ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕಾರ್ಮಿಕರ ಕೊರತೆ, ಸಂಕಷ್ಟದಲ್ಲಿ ಕಾಫಿ ಬೆಳೆಗಾರರು

ತವರೂರಿನಿಂದ ಕೊಡಗಿಗೆ ಬಾರದ ಅಸ್ಸಾಂ ಕಾರ್ಮಿಕರು: ಸ್ಥಳೀಯ ಕಾರ್ಮಿಕರ ಅಭಾವ
Last Updated 1 ಫೆಬ್ರುವರಿ 2021, 5:20 IST
ಅಕ್ಷರ ಗಾತ್ರ

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ಕೊಯ್ಲು ಬಿರುಸುಗೊಂಡಿದೆ. ಬೆಳೆಗಾರರು ಕಾರ್ಮಿಕರಿಗಾಗಿ ಎಡತಾಕುತ್ತಿದ್ದಾರೆ. ಕಾಫಿ ಗಿಡಗಳಲ್ಲಿ ಸಂಪೂರ್ಣ ಹಣ್ಣಾಗಿದ್ದು ಬೆಳೆಗಾರರಿಗೆ ತುರ್ತು ಕೊಯ್ಲು ಅನಿವಾರ್ಯ ಎನಿಸಿದೆ.

ಅಕಾಲಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಕಾಫಿ ಉದುರಿ ಹೋಗಿದೆ. ಕೊಯ್ಲು ಮಾಡಲು ಕಾರ್ಮಿಕರ ಕೊರತೆ ಉಂಟಾಗಿದೆ. ಬಿದ್ದ ಕಾಫಿಯನ್ನು ಆರಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಬೆಳೆಗಾರರು ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದಾರೆ.

ವರ್ಷಗಳ ಹಿಂದೆ ಕಾರ್ಮಿಕರ ಸಮಸ್ಯೆ ತೀವ್ರವಾಗಿತ್ತು. ಅಸ್ಸಾಂ ಮೂಲದ ವಲಸಿಗ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ಇತ್ತ ಬರತೊಡಗಿದಂತೆ ಬೆಳೆಗಾರರ ಸಮಸ್ಯೆಗೆ ಒಂದಷ್ಟು ಪರಿಹಾರ ದೊರಕಿದಂತಾಗಿತ್ತು. ಕಾಫಿ ತೋಟದ ಹೆರತೆ ಕೆಲಸ ಹಾಗೂ ಕಾಫಿ ಕೊಯ್ಲಿಗೆ ಕಾರ್ಮಿಕರು ಲಭಿಸಿದ್ದು, ನೆರೆಯ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆತರುವ ಜವಾಬ್ದಾರಿ ಕಡಿಮೆಯಾಗಿತ್ತು.

ಕೊರೊನಾ ಸಂಕಷ್ಟದಿಂದ ಹೆಚ್ಚಿನ ಅಸ್ಸಾಂ ವಲಸಿಗ ಕಾರ್ಮಿಕರು ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಊರಿಗೆ ತೆರಳಿದವರು ಹಿಂತಿರುಗಿಲ್ಲ. ಈ ಬಾರಿ ಕಾಫಿ ತೋಟಗಳಿಗೆ ಆಗಮಿಸಿದ ಕಾರ್ಮಿಕರ ಸಂಖ್ಯೆ ಕಡಿಮೆ. ಸ್ಥಳೀಯ ಕಾರ್ಮಿಕರ ಕೊರತೆಯೂ ಕಾಡುತ್ತಿದೆ. ರಾಜ್ಯದ ಉತ್ತರ ಭಾಗಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದ ಬಂದ ಕಾರ್ಮಿಕರು ಕಾಫಿ ಕೊಯ್ಲು ಮಾಡುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ.

ಜನವರಿ ಮೊದಲ ವಾರ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯ ಕೃಷಿಕ ಸಮುದಾಯ ಸಂಕಟಕ್ಕೆ ಸಿಲುಕಿದೆ. ಮಳೆಯ ಪರಿಣಾಮ ಕಾಫಿ ಕೊಯ್ಲು ನಿಧಾನವಾಗಿದ್ದು, ಹಲವು ಕಡೆ ಕಾಫಿ ಫಸಲು ನೆಲ ಕಚ್ಚಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಅರೇಬಿಕಾ ಮತ್ತು ಕಟವಾಯಿ-ಚಂದ್ರಗಿರಿ ತಳಿಗಳ ಕಾಫಿ ಕೊಯ್ಲು ಭರದಿಂದ ಸಾಗಿದೆ.

ನಿರಂತರ ಮೋಡದ ಪರಿಣಾಮ ಅರೇಬಿಕಾ ಕಾಫಿ ಸಕಾಲಿಕವಾಗಿ ಒಣಗದೇ ಹತ್ತು ಹಲವು ಸಮಸ್ಯೆಗಳಿಗೆ ಬೆಳೆಗಾರರು ಸಿಲುಕಿದ್ದರು. ಕೊಯ್ಲು ಮಾಡಿದ ಕಾಫಿಯನ್ನು ಸಕಾಲಿಕವಾಗಿ ಒಣಗಿಸಲು ಆಗದೇ ಬೆಳೆಗಾರರು ದಾಸ್ತಾನು ಮಾಡಿದ್ದರು. ಇದೀಗ ರೊಬಸ್ಟಾ ಕಾಫಿ ಕೊಯ್ಲಿನ ಅವಧಿಯಾಗಿದ್ದು, ಹೆಚ್ಚು ನೆರಳಿಲ್ಲದ ತೋಟಗಳಲ್ಲಿ ಬೇಗನೇ ಹಣ್ಣಾದ ಕಾಫಿ ಕಪ್ಪಾಗಿವೆ. ನಿರಂತರ ಮಳೆಯಿಂದ ಹಣ್ಣಾದ ಕಾಫಿಯು ಬೀಳುತ್ತಿದ್ದು, ಕೊಯ್ಲು ಮಾಡಲು ತೊಡಕಾಗಿದೆ.

ಈಗ ಬಿಸಿಲಿನ ವಾತಾವರಣ ಕಾಣಿಸಿಕೊಂಡಿದ್ದು ಬೆಳೆಗಾರರು ಕೊಯ್ಲು ಮಾಡಿದ ಕಾಫಿಯನ್ನು ಕಣಗಳಲ್ಲಿ ಮಾತ್ರವಲ್ಲದೇ ಗದ್ದೆಗಳಲ್ಲಿ, ಶಾಲಾ ಮೈದಾನಗಳಲ್ಲಿ ಒಣಗಿಸಲು ಹಾಕುತ್ತಿ ದ್ದಾರೆ. ಕಾರ್ಮಿಕರ ಕೊರತೆ ಯಿಂದ ಕಾಫಿಯನ್ನು ಸರಿಯಾಗಿ ದಾಸ್ತಾನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಕಾಫಿ ಬೆಳೆಗಾರ ಅಚ್ಚಕಾಳೇರ ಅಚ್ಚಯ್ಯ ಅವಲತ್ತುಗೊಂಡರು.

ಈ ಬಾರಿ ಅವಧಿಗೆ ಮುನ್ನವೇ ಕಾಫಿಯ ಹೂಗಳು ಅರಳಿದ್ದು ಬೆಳೆಗಾರರಿಗೆ ಸಮಸ್ಯೆಯಾಗಿ ಕಾಡುತ್ತಿದೆ.

ಸಾಮಾನ್ಯವಾಗಿ ಫೆಬ್ರುವರಿ ಕೊನೇ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮೊದಲ ಹೂ ಮಳೆಯಾಗಲಿದ್ದು, ಕಾಫಿ ಬೆಳೆಗಾರರಿಗೆ ಪ್ರಯೋಜನ ವಾಗಲಿದೆ. ಹೆಚ್ಚಿನ ಬೆಳೆಗಾರರು ನೀರು ಹಾಯಿಸಿ ಹೂವು ಅರಳಿಸಲು ಮುಂದಾಗುತ್ತಾರೆ. ಇಳುವರಿ ಹೆಚ್ಚಿದ್ದರೆ ಕಾಫಿ ಕೊಯ್ಲು ಸಮಸ್ಯೆಯಾಗಿ ಕಾಡುವುದಿಲ್ಲ. ಕಡಿಮೆ ಇಳುವರಿ ಇರುವ ಕಾಫಿ ಬೆಳೆಗಾರರಿಗೆ ಕಾರ್ಮಿಕರ ಕೊರತೆ ತಟ್ಟುತ್ತದೆ ಎಂದು ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸೂಕ್ತ ಬೆಲೆ ಸಿಗ್ತಿಲ್ಲ

ಕಾಫಿಗೆ ಇಪ್ಪತ್ತು ವರ್ಷದ ಹಿಂದೆ ಇದ್ದ ದರವೇ ಈಗಲೂ ಇದೆ. ವಾತಾವರಣದ ಏರುಪೇರಿನಿಂದ, ಸಂಸ್ಕರಣೆಯ ದೋಷದಿಂದ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಾರ್ಮಿಕರ ಕೂಲಿ ಹೆಚ್ಚಿದೆ. ಕ್ಷಮತೆ ಕಡಿಮೆ ಆಗಿದೆ. ಕಾರ್ಮಿಕರ ಕೊರತೆಯಿಂದ ಮಧ್ಯಮ ವರ್ಗದ ಬೆಳೆಗಾರರಿಗೆ ನಿರ್ವಹಣೆಯ ಸಮಸ್ಯೆ ಎದುರಾಗಿದೆ.

– ಪಿ.ವಿ.ಮಂಜುನಾಥ್, ಕಾಫಿ ಬೆಳೆಗಾರ, ಕುಂಜಿಲ

***

ಸಂಕಷ್ಟದಲ್ಲಿ ಬೆಳೆಗಾರ

ಜಿಲ್ಲೆಯ ಬೆಳೆಗಾರರು ಅತಿವೃಷ್ಟಿಯಿಂದ ಸಂಕಷ್ಟ ಕೀಡಾಗಿದ್ದಾರೆ. ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು ಗಳಿಂದ ರಾಜ್ಯಕ್ಕೆ ಸಾಕಷ್ಟು ಆದಾಯ ಲಭಿಸುತ್ತಿದ್ದರೂ, ಬೆಳೆಗಾರರ ಸಂಕಷ್ಟಕ್ಕೆ ಸ್ಪಂದನೆ ದೊರಕುತ್ತಿಲ್ಲ.

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕಾರ್ಮಿಕರ ಕೊರತೆ ಹೆಚ್ಚಿದೆ. ಕಾಫಿ ಕೊಯ್ಲಿಗೆ ತೊಡಕಾಗಿದೆ. ಕೊಯ್ಲು ಮಾಡಲು ಹೆಚ್ಚು ಖರ್ಚು ಆಗುತ್ತಿದೆ. ಈ ಸಾಲಿನ ಬಜೆಟ್‌ನಲ್ಲಿ ಕೊಡಗಿನ ವಾಣಿಜ್ಯ ಬೆಳೆಗಳಾದ ಕಾಫಿ ಹಾಗೂ ಕಾಳುಮೆಣಸಿಗೆ ಕೇರಳ ಮಾದರಿಯಲ್ಲಿ ಪ್ಯಾಕೇಜ್ ಘೋಷಿಸಬೇಕು.

– ಡಾ.ಸಣ್ಣುವಂಡ ಕಾವೇರಪ್ಪ, ಮಾಜಿ ಉಪಾಧ್ಯಕ್ಷ, ಕಾಫಿ ಮಂಡಳಿ

***

ಕಾರ್ಮಿಕರ ಕೊರತೆ

ವಲಸಿಗ ಅಸ್ಸಾಂ ಕಾರ್ಮಿಕರು ಕೆಲವು ವರ್ಷಗಳಿಂದ ಕಾಫಿ ಕೊಯ್ಲಿಗೆ ಲಭಿಸುತ್ತಿದ್ದರು. ಈ ಬಾರಿ ಕಾರ್ಮಿಕರ ಸಮಸ್ಯೆ ಬೆಳೆಗಾರರಿಗೆ ತಟ್ಟಿದೆ. ಕಾಫಿ ಕೊಯ್ಲು ಪೂರ್ಣಗೊಳ್ಳುವ ಮನ್ನವೇ ಹಲವು ಕಾರ್ಮಿಕರು ಚುನಾವಣೆ ಹಿನ್ನೆಲೆಯಲ್ಲಿ ಊರಿಗೆ ಹಿಂತಿರುಗುತ್ತಿದ್ದಾರೆ. ಕಾಫಿ ಸಾಕಷ್ಟು ಪ್ರಮಾಣದಲ್ಲಿ ಉದುರಿ ಹೋಗಿದೆ.

ಈಗಾಗಲೇ ತೋಟಗಳಲ್ಲಿ ಬೆರಿ ಬೋರರ್ ಕಾಣಿಸಿಕೊಂಡಿದೆ. ಕಾರ್ಮಿಕರ ಕೊರತೆಯಿಂದ ಬಿದ್ದ ಕಾಫಿಯನ್ನು ಆರಿಸದೇ ಇದ್ದರೆ ತೋಟಗಳಲ್ಲಿ ಬೆರಿ ಬೋರರ್ ಹೆಚ್ಚುವ ಸಾಧ್ಯತೆಗಳಿವೆ.

–ಬಿದ್ದಾಟಂಡ ಜಿನ್ನು ನಾಣಯ್ಯ, ಕಾಫಿ ಬೆಳೆಗಾರ, ನಾಪೋಕ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT