ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರಿಗೆ ಗಿರಿಭತ್ಯೆ ಸೌಲಭ್ಯಕ್ಕೆ ಕ್ರಮ

ಶಿಕ್ಷಕರ ಸಮ್ಮೇಳನದಲ್ಲಿ ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಸದಸ್ಯ ಎಸ್. ಎಲ್. ಭೋಜೆಗೌಡ ಭರವಸೆ
Last Updated 5 ಡಿಸೆಂಬರ್ 2018, 17:27 IST
ಅಕ್ಷರ ಗಾತ್ರ

ಕುಶಾಲನಗರ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರಿಗೆ ಗಿರಿಭತ್ಯೆ ಸೌಲಭ್ಯ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರುವುದಾಗಿ ನೈರುತ್ಯ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ ಹೇಳಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕೊಡಗು ಘಟಕದ ವತಿಯಿಂದ ಇಲ್ಲಿನ ರೈತ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

2006ರ ನಂತರ ನೇಮಕಗೊಂಡ ಸರ್ಕಾರಿ ನೌಕರಿಗೆ ಜಾರಿಗೆ ತಂದಿರುವ ಎನ್.ಪಿ.ಎಸ್.ಪದ್ಧತಿಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂಬ ಒತ್ತಾಯವಿದೆ. ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿದ್ದು, ಸಾಧಕ ಬಾಧಕಗಳ ಬಗ್ಗೆ ಕೂಡಲೇ ವರದಿ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಿತಿಗೆ ಸೂಚನೆ ನೀಡಿದ್ದಾರೆ. ಸಮಿತಿ ವರದಿ ಬಂದ ನಂತರ ಸರ್ಕಾರ ನೌಕರರ ಪರವಾದ ನಿಲುವು ಕೈಗೊಳ್ಳಲಿದೆ ಎಂದು ಹೇಳಿದರು.

ಸಂಸದರ, ಶಾಸಕರ ಹಾಗೂ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ವೇತನವನ್ನು ಹೆಚ್ಚಳ ಮಾಡಲು ಯಾವುದೇ ಚರ್ಚೆ ಇಲ್ಲ. ಆದರೆ ದೇಶದ ಭವಿಷ್ಯ ರೂಪಿಸುವ ಶಿಕ್ಷಕರಿಗೆ ವೇತನ ಹೆಚ್ಚಳ ಮಾಡಲು ಮೀನಾಮೇಷ ಏಣಿಸುವ ಜೊತೆಗೆ ಅನಗತ್ಯ ಚರ್ಚೆ ಹುಟ್ಟು ಹಾಕುವ ಸಂಸ್ಕೃತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ವ್ಯವಸ್ಥೆ ಬದಲಾಗಬೇಕು ಎಂದರು.

ವರ್ಗಾವಣೆ ಸರ್ಕಾರದ ನಿಯಮವಾಗಿದೆ. ಆದರೆ ಶಿಕ್ಷಕರ ವರ್ಗಾವಣೆ ನೀತಿಯಲ್ಲಿರುವ ನೂನ್ಯತೆಯನ್ನು ಸರಿಪಡಿಸುವ ಕೆಲಸವನ್ನು ಮೊದಲು ಮಾಡಬೇಕಾಗಿದೆ. 70 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎಂಬ ಅನುಪಾತವನ್ನು ಬದಲಾವಣೆ ಮಾಡಿ 50 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎಂಬ ಅನುಪಾತವನ್ನು ವ್ಯವಸ್ಥೆ ಜಾರಿಗೆ ತರಬೇಕು. ಆಗ ಹೆಚ್ಚುವರಿ ಶಿಕ್ಷಕರ ಸಮಸ್ಯೆ ಉಂಟಾಗುವುದಿಲ್ಲ. ಜೊತೆಗೆ ಕೋರಿಕೆ, ಪರಸ್ಪರ ಹಾಗೂ ಪತಿ ಪತ್ನಿ ವರ್ಗಾವಣೆಯನ್ನು ಮಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಮಂಜುನಾಥ್, ವಿದ್ಯಾರ್ಥಿ ವೇತನ ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವನ್ನು ಶಿಕ್ಷಕರಿಗೆ ಕೊಟ್ಟಿದ್ದಾರೆ. ಹಾಗಾದರೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಕೆಲಸವೇನು ಎಂದು ಪ್ರಶ್ನಿಸಿದರು.

ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಕೆ.ಮೆಹಬೂಬ್ ಸಾಬ್ ಮಾತನಾಡಿ, ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ ಹಾಗೂ ಜನಸಂಖ್ಯೆ ಕೊರತೆ ಹಿನ್ನೆಲೆಯಲ್ಲಿ ಅನುದಾನಿತ ಶಾಲೆಗಳಲ್ಲಿ ನಿಗದಿ ಪಡಿಸಿರುವ ಕನಿಷ್ಠ 25 ವಿದ್ಯಾರ್ಥಿ ಸಂಖ್ಯೆಯನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು.

ಕೊಡಗು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತಾನಾಡಿದರು.

ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಡೋ, ಉಪ ನಿರ್ದೇಶಕ(ಅಭಿವೃದ್ಧಿ) ವಾಲ್ಟೆರ್ ಹಿಲೇರಿ ಡಿ ಮೆಲ್ಲೊ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ರವಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಪ್ರಸನ್ನ, ಉಪನ್ಯಾಸಕ ಸಂಘದ ಅಧ್ಯಕ್ಷ ಫಿಲೀಪ್ ವಾಸ್, ಕಾರ್ಯದರ್ಶಿ ಹಂಡ್ರಂಗಿ ನಾಗರಾಜು, ತಾಲ್ಲೂಕು ಘಟಕದ ಅಧ್ಯಕ್ಷರಾದ ಡಿ.ಪಿ.ಧರ್ಮಪ್ಪ, ಕೆ.ಪಿ.ಮಹೇಶ್, ಕಾರ್ಯದರ್ಶಿಗಳಾದ ನಾಗರಾಜು, ಚಂದನ, ಪಿ.ಎಸ್.ರವಿಕೃಷ್ಣ ಉಪಸ್ಥಿತರಿದ್ದರು.

ಶಿಕ್ಷಕರಾದ ಜಿ.ಕೆ.ಪಾರ್ವತಿ ತಂಡದವರು ಪ್ರಾರ್ಥಿಸಿದರು. ಎಚ್.ಜಿ.ಕುಮಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT