ಶುಕ್ರವಾರ, ಫೆಬ್ರವರಿ 28, 2020
19 °C
ಶಾಂತಳ್ಳಿಯಲ್ಲಿ ನಡೆದ ಜಾತ್ರೆ, ಸಾವಿರಾರು ಮಂದಿ ಭಾಗಿ, ದೇವರಿಗೆ ವಿಶೇಷ ಪೂಜೆ

ಸಂಭ್ರಮದ ಕುಮಾರಲಿಂಗೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಇತಿಹಾಸ ಪ್ರಸಿದ್ಧ ಶಾಂತಳ್ಳಿಯ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಮತ್ತು 61ನೇ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ದೇವಾಲಯದ ಅರ್ಚಕ ರಮೇಶ್‌ ಹೆಗಡೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮೆರೆ ಕೂತಿ ನಾಡು, ತೋಳುನಾಡು, ಪುಷ್ಫಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ ಹೊರಜಿಲ್ಲೆಯ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಶಾಂತಳ್ಳಿಯ ರಥಬೀದಿಯಲ್ಲಿ ಹೊರಟ ರಥವನ್ನು ಭಕ್ತಾದಿಗಳು ರಸ್ತೆ ಬದಿಯಲ್ಲಿ ನಿಂತು ಸ್ವಾಗತಿಸಿದರು.

ಈ ಸಂದರ್ಭ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್, ಖಜಾಂಚಿ ಡಿ.ಎಸ್. ಲಿಂಗರಾಜು, ಉಪಾಧ್ಯಕ್ಷ ಕೆ.ಟಿ.ಕೃಷ್ಣಪ್ಪ, ಧರ್ಮದರ್ಶಿ ಕೆ.ಎಸ್. ಚಂದ್ರಾವತಿ, ಸದಸ್ಯ ಎಸ್.ಎ. ಪ್ರತಾಪ್ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಇದ್ದರು.

ಜಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಕೃಷಿ ಇಲಾಖೆ, ತೋಟಗಾರಿಕೆ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಆರೋಗ್ಯ ಇಲಾಖೆಯಿಂದ ಪಲ್ಸ್ ಪೋಲಿಯೊ ಲಸಿಕೆ ಸೇರಿದಂತೆ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಯಿತು.

ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾಮಟ್ಟದ ಪುರುಷರ ಮುಕ್ತ ಕಬಡ್ಡಿ ಮತ್ತು ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಟೂರ್ನಿಯನ್ನು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಜನವರಿ 17ರಂದು ಜಾತ್ರಾ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ ಸಿಂಹ, ಶಾಸಕ ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಪಾಲ್ಗೊಳ್ಳಲಿದ್ದಾರೆ.

ಜನಪದ ಕಲಾ ತಂಡಗಳ ಆಕರ್ಷಣೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪದೋತ್ಸವದ ಸುಗ್ಗಿ ಹುಗ್ಗಿಯ 15ಕ್ಕೂ ಹೆಚ್ಚಿನ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜಾತ್ರೆಗೆ ಮೆರುಗು ನೀಡಿದವು.

ಬಂಟ್ವಾಳದ ಚಿಲಿಪಿಲಿ ಬಳಗದ ಗೊಂಬೆಯಾಟ, ಮಂಡ್ಯದ ನಂದಿ ಧ್ವಜ, ಮೈಸೂರಿನ ಪಟ ಕುಣಿತ, ಡೊಳ್ಳು ಕುಣಿತ, ನಂಜನಗೂಡಿನ ಹುಲಿವೇಷ, ರಾಮನಗರದ ಪೂಜಾ ಕುಣಿತ, ಪಿರಿಯಾಪಟ್ಟಣದ ಕಂಸಾಳೆ, ಕೀಲುಕುದುರೆ, ಚಿಕ್ಕಮಗಳೂರಿನ ಚಿಟ್ಟಿಮಾಳ, ಹಾವೇರಿಯ ಪುರವಂತಿಕೆ, ಕಡೂರಿನ ಗೊರವರ ಕುಣಿತದ ತಂಡಗಳು ಪಾಲ್ಗೊಂಡಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)