ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆಯಿಂದ ವ್ಯಕ್ತಿ ಸಾವು: ಎಂಟು ಮಂದಿ ಪೊಲೀಸರ ಅಮಾನತು

ಪ್ರಕರಣ ಸಿಐಡಿ ತನಿಖೆಗೆ: ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌
Last Updated 12 ಜೂನ್ 2021, 20:48 IST
ಅಕ್ಷರ ಗಾತ್ರ

ವಿರಾಜಪೇಟೆ (ಕೊಡಗು): ತೀವ್ರ ಹಲ್ಲೆಗೊಳಗಾಗಿ, ಪಟ್ಟಣದ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜಾ (50) ಎಂಬುವವರು ಶನಿವಾರ ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಎಂಟು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಪೊಲೀಸರ ಹಲ್ಲೆಯಿಂದಲೇ ರಾಯ್‌ ಮೃತಪಟ್ಟಿದ್ದಾಗಿ ಕುಟುಂಬದ ಸದಸ್ಯರು ಹಾಗೂ ಸಮುದಾಯದ ಮುಖಂಡರು ಆರೋಪಿಸಿದ್ದ ಬೆನ್ನಲ್ಲೇ, ದಕ್ಷಿಣ ವಲಯದ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ಅವರು ಶನಿವಾರ ಠಾಣೆಗೆ ಭೇಟಿ ನೀಡಿ, ಸ್ಥಳದಲ್ಲೇ ಅಮಾನತಿಗೆ ಆದೇಶಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ, ‘ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು. ರಾಬಿನ್ ಡಿಸೋಜಾ ಎಂಬುವವರು ತಮ್ಮ ಸಹೋದರ ರಾಯ್ ಡಿಸೋಜಾ ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾಗಿ ಎಸ್‌ಪಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ, ಠಾಣೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಸಿದ ವಿರಾಜಪೇಟೆ ಡಿವೈಎಸ್ಪಿ ಜಯಕುಮಾರ್‌, ಎಸ್‌ಪಿಗೆ ಸಲ್ಲಿಸಿದ್ದ ವರದಿಯ ಆಧರಿಸಿ 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ‘ ಎಂದು ಮಾಹಿತಿ ನೀಡಿದರು.

ಏನಿದು ಘಟನೆ?: ಮಾನಸಿಕ ಅಸ್ವಸ್ಥರು ಎನ್ನಲಾಗಿದ್ದ ರಾಯ್‌, ಜೂನ್‌ 9ರ ಮಧ್ಯರಾತ್ರಿ ಕತ್ತಿ ಹಿಡಿದುಕೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ; ಆಗ ರಾಯ್, ಪೊಲೀಸರ ಮೇಲೆ ಕತ್ತಿ ಬೀಸಿದ್ದಾರೆ ಎನ್ನಲಾಗಿದೆ. ಇದರಿಂದ ಸಿಬ್ಬಂದಿಯೊಬ್ಬರ ಕೈಗೆ ಗಾಯವಾಗಿತ್ತು. ನಂತರ, ಪೊಲೀಸರು ಅವರನ್ನು ಪೊಲೀಸ್ ಠಾಣೆಗೆ ಕರೆತಂದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಂದು ರಾತ್ರಿಯೇ ಅವರ ತಾಯಿಯನ್ನು ಠಾಣೆಗೆ ಕರೆಯಿಸಿ, ಅವರೊಂದಿಗೆ ಕಳುಹಿಸಿಕೊಟ್ಟಿದ್ದರು.

ಬಳಿಕ ಅವರಿಗೆ ಪಟ್ಟಣದಲ್ಲಿನ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಶುಕ್ರವಾರ ಕರೆದೊಯ್ಯಲಾಗಿತ್ತು. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ರಾಯ್ ಡಿಸೋಜಾ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಇದಕ್ಕೂ ಮೊದಲು ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ, ಕರ್ತವ್ಯ ನಿರತ ‍ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಗಿ ವಿರಾಜಪೇಟೆ ನಗರ ಠಾಣೆಯ ಕಾನ್‌ಸ್ಟೆಬಲ್‌ ಸಂಗಮೇಶ್‌ ದೂರು ನೀಡಿದ್ದರು.

ಖಂಡನೆ: ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಬೇಬಿ ಮಾಥ್ಯೂ ಹಾಗೂ ಕ್ಯಾಥೋಲಿಕ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಜಾನ್ಸನ್‌ ಪಿಂಟೋ ಘಟನೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT