ಮಡಿಕೇರಿ: ಪರಿವರ್ತನೆಯ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109 ನೇ ಜನ್ಮ ದಿನಾಚರಣೆಯನ್ನು ಮಂಗಳವಾರ ಕೊಡಗು ಜಿಲ್ಲೆಯ ಹಲವೆಡೆ ಆಚರಿಸಲಾಯಿತು. ಮಡಿಕೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಹಾಗೂ ಅಹಿಂದ ಒಕ್ಕೂಟ, ಸಹಮತ ವೇದಿಕೆ ವತಿಯಿಂದ ಪ್ರತ್ಯೇಕ ಕಾರ್ಯಕ್ರಮಗಳು ಜರುಗಿದವು.
ಇಲ್ಲಿನ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಷಣದ ಜೊತೆಗೆ ಹಲವು ಕಾರ್ಯಕ್ರಮಗಳು ನಡೆಯಿತು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 11 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಚಿತ್ರಕಲೆ, ಪ್ರಬಂಧ ಸ್ಪರ್ಧೆ ವಿಜೇತರಾದ 15 ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಜೊತೆಗೆ, ಉತ್ತಮವಾಗಿ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ ಇದೇ ಸಂದರ್ಭದಲ್ಲಿ ಸನ್ಮಾನಿಸಿದ್ದು ವಿಶೇಷ ಎನಿಸಿತು.
‘ಸಮಾಜದಲ್ಲಿ ಕಟ್ಟಕಡೆಯವರು ಸಹ ಮುಖ್ಯವಾಹಿನಿಗೆ ಬರಬೇಕು ಎಂದು ಡಿ.ದೇವರಾಜ ಅರಸು ಅವರ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದರು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಹೇಳಿದರು.
ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಕೆ.ಆರ್.ಭಾರತಿ ಮಾತನಾಡಿ, ‘ಬಡವರ ಸಂಕಷ್ಟಕ್ಕೆ ಸ್ಪಂದಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಹರಿಕಾರರಾಗಿ ರಾಜ್ಯದಲ್ಲಿ ಪರಿವರ್ತನೆಯತ್ತ ಹೆಜ್ಜೆ ಹಾಕಿದರು. ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು’ ಎಂದು ತಿಳಿಸಿದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೃಷಿಕರು, ಬಡವರು, ನಿರ್ಗತಿಕರು, ಇತರರು ಓಡಾಡುವಂತೆ ಮಾಡಿದರು. ಸಾಲ ಮನ್ನಾ ಯೋಜನೆ, ಜೀತ ಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ಧತಿ ನಿಷೇಧ, ವೃದ್ಧಾಪ್ಯ ವೇತನ ಯೋಜನೆ ಜಾರಿ ಹೀಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಡಿ.ದೇವರಾಜ ಅರಸು ಅವರು ಮೌನಕ್ರಾಂತಿಯ ಹರಿಕಾರ ಎಂದರೆ ತಪ್ಪಾಗಲಾರದು ಎಂದು ನುಡಿದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಹೊನ್ನೇಗೌಡ, ಮುಖಂಡರಾದ ಮೇದಪ್ಪ, ಕೆ.ಟಿ.ಬೇಬಿ ಮ್ಯಾಥ್ಯೂ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪೌರಾಯುಕ್ತ ವಿಜಯ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಮಹಾದೇವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕೃಷ್ಣಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಶಿವಶಂಕರ ಭಾಗವಹಿಸಿದ್ದರು.
ಸನ್ಮಾನ ಬಹುಮಾನ ವಿತರಣೆ
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಎಂ.ಕೆ.ಸಂದೇಶ್ ಕೆ.ಜೆ.ಜೀವನ್ ಬಿ.ವೈ.ಕೃತಿ ಎಸ್.ಆರ್.ಶ್ರಾವ್ಯಾ ವಿ.ಎಸ್.ಭರತ್ ಎಂ.ಎಂ.ವಿಷ್ಣು ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿವಿಧ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾದ ಎ.ಎಸ್.ಚಂದನಾ ಬಿ.ಕೆ.ವೈಷ್ಣವಿ ಬಿ.ಎಂ.ಉದಿತ್ ಎಸ್.ಎಸ್.ವಿಶ್ವಾಸ ಕೆ.ಎಸ್.ವನಿತಾ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ದೀಕ್ಷಿತ್ ಎಂ.ಎಸ್.ಡಯಾನಾ ಬಿ.ಆರ್.ಯಶಸ್ವಿನಿ ಬಿ.ಡಿ.ಬಾಂಧವ್ಯ ಎ.ಆರ್.ಮೋಕ್ಷಾ ತಿಲಕ್ ವಿನೋದ್‌ಕುಮಾರ್ ಸಿ ಶೆಟ್ಟಿ ಎಂ.ಮಧುಶ್ರೀ ಎಂ.ವನಿತಾ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಶಿವಕುಮಾರ್ ಆಲಿಯಾ ನಿಶಾತ್ ಜೆ.ಎಸ್.ನಾಗಪ್ಪ ಸಿ.ಎಸ್.ಗಿರೀಶ ಕೆ.ವಿ.ಹೇಮಂತ್ ಬಿ.ಜೆ.ಪ್ರಭಾತ್ ಅವರಿಗೆ ಬಹುಮಾನ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ‘ಡಿ’ಗ್ರೂಪ್ ನೌಕರರಾದ ಭಾಗಮಂಡಲದ ಅಟಲ್‌ಬಿಹಾರಿ ವಾಜಪೇಯಿ ವಸತಿ ಶಾಲೆಯ ಭೋಜಮ್ಮ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.