ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಚಿತ್ರಕಲಾ ಪ್ರತಿಭೆ ಎಸ್.ಆರ್.ಅಕ್ಷತಾ

ಸರ್ಕಾರಿ ಶಾಲೆಗಳ ಗೋಡೆಗಳ ಮೇಲೆ ಅರಳುವ ಚಿತ್ತಾರ
Last Updated 14 ಡಿಸೆಂಬರ್ 2022, 8:45 IST
ಅಕ್ಷರ ಗಾತ್ರ

ಶನಿವಾರಸಂತೆ: ‘ಎಷ್ಟು ಚಂದದ ಚಿತ್ರಗಳು…! ಶಾಲೆಯ ಗೋಡೆಗಳ ಮೇಲೆ ಚಿತ್ರ ಬಿಡಿಸಿದವರಾರು? ಈ ಉದ್ಗಾರ ಕೊಡ್ಲಿಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಂದೆ ನಿಂತವರಿಂದ ಬಾರದೇ ಇರದು.

ಈ ಶಾಲೆ ಹಾಗೂ ಸಾರ್ವಜನಿಕ ಗ್ರಂಥಾಲಯದ ಗೋಡೆಗಳಲ್ಲಿ ಬಿಡಿಸಿ ರುವ ಚಿತ್ರಗಳು ಚಿತ್ತಾಕರ್ಷಕವಾ ಗಿದ್ದು ನೋಡುಗರ ಗಮನ ಸೆಳೆಯುತ್ತಿವೆ. ಈ ಚಿ‌ತ್ರ ಬಿಡಿಸಿದ ಕಲಾವಿದೆ ಎಸ್.ಆರ್.ಅಕ್ಷತಾ.

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದಲ್ಲಿ ಈ ಗ್ರಾಮೀಣ ಕಲಾ ಪ್ರತಿಭೆ ಸಮಾಜಮುಖಿಯಾಗಿ ಸದ್ದಿಲ್ಲದೆ ಅರಳುತ್ತಿದೆ.

ಅಧ್ಯಯನದಲ್ಲಿ ತೊಡಗಿದ್ದರೂ ಕಲಿಕೆಯ ಜತೆಯಲ್ಲೇ ಅಕ್ಷತಾ ಅವರ ಚಿತ್ರಕಲೆ ಸರ್ಕಾರಿ ಶಾಲೆಗಳ, ಗ್ರಂಥಾ ಲಯ ಹಾಗೂ ಕಚೇರಿಗಳ ಗೋಡೆ ಗಳಲ್ಲಿ ಮೂಡಿದ್ದು ಆಕೆಯ ಪ್ರತಿಭೆ ಮಿಂಚುತ್ತಿದೆ. ನೋಡುಗರ ಕಣ್ಮನ ಸೆಳೆಯುತ್ತಿದೆ.

ಕಾಷ್ಠ ಶಿಲ್ಪಿ ರಮೇಶ್- ಕವಿತಾ ದಂಪತಿಯ ಪುತ್ರಿಯಾಗಿರುವ ಅಕ್ಷತಾ ಅವರಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಕೆಯ ಪ್ರತಿಭೆಗೆ ಉತ್ತಮ ವೇದಿಕೆಯಾಯಿತು. ಶಿಕ್ಷಕ ಡಿ.ಪಿ.ಸತೀಶ್ ಅವರ ಮಾರ್ಗದರ್ಶನ, ಇತರ ಶಿಕ್ಷಕರ ಪ್ರೋತ್ಸಾಹ ಪ್ರತಿಭೆಗೆ ಸಾಣೆ ಹಿಡಿಯಿತು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದರು.

ಮಾಧ್ಯಮಿಕ ಶಿಕ್ಷಣದ ನಂತರ ಮಂಗಳೂರಿನ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದರು. ಮುಂದಿನ ಶಿಕ್ಷಣದ ಆಯ್ಕೆ ಎದುರಾದಾಗ ಅಕ್ಷತಾ ಅವರಿಗೆ ಚಿತ್ರಕಲೆ ಅಧ್ಯಯನಕ್ಕೆ ಪೋಷಕರ ಪ್ರೋತ್ಸಾಹ ದೊರೆಯಿತು. ಪ್ರಸ್ತುತ ಮಂಗಳೂರಿನ ಮಹಲಸ ದೃಶ್ಯ ಕಲಾ ಕಾಲೇಜಿನಲ್ಲಿ ಅಕ್ಷತಾ ದ್ವಿತೀಯ ವರ್ಷದ ವಿದ್ಯಾರ್ಥಿನಿ. 4 ವರ್ಷಗಳ ಅಧ್ಯಯನವಾದರೂ ಈಗಾಗಲೇ ಪೆನ್ಸಿಲ್ ಆರ್ಟ್, ಪೋಸ್ಟಲ್ ಕಲರ್ ಆರ್ಟ್, ತ್ರಿಡಿ ಆರ್ಟ್, ಪೆನ್ಸಿಲ್ ಶೇಡಿಂಗ್, ಅಕ್ರೇಲಿಕ್ ಆರ್ಟ್ ಇತ್ಯಾದಿ ಹಲವು ಚಿತ್ರಕಲೆಯ ವಿಧಗಳನ್ನು ಕಲಿಯುತ್ತಿದ್ದಾರೆ.

ರಜಾ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಬೋಧಿಸುತ್ತಾರೆ. ಗೋಡೆಗಳಲ್ಲಿ ಸುಂದರ ಚಿತ್ರಪಟಗಳನ್ನು ಉಚಿತವಾಗಿ ಬಿಡಿಸಿಕೊಡುತ್ತಾರೆ. ವಿದ್ಯಾರ್ಥಿನಿ ದೆಸೆಯಲ್ಲೇ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಅಕ್ಷತಾ, ಕೊಡ್ಲಿಪೇಟೆಯ ತಾನು ಕಲಿತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಉಚಿತವಾಗಿ ಚಿತ್ರಗಳನ್ನು ಬಿಡಿಸಿಕೊಡುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಕೊಡ್ಲಿಪೇಟೆ, ಬೆಸೂರು, ಬ್ಯಾಡಗೊಟ್ಟ, ಆಗಳಿ, ನಿಲುವಾಗಿಲು, ಅಂಕನಹಳ್ಳಿ ಗ್ರಾಮಗಳ ಶಾಲೆಗಳು, 1 ಗ್ರಾಮ ಪಂಚಾಯಿತಿ, ಕೊಡ್ಲಿಪೇಟೆ ಮತ್ತು ಬ್ಯಾಡಗೊಟ್ಟ ಗ್ರಾಮದ ಸಾರ್ವಜನಿಕ ಗ್ರಂಥಾಲಯಗಳ ಗೋಡೆಗಳಲ್ಲಿ ಅಕ್ಷತಾ ಅವರ ಚಿತ್ರಪಟಗಳು ರಾರಾಜಿಸುತ್ತಾ ಗಮನ ಸೆಳೆಯುತ್ತಿವೆ.

ಅಕ್ಷತಾ ಅವರ ಕನಸು ನನಸಾಗಲು, ಗುರಿ ಮುಟ್ಟಲು ಹಾಗೂ ಈ ಗ್ರಾಮೀಣ ಪ್ರತಿಭೆ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಮಿನುಗಲು ಗ್ರಾಮಸ್ಥರ ಮತ್ತು ಸಾರ್ವಜನಿಕರ ಪ್ರೋತ್ಸಾಹ ಅಗತ್ಯವಿದೆ.

‘ವಿದ್ಯಾರ್ಥಿನಿ ಅಕ್ಷತಾ ತನ್ನ ಕಲಿಕೆಯನ್ನು ಸಮಾಜಮುಖಿಯಾಗಿಸುವ ಗುರಿ ಹೊಂದಿದ್ದು ಆಕೆಯ ಪ್ರತಿಭೆ ಗ್ರಾಮ ಮಟ್ಟಕ್ಕೆ ಸೀಮಿತವಾಗದೇ ಎಲ್ಲೆಡೆ ಪಸರಿಸಲಿ’ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಡಿ.ಪಿ.ಸತೀಶ್ ಹಾರೈಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT