ಕುಶಾಲನಗರ: ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಮಕ್ಕಳಲ್ಲಿ ಸಾಮರಸ್ಯ ಬೆಳೆಸಲು ಪ್ರಸಕ್ತ ಸಾಲಿನಲ್ಲಿ ‘ನಾವು ಮನುಜರು’ ವಿನೂತನ ಕಾರ್ಯಕ್ರಮ ಆರಂಭಿಸಲಾಯಿತು.
ಶಾಲಾ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ‘ಮಕ್ಕಳಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಪ್ರಜ್ಞೆ, ಮೌಢ್ಯಗಳ ನಿವಾರಣೆ ಬಗ್ಗೆ ಜಾಗೃತಿ ಸೇರಿದಂತೆ ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸಲು ಸರ್ಕಾರವು ಶಾಲೆಗಳಲ್ಲಿ ‘ನಾವು ಮನುಜರು’ ಕಾರ್ಯಕ್ರಮ ಪ್ರಾರಂಭಿಸಿದೆ’ ಎಂದರು.
‘ಮೌಲ್ಯಯುತ ಶಿಕ್ಷಣ ಮತ್ತು ಸಹಬಾಳ್ವೆಯನ್ನು ಉತ್ತೇಜಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸಂವಾದ ಏರ್ಪಡಿಸಲಾಗುವುದು’ ಎಂದರು.
ರಂಗಭೂಮಿ ಕಲಾವಿದ ಭರಮಣ್ಣ ಟಿ.ಬೆಟ್ಟಗೇರಿ ಮಾತನಾಡಿ, ‘ದೇಶದ ಸಮಾಜ ಸುಧಾರಕರು, ಕ್ರಾಂತಿಗಳ ಮಾಹಿತಿ ಒದಗಿಸುವುದು, ಸಮೀಪದ ಐತಿಹಾಸಿಕ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಈ ಕಾರ್ಯಕ್ರಮದ ಉದ್ದೇಶ’ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಕೆ.ಪಿ.ರೇವಣ್ಣ, ಕೆಂಪು ಎಸ್.ರಾಜಾಚಾರಿ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಡಿ.ರಮ್ಯಾ, ಬಿ.ಎನ್.ಸುಜಾತಾ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯಾ ಭಾಗವಹಿಸಿದ್ದರು.