ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿ ಪಕ್ಕದಲ್ಲೇ ಶೌಚಾಲಯ ನಿರ್ಮಾಣ

ಮಡಿಕೇರಿ ನಗರಸಭೆಯಿಂದ ಮತ್ತೊಂದು ಅವಾಂತರ
Last Updated 25 ಜೂನ್ 2019, 13:26 IST
ಅಕ್ಷರ ಗಾತ್ರ

ಮಡಿಕೇರಿ: ನಗರಸಭೆಯ ವಾರ್ಡ್‌ ನಂಬರ್‌ 20ರ ಕನ್ನಂಡಬಾಣೆ ಬಡಾವಣೆಯಲ್ಲಿ ಸಾವಿರಾರು ಜನರಿಗೆ ಕುಡಿಯುವ ನೀರು ಪೂರೈಸುವ ತೆರೆದ ಬಾವಿಯ ಪಕ್ಕದಲ್ಲಿಯೇ ಶೌಚಾಲಯ ನಿರ್ಮಿಸಿ ನಗರಸಭೆ ಅವಾಂತರ ಸೃಷ್ಟಿಸಿದೆ.

ಇದು ಕಲುಷಿತ ನೀರು ಪೂರೈಕೆಗೆ ದಾರಿ ಮಾಡಿಕೊಡಲಿದೆ ಎಂದು ನಗರಸಭಾ ಮಾಜಿ ಸದಸ್ಯ ಕೆ.ಜಿ.ಪೀಟರ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗೂ ದೂರು ನೀಡಿರುವ ಅವರು, ‘ಯಾವುದೇ ಕಾರಣಕ್ಕೂ ಶೌಚಾಲಯದ ಉಪಯೋಗಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದ್ದಾರೆ.

ಕುಡಿಯುವ ನೀರು ಸರಬರಾಜು ಮಾಡುವ ನಗರಸಭಾ ಸಿಬ್ಬಂದಿಗೆ ಇಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಇದು ಅವೈಜ್ಞಾನಿಕ ಕ್ರಮ. ಬಾವಿ ಮತ್ತು ಶೌಚಾಲಯಕ್ಕೆ ಕೇವಲ ನಾಲ್ಕು ಅಡಿಯಷ್ಟು ಅಂತರವಿದೆ. ಶೌಚಾಲಯದ ಕಲುಷಿತ ನೀರು ಬಾವಿಯನ್ನು ಸೇರುವ ಸಾಧ್ಯತೆಯಿದೆ. ಕನ್ನಂಡಬಾಣೆ, ದೇಚೂರು, ಪುಟಾಣಿನಗರ, ರಾಘವೇಂದ್ರ ದೇವಾಲಯ ವ್ಯಾಪ್ತಿ, ಜಿಲ್ಲಾ ಆಸ್ಪತ್ರೆ ಸೇರಿದಂತೆ ನಗರ ವಿವಿಧ ಬಡಾವಣೆಗಳಿಗೆ ಇದೇ ಬಾವಿಯಿಂದ ನೀರು ಸರಬರಾಗುತ್ತಿದೆ. ಕುಡಿಯುವ ನೀರನ್ನು ಪೂರೈಸಲು ಕನ್ನಂಡಬಾಣೆಯಲ್ಲಿ ಇದು ಒಂದೇ ಬಾವಿಯಿದ್ದು, ಅದನ್ನು ಸಂರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪೀಟರ್ ಮನವಿಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ವಿರೋಧದ ನಡುವೆಯೂ ಶೌಚಾಲಯ ನಿರ್ಮಿಸಲಾಗಿದೆ. ನಗರಸಭಾ ಸದಸ್ಯನಾಗಿದ್ದಾಗ ಶೌಚಾಲಯ ನಿರ್ಮಿಸುವುದನ್ನು ವಿರೋಧಿಸಿದ್ದೆ. ಆದರೆ, ಇದಕ್ಕೆ ಬೆಲೆಯೇ ನೀಡದ ನಗರಸಭೆ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಶೌಚಾಲಯ ನಿರ್ಮಿಸಿದೆ ಎಂದು ಆರೋಪಿಸಿದ್ದಾರೆ.

ಕನ್ನಂಡಬಾಣೆ ಬಾವಿಯಿಂದ ಪ್ರಸ್ತುತ ಸರಬರಾಜು ಆಗುತ್ತಿರುವ ಕುಡಿಯುವ ನೀರು ಕೆಸರುಮಯವಾಗಿದೆ. ಕಲುಷಿತ ನೀರು ಸರಬರಾಜಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ, ಈ ಭಾಗದ ಜನರಿಗೆ ಶುದ್ಧ ನೀರನ್ನೇ ಒದಗಿಸಬೇಕು ಎಂದು ಪೀಟರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT