ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರದ ಭರವಸೆ; ಕುಶಾಲನಗರಕ್ಕೆ ಸಮುದಾಯ ಆರೋಗ್ಯ ಕೇಂದ್ರವೇ ಗತಿ!

ತಾಲ್ಲೂಕು ಆಸ್ಪತ್ರೆಗೆ ಸಿಕ್ಕ ಭರವಸೆ, ಈಡೇರುತ್ತಿಲ್ಲ ಬೇಡಿಕೆ; ತಪ್ಪಿಲ್ಲ ರೋಗಿಗಳ ಬಳಲಿಕೆ
Last Updated 14 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕುಶಾಲನಗರ: ಕುಶಾಲನಗರ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ 3 ವರ್ಷ ಕಳೆದರೂ ಸುಸಜ್ಜಿತವಾದ ತಾಲ್ಲೂಕು ಆಸ್ಪತ್ರೆ ನಿರ್ಮಾಣಗೊಂಡಿಲ್ಲ. ತಾಲ್ಲೂಕಿನ ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಸಮುದಾಯ ಆರೋಗ್ಯ ಕೇಂದ್ರವನ್ನೇ ನೆಚ್ಚಿಕೊಳ್ಳಬೇಕಿದೆ.

ಇರುವ ಈ ಆರೋಗ್ಯ ಕೇಂದ್ರವೂ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ರೋಗಗ್ರಸ್ಥವಾಗಿದ್ದು, ಇಲ್ಲಿನವರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಕುಶಾಲನಗರ ಹಾಗೂ ಪೊನ್ನಂಪೇಟೆ ಕೇಂದ್ರಗಳನ್ನು ನೂತನ ತಾಲ್ಲೂಕು ಕೇಂದ್ರಗಳಾಗಿ ಘೋಷಣೆ ಮಾಡಿದ್ದರು. ಜಿಲ್ಲೆಯ 3 ಹೊಸ ತಾಲ್ಲೂಕು ಕೇಂದ್ರದಲ್ಲಿರುವ 50 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಬಜೆಟ್‌ನಲ್ಲಿ ಘೋಷಣೆಯನ್ನೂ ಮಾಡಿತ್ತು. ಇಲ್ಲಿನ ಆರೋಗ್ಯ ಕೇಂದ್ರವು ಮೇಲ್ದರ್ಜೆಗೇರಿಸುವ ಕುರಿತು ಸಮಗ್ರ ವರದಿಯನ್ನೂ ನೀಡಿತ್ತು. ಆದರೆ, ಮೇಲ್ದರ್ಜೇಗೇರುವ ಪ್ರಯತ್ನ ಚುರುಕುಗೊಂಡಿಲ್ಲ.

ವೈದ್ಯರ ಕೊರತೆ ಒಂದೆಡೆಯಾದರೆ, ಕರ್ತವ್ಯದಲ್ಲಿರುವ ವೈದ್ಯರ ಸೇವೆ ಸಕಾಲಕ್ಕೆ ದೊರೆಯದೆ ರೋಗಿಗಳು ಹೈರಾಣಾಗಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದರೂ ಆಸ್ಪತ್ರೆ ಮೇಲ್ದರ್ಜೆಗೇರಿಸದೆ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೊರತೆಗಳ ಕೇಂದ್ರ: ಈ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮಾತ್ರವಲ್ಲ ಸಿಬ್ಬಂದಿಯ ಕೊರತೆ ಕೂಡ ಇದೆ. ಸೂಪರಿಂಟೆಂಡೆಂಟ್ ಸ್ಟಾಫ್ ನರ್ಸ್, ಸ್ಟಾಫ್ ನರ್ಸ್, ಔಷಧಿ ವಿತರಕ, ಪ್ರಯೋಗಾಲಯ ಸಹಾಯಕ, ಹಿರಿಯ ಪ್ರಯೋಗಾಲಯ ತಂತ್ರಜ್ಞ, ‘ಡಿ’ ಗ್ರೂಪ್ ನೌಕರರ 6 ಹುದ್ದೆ ಸೇರಿದಂತೆ ಆಡಳಿತಾತ್ಮಕ ಹುದ್ದೆಗಳು ಖಾಲಿ ಇವೆ. ಚರ್ಮರೋಗ ತಜ್ಞ, ಮೂಗು ಮತ್ತು ಕಿವಿರೋಗ ತಜ್ಞ, ಕಣ್ಣಿನ ತಜ್ಞ ವೈದ್ಯರು, ಅರಿವಳಿಕೆ ತಜ್ಞ ವೈದ್ಯರು ಸೇರಿದಂತೆ ಬಹುತೇಕ ವೈದ್ಯರ ಹುದ್ದೆಗಳೂ ಖಾಲಿ ಇವೆ. ಇಷ್ಟೆಲ್ಲ ಕೊರತೆಗಳಿದ್ದರೂಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ₹ 26 ಲಕ್ಷ ವೆಚ್ಚದಲ್ಲಿ ನೂತನವಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಇರುವ ಸೌಲಭ್ಯಗಳು

50 ಬೆಡ್‌ಗಳನ್ನು ಹೊಂದಿರುವ ಈ ಆಸ್ಪತ್ರೆ, ಆಪರೇಷನ್ ಥಿಯೇಟರ್, ಕ್ಷ–ಕಿರಣ ವಿಭಾಗ, ಇಸಿಜಿ ವಿಭಾಗ, ಐಸಿಟಿಸಿ ರಕ್ತ ಪರೀಕ್ಷೆ ವಿಭಾಗ, ಚುಚ್ಚುಮದ್ದು ವಿಭಾಗ, ಡ್ರೆಸಿಂಗ್ ವಿಭಾಗ, ಪ್ರಯೋಗಾಲಯ, ಕಣ್ಣು ಪರೀಕ್ಷಾ ವಿಭಾಗ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಹೊಂದಿದೆ. ಇದೀಗ ಡಾ.ಮಧುಸೂದನ್ ಅವರು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೂರುಗಳ ಸರಮಾಲೆ: ಔಷಧಿಗಳನ್ನು ಹೊರಗಿನ ಔಷಧಿ ಅಂಗಡಿಗಳಿಂದ ಖರೀದಿಸಲು ತಿಳಿಸಲಾಗುತ್ತಿದೆ. ಗರ್ಭಿಣಿಯರ ವಾರ್ಡ್‌ನಲ್ಲಿ‌ ಬೆಡ್‌ಗಳ‌ ಕೊರತೆ, ಆಕ್ಸಿಜನ್ ಯಂತ್ರಗಳ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ, ಶೌಚಾಲಯಗಳು ದುಃಸ್ಥಿತಿಯಲ್ಲಿವೆ ಎಂಬಿತ್ಯಾದಿ ಸಮಸ್ಯೆಗಳ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪ್ರವೀಣ್, ಗೌತಮ್, ಪ್ರಭಾಕರ್ ಸೇರಿದಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್‌ ನಾಯಕ ಶಾಸಕರ ಗಮನಕ್ಕೆ ತಂದಿದ್ದಾರೆ.

ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಪ್ರತಿಕ್ರಿಯಿಸಿ, ‘ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರ 5 ಎಕರೆ ಜಾಗ ಗುರುತಿಸುವಂತೆ ಸೂಚಿಸಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಅವರು ಇಲ್ಲಿನ ಹೌಸಿಂಗ್ ಬೋರ್ಡ್ ಬಳಿಯ ನೀರಾವರಿ ಇಲಾಖೆಯ ಜಾಗವನ್ನು ಗುರುತಿಸಿದ್ದಾರೆ. ಈ ಜಾಗದ ಎಲ್ಲಾ ದಾಖಲೆಗಳು ಆರೋಗ್ಯ ಇಲಾಖೆಗೆ ವರ್ಗಾವಣೆ ಆದ ಕೂಡಲೇ ಸರ್ಕಾರದಿಂದ ₹ 30 ಕೋಟಿ ಅನುದಾನ ಮಂಜೂರು ಆಗಲಿದ್ದು, ಆಸ್ಪತ್ರೆ ಕಟ್ಟಡ ಕಾಮಗಾರಿ ಕೂಡ ಆರಂಭವಾಗುತ್ತದೆ’ ಎಂದರು.

ಮೇಲ್ದರ್ಜೆಗೇರಿಸಲು ಕ್ರಮ: ಶಾಸಕ

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿ, ‘ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ರೋಗಿಗಳ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಗಳಿಗೆಂದು ₹ 20 ಲಕ್ಷ ಒದಗಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಮೂಲಕ ಅಗತ್ಯ ವಸ್ತುಗಳ ಖರೀದಿಗೆ ₹ 10 ಲಕ್ಷಕ್ಕೆ ಅನುಮೋದನೆ ನೀಡಲಾಗಿದೆ. ಲಯನ್ಸ್ ಸಂಸ್ಥೆಗೆ ನೀಡಿರುವ ಜಾಗವನ್ನು ಮರಳಿ ಪಡೆದು ಅವರಿಗೆ ಬದಲೀ ಜಾಗ ನೀಡಿ 100 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳುತ್ತಾರೆ.

ನೂರಾರು ಜೀವಗಳನ್ನು ಉಳಿಸಲು ಆಸ್ಪತ್ರೆ ಬೇಕು

ಕುಶಾಲನಗರ ಪಟ್ಟಣದ ಮಧ್ಯೆಯೇ ಮೈಸೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮಡಿಕೇರಿ – ಹಾಸನ ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಈ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಇಲ್ಲಿ ಕೇವಲ ಪ್ರಥಮ ಚಿಕಿತ್ಸೆ ಮಾತ್ರ ಸಿಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಮೈಸೂರು ಅಥವಾ ಮಂಗಳೂರಿಗೆ ರೋಗಿಗಳನ್ನು ಕರೆದುಕೊಂಡು ಹೋಗಬೇಕಾದ ದುಸ್ಥಿತಿ ಇದೆ. ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳು ಪ್ರತಿಭಟನೆ ನಡೆಸಿದ್ದರೂ ಸರ್ಕಾರದ ಪ್ರಯತ್ನ ಮಾತ್ರ ಇನ್ನೂ ಆಮೆಗತಿಯಲ್ಲೇ ಇದೆ. ಒಂದು ವೇಳೆ ಇಲ್ಲಿ ಸುಸಜ್ಜಿತವಾದ ಆಸ್ಪತ್ರೆ ಸ್ಥಾಪನೆಯಾದರೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತಕ್ಷಣ ಉತ್ತಮ ಚಿಕಿತ್ಸೆ ದೊರೆತು ಅವರು ಬದುಕುಳಿಯುತ್ತಾರೆ. ಜೀವಗಳನ್ನು ಉಳಿಸುವ ಸಲುವಾಗಿಯಾದರೂ ಆಸ್ಪತ್ರೆ ಸ್ಥಾಪಿಸುವ ಪ್ರಯತ್ನ ಸಮರೋಪಾದಿಯಲ್ಲಿ ನಡೆಯಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT