೆರಡು ಮರಗಳನ್ನು ಕಡಿಯಬೇಕು ಎಂದು ಅರ್ಜಿ ಹಿಡಿದು ಬರುವ ರೈತರನ್ನು ಅವರ ಚಪ್ಪಲಿ ಸವೆದು ಹೋಗುವವರೆಗೂ ಕಚೇರಿಗೆ ಅಲೆಸುತ್ತೀರಿ. ಮತ್ತೊಂದು ಕಡೆ ರಾಜಾರೋಷವಾಗಿ ನೂರಾರು ಮರಗಳನ್ನು ಕಡಿದರೂ ಸುಮ್ಮನಿರುತ್ತೀರಿ ಎಂದು ಕಿಡಿಕಾರಿದರು. ಪ್ರತಿಕ್ರಿಯಿಸಿದ ಡಿಸಿಎಫ್ ಜಗನ್ನಾಥ್ ‘ಮುನ್ರೋಟ್ ವಲಯದಲ್ಲಿ ತಪ್ಪಾಗಿದೆ. ಅದಕ್ಕೆ ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಮಾನತುಪಡಿಸಲಾಗಿದೆ. ಮಾತ್ರವಲ್ಲ ಮರ ಕಡಿದವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT