ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರಕ್ಕೆ ಬಂತು ಕೆಎಸ್‌ಆರ್‌ಟಿಸಿ ಬಸ್ ಘಟಕ

₹ 7.5 ಕೋಟಿ ವೆಚ್ಚದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್‌ಗೌಡ
Published 8 ಮಾರ್ಚ್ 2024, 6:13 IST
Last Updated 8 ಮಾರ್ಚ್ 2024, 6:13 IST
ಅಕ್ಷರ ಗಾತ್ರ

ಕುಶಾಲನಗರ: ತಾಲ್ಲೂಕಿನ ಬಹುವರ್ಷದ ಬೇಡಿಕೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ ಘಟಕದ ಭೂಮಿಪೂಜೆಯನ್ನು ಗುರುವಾರ ಶಾಸಕ ಡಾ.ಮಂತರ್‌ಗೌಡ ನೆರವೇರಿಸಿದರು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿನ 4 ಎಕರೆ ಪ್ರದೇಶದಲ್ಲಿ ₹ 7.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುವ ಬಸ್ ಘಟಕ ಕಾಮಗಾರಿಗೆ ಅವರು ಚಾಲನೆ ನೀಡಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾರಿಗೆ ಡಿಪೊ ಸ್ಥಾಪನೆಯಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟು ಬೆಳವಣಿಗೆಯೊಂದಿಗೆ ಉದ್ಯೋಗವಕಾಶಗಳು‌ ಕೂಡ ಲಭಿಸಲಿವೆ ಎಂದರು.

ಘಟಕದ ನಿರ್ಮಾಣದ ವೇಳೆ ಹಾಗೂ ನಂತರ ಉದ್ಯೋಗ ಸೃಷ್ಟಿಸುವ ಸಂದರ್ಭದಲ್ಲಿ ಸಾರಿಗೆ ಇಲಾಖೆಯವರು ಸ್ಥಳೀಯರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದು ಶಾಸಕರು ಸಲಹೆ ನೀಡಿದರು.

ಜನಪರ ಕೆಲಸ ಕಾರ್ಯಗಳಿಂದ ಮನೆ ಮಾತಾಗಬೇಕು. ಈಗಾಗಲೇ ಹಿರಿಯರ ಶ್ರಮದಿಂದ ಡಿಪೊ ಸ್ಥಳ ಮಂಜೂರಾಗಿದ್ದ ಕಾರಣ ಅನುದಾನ ತರಲು ನನಗೆ ಸಹಕಾರಿಯಾಯಿತು. ಕಾಮಗಾರಿ ಸಂದರ್ಭ ಕೆಲವು ಮರಗಳಿಗೆ ಹಾನಿಯಾಗುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಹಾನಿಯಾದ ಮರಗಳ ಬದಲಿಗೆ ಗಿಡ ನೆಡುವ ಯೋಜನೆಗಳನ್ನು ಈ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕು ಎಂದೂ ಸೂಚಿಸಿದರು.

ಭವಿಷ್ಯದ ದೃಷ್ಠಿಯಿಂದ ಡಿಪೋದಲ್ಲಿ ಚಾರ್ಜಿಂಗ್ ಪಾಯಿಂಟ್ ಕೂಡ ಸ್ಥಾಪಿಸಲಾಗುತ್ತಿದ್ದು, ಗ್ರೀನ್ ಡಿಪೊವಾಗಿಸುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡ ಸಮಸ್ಯೆ ಉಲ್ಭಣಿಸಿದ್ದು ನೀರಿನ ಸಮಸ್ಯೆ‌ ನಿವಾರಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಜೊತೆಗೆ ಮುಂದಿನ‌ ದಿನಗಳಲ್ಲಿ ₹ 35 ಲಕ್ಷ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಅಭಿವೃದ್ದಿ ವಿಚಾರಗಳಲ್ಲಿ‌ ವ್ಯರ್ಥ ರಾಜಕಾರಣ ಮಾಡಬಾರದು. ಡಿಪೊ ಕಾಮಗಾರಿಯದ ಅರಣ್ಯ ಇಲಾಖೆ‌ ಕೂಡ ಅಗತ್ಯ ಸಹಕಾರ ನೀಡಬೇಕು’ ಎಂದು ಹೇಳಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು, ಮುಖಂಡರಾದ ಕೆ.ಪಿ.ಚಂದ್ರಕಲಾ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಪಟ್ಟು‌ಮಾದಪ್ಪ, ಸದಸ್ಯರಾದ ಪ್ರವೀಣ್, ಪ್ರದೀಪ್, ಸೌಮ್ಯಾ, ನಂದಿನಿ, ಯಶೋಧ, ರಮೇಶ, ನಾರಾಯಣ, ಶಿವಪ್ಪ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ನಟೇಶ್ ಗೌಡ, ಬ್ಲಾಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಭಾಗವಹಿಸಿದ್ದರು.

ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ₹ 4 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಗುರುವಾರ ಚಾಲನೆ ನೀಡಿ ಮಾತನಾಡಿದರು. ಪ್ರಾಂಶುಪಾಲ ಕಾಳೇಗೌಡ ರಿಜಿಸ್ಟರ್ ಮೇರಿ ಗೃಹ ಮಂಡಳಿ ಅಧಿಕಾರಿ ಭ್ರಮವತಿ ಸಹಾಯಕ ಎಂಜಿನಿಯರ್ ಅಶ್ವಿನ್ ಮುಖಂಡರಾದ ಕೆ.ಪಿ.ಚಂದ್ರಕಲಾ ವಿ.ಪಿ.ಶಶಿಧರ್ ಪಾಲ್ಗೊಂಡಿದ್ದರು.
ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ₹ 4 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಗುರುವಾರ ಚಾಲನೆ ನೀಡಿ ಮಾತನಾಡಿದರು. ಪ್ರಾಂಶುಪಾಲ ಕಾಳೇಗೌಡ ರಿಜಿಸ್ಟರ್ ಮೇರಿ ಗೃಹ ಮಂಡಳಿ ಅಧಿಕಾರಿ ಭ್ರಮವತಿ ಸಹಾಯಕ ಎಂಜಿನಿಯರ್ ಅಶ್ವಿನ್ ಮುಖಂಡರಾದ ಕೆ.ಪಿ.ಚಂದ್ರಕಲಾ ವಿ.ಪಿ.ಶಶಿಧರ್ ಪಾಲ್ಗೊಂಡಿದ್ದರು.

₹ 4 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮಂತರ್‌ಗೌಡ ಚಾಲನೆ

ಕುಶಾಲನಗರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ₹ 4 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ನಬಾರ್ಡ್ ಯೋಜನೆಯಡಿ ಬಿಡುಗಡೆಗೊಂಡ ₹ 4 ಕೋಟಿ ಅನುದಾನದಲ್ಲಿ 2 ತರಗತಿ ಕೊಠಡಿ 4 ಪ್ರಯೋಗಾಲಯ ಕೊಠಡಿ ಸೆಮಿನರ್ ಹಾಲ್ ಸ್ಟಾಫ್‌ ರೂಮ್ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಕ್ಯಾಂಟಿನ್ ಬ್ಲಾಕ್‌ನಲ್ಲಿ ಡೈನಿಂಗ್ ಹಾಲ್ ಅಡುಗೆ ಕೊಣೆ ಸ್ಟೋರ್ ರೂಮ್ ತರಕಾರಿ ಸಾಮಗ್ರಿ ಕೊಠಡಿ ಹಾಗೂ ಶೌಚಾಲಯ ಕೊಠಡಿ ಕಾಮಗಾರಿಗಳು ಇದರಲ್ಲಿ ಸೇರಿವೆ. ಈ ವೇಳೆ ಮಾತನಾಡಿದ ಅವರು ‘ಗೃಹ ಮಂಡಳಿ ನೇತೃತ್ವದಲ್ಲಿ ಕಾಮಗಾರಿಗಳು ನಡೆಯಲಿವೆ. ಎಲ್ಲಾ ಕಾಮಗಾರಿಗಳು ನಿಗದಿತ ದಿನದೊಳಗೆ ಪರ್ಣಗೊಳಿಸಬೇಕು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಟ್ಟಡದ ಜೊತೆಗೆ ಅಗತ್ಯ ಮೂಲ ಸೌಕರ್ಯಗಳು ಒಳಗೊಂಡಂತೆ ಪ್ರಾಸ್ತಾವ ಸಲ್ಲಿಸಬೇಕು. ಉನ್ನತ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು ಪಾಲಿಟೆಕ್ನಿಕ್ ಕಾಲೇಜಿನ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದರು. ಕಾಲೇಜಿನಲ್ಲಿ ಉತ್ತಮ ಫಲಿತಾಂಶ ತರಲು ಉಪನ್ಯಾಸಕರು ಶ್ರಮಿಸಬೇಕು. ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ಉತ್ತೀರ್ಣರಾಗುವಂತೆ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಸರ್ಕಾರದ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣಗಳಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ಕಾಳೇಗೌಡ ರಿಜಿಸ್ಟರ್ ಕೆ.ಎ.ಮೇರಿ ಗೃಹ ಮಂಡಳಿ ಅಧಿಕಾರಿ ಭ್ರಮವತಿ ಸಹಾಯಕ ಎಂಜಿನಿಯರ್ ಅಶ್ವಿನ್ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಗುತ್ತಿಗೆದಾರ ಜಯಪಾಲ್ ಹಾಗೂ ಉಪನ್ಯಾಸಕರುವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT