ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಕರಿಕೆಯ ಹಾದಿಯಲ್ಲಿದ್ದಾರೆ ಜಲಕನ್ನಿಕೆಯರು!

ಮಳೆ ಕೊರತೆಯಿಂದ ಸೊರಗಿದ ಜಲಧಾರೆಗಳು
Published 13 ಆಗಸ್ಟ್ 2023, 7:28 IST
Last Updated 13 ಆಗಸ್ಟ್ 2023, 7:28 IST
ಅಕ್ಷರ ಗಾತ್ರ

ನಾಪೋಕ್ಲು: ಮುಂಗಾರು ಮಳೆಯ ಕೊರತೆಯಿಂದ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಅನೇಕ ಜಲಧಾರೆಗಳು ಸೊರಗಿವೆ. ಇಲ್ಲಿನ ಕರಿಕೆಯ ಹಾದಿಗುಂಟ ಇರುವ ಅನೇಕ ಜಲಪಾತಗಳು ಪ್ರತಿ ವರ್ಷ ಆಗಸ್ಟ್‌ನಲ್ಲಿ ಭೋರ್ಗರೆಯುತ್ತಿದ್ದವು. ಅನಾಮಿಕವಾದ ಈ ಜಲಧಾರೆಗಳನ್ನು ನೋಡಲೆಂದೆ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರೂ ಬರುತ್ತಿದ್ದರು. ಆದರೆ, ಈ ವರ್ಷ ಮಳೆ ಕೊರತೆಯಿಂದ ಜಲಪಾತಗಳ ಸೊಬಗು ಹಿಂದಿನಷ್ಟಿಲ್ಲ.

ಕಳೆದ ತಿಂಗಳು ಒಂದು ವಾರ ಮಾತ್ರ ಮುಂಗಾರು ಮಳೆ ಬಿರುಸಿನಿಂದ ಸುರಿಯಿತು. ಆಗ ಕಾನನದ ನಡುವಿನ ಜಲಪಾತಗಳಿಗೆ ಜೀವಕಳೆ ಬಂದಿತು. ಜಿಲ್ಲೆಯ ಹತ್ತು ಹಲವು ಜಲಪಾತಗಳು ಮೈದುಂಬಿಕೊಂಡು ಮನಸೆಳೆದವು. ‘ದಕ್ಷಿಣದ ಪ್ರಯಾಗ’ ಎಂದೇ ಖ್ಯಾತವಾದ ಭಾಗಮಂಡಲದಿಂದ ಅನತಿ ದೂರದಲ್ಲಿರುವ ಕರಿಕೆಯಲ್ಲಿನ ಜಲಪಾತಗಳೂ ಸೂಜಿಗಲ್ಲಿನಂತೆ ಸೆಳೆದವು. ಭಾಗಮಂಡಲ - ಕರಿಕೆ ರಸ್ತೆಯ ಎಡಬದಿಯಲ್ಲಿ ದಟ್ಟ ಕಾಡಿನ ಸೌಂದರ್ಯ ಮನಸೆಳೆದರೆ ಬಲಬದಿಯಲ್ಲಿ ಹೆಜ್ಜೆ ಹೆಜ್ಜೆಗೂ ಸರಣಿ ಜಲಧಾರೆಗಳು ಕಾಣಸಿಕ್ಕವು.

ಕೊಡಗಿನ ಅಬ್ಬಿಜಲಪಾತ, ಚೇಲಾವರ ಜಲಪಾತ, ಇರ್ಪು ಜಲಪಾತ, ಮಲ್ಲಳ್ಳಿ ಜಲಪಾತ ಮುಂತಾದವುಗಳಿಗೆ ಕಮ್ಮಿ ಇಲ್ಲದಂತೆ ಬೆಡಗು ತೋರುವ ಬಹುತೇಕ ಜಲಧಾರೆಗಳು ಮಳೆಗಾಲಕ್ಕಷ್ಟೇ ಸೀಮಿತವಾಗಿರುವ ಚೆಲುವೆಯರು. ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಪಶ್ಚಿಮ ಘಟ್ಟದಲ್ಲಿ ಮಳೆ ಸುರಿದಾಗ ಬ್ರಹ್ಮಗಿರಿ ಶ್ರೇಣಿಯಲ್ಲಿನ ತಲಕಾವೇರಿ ರಕ್ಷಿತಾರಣ್ಯದ ನಡುವಿನಿಂದ ಬಳುಕಿ ಬಂದು ಧುಮ್ಮಿಕ್ಕುವ ಜಲಬೆಡಗಿಯರು ಆ ಮೂಲಕ ಮಳೆಗಾಲದ ಪ್ರಯಾಣಿಕರನ್ನು ಸೆಳೆಯುತ್ತವೆ.

ಬ್ರಹ್ಮಗಿರಿಯಿಂದ ಹೊರಟು ಕೆಲವೇ ಕೆಲವು ಕಿಲೋಮೀಟರ್ ದೂರವನ್ನು ತಿರುವು ರಸ್ತೆಗಳಲ್ಲಿ ಸಾಗಿದರೆ ಎಡಬದಿಯಲ್ಲಿ ತಲಕಾವೇರಿ ರಕ್ಷಿತಾರಣ್ಯ ಮತ್ತು ಬ್ರಹ್ಮಗಿರಿ ಶಿಖರ ಶ್ರೇಣಿ ಕಾಣಸಿಗುತ್ತದೆ. ನಿಸರ್ಗದ ಸೌಂದರ್ಯದ ನಡುವೆ ಮತ್ತಷ್ಟು ದೂರ ಸಾಗಿದರೆ ಅದೊಂದು ತಿರುವಿನಲ್ಲಿ ರಸ್ತೆಗೆ ಬೀಳುವ ಧಾರೆ ಕಾಣಸಿಗುತ್ತದೆ. ಎರಡು ಕವಲುಗಳಾಗಿ ಕಾಡಿನ ನಡುವಿನಿಂದ ಹರಿದು ಬರುವ ಜಲಧಾರೆ ರಸ್ತೆಯ ಬದಿಯ ಮೋರಿಯಲ್ಲಿ ನಿಂತರೆ ಕೈಗೆಟುಕುವ ಅದ್ಭುತ ಧಾರೆ.

ಅಲ್ಲಿಂದ ಮುಂದೆ ಸಾಗಿದರೆ ಕಿಲೋಮೀಟರಿಗೊಂದೊಂದು ಜಲಪಾತಗಳು. ಜಿಟಿಜಿಟಿ ಮಳೆಯ ನಡುವೆ ಮೈದುಂಬಿಕೊಂಡು ಸಾಗಿ ಬರುವ ಬೆಳ್ನೊರೆಗಳು ಕೆಲವೊಂದನ್ನು ಕಾಡಿನ ನಡುವಿನ ನಡುವೆ ಸದ್ದು ಆಲಿಸಿ ಕಾಡಿನ ಹಾದಿ ಹಿಡಿದು ಹುಡುಕಬೇಕು. ಈ ರಸ್ತೆಯಲ್ಲಿ ಸಾಗಿದರೆ 30ಕ್ಕೂ ಅಧಿಕ ಜಲಪಾತಗಳು ಕಾಣಸಿಗುತ್ತವೆ. ಹತ್ತಿಪ್ಪತ್ತು ಜಲಧಾರೆಗಳು 50-100 ಅಡಿ ಎತ್ತರದಿಂದ ಧುಮುಕುತ್ತವೆ. 19ನೇ ಕಿ.ಮೀನಲ್ಲಿ ಸಿಗುವ ಬೃಹತ್ ಜಲಧಾರೆಯ ಅಂದವಂತೂ ಚೆಂದಕ್ಕಿಂತ ಚಂದ. ಸುಮಾರು 60 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಈ ಜಲಪಾತ ನಡು ಮಳೆಗಾಲದಲ್ಲಿ ರಸ್ತೆಗೆ ಬೀಳುವುದು.

ಹಲವು ಧಾರೆಗಳು ಧುಮ್ಮಿಕ್ಕಿ ಬಂದು ರಸ್ತೆಯಡಿಯ ಮೋರಿಯಲ್ಲಿ ಅವಿತು ಸಾಗಿ ಮತ್ತೆ ಕಾಡಿನ ನಡುವೆ ದಾರಿ ಕಂಡುಕೊಂಡು ಪ್ರಪಾತ ಸೇರಿಬಿಡುತ್ತವೆ. ಸುಮಾರು ಹತ್ತರಷ್ಟು ಜಲಪಾತಗಳು ಮಾಮೂಲಿ ಜಲಧಾರೆಗಳಿಗಿಂತ ಭಿನ್ನವಾಗಿ ವಿಶಾಲವಾಗಿ ಹರಿಯುತ್ತಾ ಬಂದು ನದಿರೂಪದಲ್ಲಿ ಕಂಗೊಳಿಸುತ್ತವೆ. ಸುಮಾರು 19 ಕಿ.ಮೀ ದೂರದ ರಸ್ತೆಯಲ್ಲಿನ ಎಲ್ಲಾ ಗಿರಿಕನ್ಯೆಯರು ಅನಾಮಿಕರೇ. ಅಕ್ಕಪಕ್ಕದ ಗ್ರಾಮಗಳಲ್ಲಿ ಮಾತ್ರ ಮನೆಮಾತಾಗಿರುವ ಈ ರಮಣೀಯ ಸ್ಥಳವನ್ನು ಪ್ರವಾಸಿ ತಾಣವಾಗಿ ರೂಪಿಸಿಬೇಕೆಂದು ಕರಿಕೆ ಗ್ರಾಮಸ್ಥರು ಒತ್ತಾಯಿಸುತ್ತಾರೆ.

ಕೊಡಗಿನ ದಟ್ಟ ಕಾಡುಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಸುಮಾರು 10 ಸಾವಿರ ಎಕರೆ ವಿಸ್ತಾರದ ಮಳೆಕಾಡು ಹೊಂದಿರುವ ತಲಕಾವೇರಿ ಅಭಯಾರಣ್ಯದಲ್ಲಿ ಅಪರೂಪದ ಮರಗಳು ಇವೆ. ಜಿಂಕೆ, ಆನೆ, ಕಾಡೆಮ್ಮೆ, ಚಿರತೆ ಮುಂತಾದ ವನ್ಯ ಮೃಗಗಳು ಇಲ್ಲಿವೆ. ಅಪರೂಪದ ಕಾಡುಹೂಗಳೂ ಕಾಣಸಿಗುತ್ತವೆ. ಪಡಿನಾಲ್ಕುನಾಡು ಮತ್ತು ಪಟ್ಟಿಘಾಟ್ ರಕ್ಷಿತಾರಣ್ಯಗಳು ತಲಕಾವೇರಿ ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಈ ರಕ್ಷಿತಾರಣ್ಯದಿಂದ ಹರಿದುಬರುವ ಜಲಧಾರೆಗಳನ್ನು ಸಂಗ್ರಹಿಸಿ ಭರೂಕ ವಿದ್ಯುತ್ ಉತ್ಪಾದನಾ ಕೇಂದ್ರವು ವಿದ್ಯುತ್ ಉತ್ಪಾದಿಸುತ್ತದೆ. ಹೀಗೆ, ಉತ್ಪಾದನೆಯಾದ ವಿದ್ಯುತ್ ನೆರೆಯ ಸುಳ್ಯ ತಾಲ್ಲೂಕಿಗೆ ಪೂರೈಕೆಯಾಗುತ್ತದೆ. ದಾರಿಯಲ್ಲಿ ಸಿಗುವ ಜಲಬೆಡಗಿಯರನ್ನು ಕಣ್ತುಂಬಿಕೊಂಡು ಸಾಗಿದಂತೆಯೇ ಕರಿಕೆ ಎದುರಾಗುತ್ತದೆ. ಹೆಸರಿಗೆ ಮಾತ್ರ ಕನ್ನಡ ಕಾಣುವ ಕರಿಕೆಯಿಂದ ಒಂದು ಕಿಲೋಮೀಟರ್ ಮುಂದೆ ಹೋದರೆ ಕೊಡಗಿನ ಗಡಿ ಮುಕ್ತಾಯವಾಗಿ ಕೇರಳದ ಪಾಣತ್ತೂರು ಎಂಬ ಊರು ಸಿಗುತ್ತದೆ. ಬದಿಯಲ್ಲೇ ನದಿಯೊಂದು ಕೇರಳದ ಬೇಕಲ ಕೋಟೆಯ ಸಮುದ್ರ ಸೇರುವ ತವಕದಲ್ಲಿ ಮುನ್ನುಗ್ಗುತ್ತದೆ. ಹಲವಾರು ಜಲಪಾತಗಳು ಸೇರಿ ಈ ನದಿಗೆ ಕಳೆ ಬಂದಿದೆ.

ಆದರೆ, ಮಳೆ ಕೊರತೆಯಿಂದ ಇವುಗಳ ಸೌಂದರ್ಯ ಕಳೆಗುಂದಿವೆ.

ಭಾಗಮಂಡಲ-ಕರಿಕೆ ಹಾದಿಯಲ್ಲಿ ಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆ.
ಭಾಗಮಂಡಲ-ಕರಿಕೆ ಹಾದಿಯಲ್ಲಿ ಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT