ಬುಧವಾರ, ಏಪ್ರಿಲ್ 21, 2021
23 °C
ಸಂತ್ರಸ್ತರ ಕಣ್ಣೀರು ಒರೆಸಲು ಮುಂದಾದ ಕೊಡಗಿನ ಅಬ್ದುಲ್‌ ಹಾಜಿ

ನಿರಾಶ್ರಿತರಿಗಾಗಿ ಕಾಫಿ ತೋಟ ದಾನ!

ರೆಜಿತ್ ಕುಮಾರ್ ಗುಹ್ಯ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ (ಕೊಡಗು): ಪ್ರವಾಹದಿಂದಾಗಿ, ಕಾವೇರಿ ನದಿ ದಡದಲ್ಲಿ ವಾಸಿಸುತ್ತಿದ್ದ ಹಲವು ಗ್ರಾಮಗಳ ನೂರಾರು ಮನೆಗಳು ಕುಸಿದಿವೆ. ವಿರಾಜಪೇಟೆ ತಾಲ್ಲೂಕಿನ ಕೊಂಡಂಗೇರಿಯಲ್ಲಿ ಪ್ರವಾಹ ದೊಡ್ಡ ಅನಾಹುತವನ್ನೇ ಸೃಷ್ಟಿಸಿ ಬಿಟ್ಟಿದೆ. ಮನೆಯ ಜತೆಗೆ ದಾಖಲೆಗಳು, ಹಣ, ಮಕ್ಕಳ ಮದುವೆಗೆ ಖರೀದಿಸಿದ್ದ ಹೊಸ ಬಟ್ಟೆ ಹಾಗೂ ಚಿನ್ನಾಭರಣ ಎಲ್ಲವೂ ನೀರುಪಾಲಾಗಿವೆ. ಆ ಗ್ರಾಮದಲ್ಲಿ ನಾಲ್ಕು ಮಂದಿಗೆ ಮದುವೆಯೂ ನಿಶ್ಚಯವಾಗಿತ್ತು; ಅವರ ಕನಸೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. 

ಈ ಸಂತ್ರಸ್ತರ ಬದುಕು ಹಸನು ಮಾಡಲು, ಅವರ ಕಣ್ಣೀರು ಒರೆಸಲು ಹಲವರು ಮಿಡಿಯುತ್ತಿದ್ದಾರೆ. ತಮ್ಮಿಂದ ಆಗಬಹುದಾದ ನೆರವು ನೀಡಲು ಧಾವಿಸುತ್ತಿದ್ದಾರೆ.ಅದೇ ಗ್ರಾಮದ ಎಚ್.ಎಂ.ಅಬ್ದುಲ್‌ ಹಾಜಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಒಂದೂವರೆ ಎಕರೆ ಕಾಫಿ ತೋಟವನ್ನೇ ನಿರಾಶ್ರಿತರ ನಿವೇಶನಕ್ಕಾಗಿ ದಾನ ನೀಡಲು ನಿರ್ಧರಿಸಿದ್ದಾರೆ. ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡಲು ಮುಂದಾಗಿದ್ದಾರೆ.

ಅಬ್ದುಲ್‌ ಅವರಿಗೆ ಗ್ರಾಮದಲ್ಲಿ ಸ್ವಲ್ಪ ಕಾಫಿ ತೋಟ ಇದೆ. ಅದರಲ್ಲಿಯೇ ಒಂದೂವರೆ ಎಕರೆ ತೋಟವನ್ನು ನಿರಾಶ್ರಿತರಿಗಾಗಿ ಬಡಾವಣೆ ನಿರ್ಮಿಸಲು ನೀಡಲು ನಿರ್ಧರಿಸಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ತೋಟದಲ್ಲಿ ಕಾಫಿ ಗಿಡಗಳಿವೆ; ಕೆಲವು ವರ್ಷಗಳಿಂದ ಫಸಲೂ ಸಿಗುತ್ತಿದೆ.

ದಾನ ನೀಡುವ ಕುರಿತು ತಹಶೀ ಲ್ದಾರ್‌ ಜೊತೆಗೂ ಚರ್ಚಿಸಿದ್ದಾಗಿ ಸ್ಥಳೀಯ ಜಮಾತ್ ಅಧ್ಯಕ್ಷ ಕೆ.ಕೆ.ಯೂಸುಫ್ ಹಾಜಿ ತಿಳಿಸಿದರು. 

ಹಾಜಿ ಕಾರ್ಯಕ್ಕೆ ಶ್ಲಾಘನೆ: ನೋವಿನಲ್ಲಿರುವ ಬಡ ಕುಟುಂಬಗಳಿಗೆ ತನ್ನ ಸ್ವಂತ ಜಾಗದಲ್ಲಿ ನಿವೇಶನ ಒದಗಿ ಸಲು ಮುಂದಾಗಿರುವ ಅಬ್ದುಲ್‌ ಹಾಜಿ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ದುಬೈನಲ್ಲಿ ನೆಲೆಸಿರುವ ಗ್ರಾಮದ ಯುವಕರು, ಸಾಮಾಜಿಕ ಜಾಲತಾಣಗಳಲ್ಲಿ ಹಾಜಿ ಕೆಲಸ ಮಾದರಿಯಾದುದು ಎಂದು ಬಣ್ಣಿಸಿದ್ದಾರೆ. ಜಿಲ್ಲೆಯ ದಾನಿಗಳೂ ಆಯಾ ಗ್ರಾಮದಲ್ಲಿ ಮನೆ ಕಳೆದುಕೊಂಡ ವರಿಗೆ ನಿವೇಶನ ಒದಗಿಸಲು ಮುಂದಾಗಬೇಕೆಂಬ ಕೋರಿಕೆಗಳೂ ಬರುತ್ತಿವೆ.  ಕೊಂಡಂಗೇರಿ ಪಟ್ಟಣ ಪೂರ್ಣ ಜಲಾವೃತವಾಗಿತ್ತು. ಪಟ್ಟಣದಲ್ಲಿ ನಿಲುಗಡೆ ಮಾಡಿದ್ದ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.

* ಬಡವರು ಹಲವು ವರ್ಷದಿಂದ ಇಲ್ಲಿ ವಾಸಿಸುತ್ತಿದ್ದರು. ಇದೀಗ ಆ ಮನೆಗಳೂ ಕುಸಿದಿದ್ದು, ಜಾಗ ವಿಲ್ಲದೇ ಸಂತ್ರಸ್ತರಾಗಿದ್ದಾರೆ. ಉಳ್ಳವರು ಅವರ ಕಣ್ಣೀರು ಒರೆಸ ಬೇಕು

- ಎಚ್.ಎಂ.ಅಬ್ದುಲ್‌ ಹಾಜಿ, ದಾನಿ

*ನಿವೇಶನ ನೀಡಲು ಮುಂದಾ ಗಿರುವ ಹಾಜಿಯವರ ಕಾರ್ಯ ಪ್ರಶಂಸನೀಯ. ಸರ್ಕಾರ ಕೂಡ ಆಯಾ ಪ್ರದೇಶದ ಸರ್ಕಾರಿ ಜಾಗ ಗುರುತಿಸಿ ನಿರಾಶ್ರಿತರಿಗೆ ಸೂರು ಕಲ್ಪಿಸಬೇಕು

-ಅಂದ್ರಮಾನ್, ಕೊಂಡಂಗೇರಿ ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು