ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಕರ್ಷಣೆಗೆ ಶಾಲೆ ಆವರಣದಲ್ಲಿ ‘ಮಿನಿ ಮೃಗಾಲಯ’!

ದಸರೆ ರಜೆ ಮುಗಿಸಿ ಬಂದ ಮಕ್ಕಳಿಗೆ ಮೃಗಾಲಯ ನಿರ್ಮಾಣದ ಅಚ್ಚರಿ
Last Updated 15 ಅಕ್ಟೋಬರ್ 2022, 11:35 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಮಕ್ಕಳು 15 ದಿನಗಳ ದಸರಾ ರಜೆ ಮುಗಿಸಿ ಸೋಮವಾರ ತಮ್ಮೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ದ್ವಾರ ದಾಟಿ ಆವರಣಕ್ಕೆ ಕಾಲಿಡುತ್ತಿರುವಂತೆ ಬೆರಗಾದರು.

ಇದು ಶಾಲೆಯೋ ಅಥವಾ ಮೈಸೂರಿನ ಮೃಗಾಲಯವೋ ಎಂಬ ವಿಸ್ಮಯ ಭಾವ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು.

ಹೌದು. ಶಾಲೆ ಮುಂದಿನ ಉದ್ಯಾನದಲ್ಲಿ ಮಿನಿ ಮೃಗಾಲಯ ದಸರೆ ರಜೆ ಕಳೆಯುವುದರೊಳಗೆ ನಿರ್ಮಾಣವಾಗಿತ್ತು. ಹಲವಾರು ಪ್ರಾಣಿಗಳ ಆಕೃತಿಗಳು ತಲೆಯೆತ್ತಿ ನಿಂತಿದ್ದವು. ಹುಲಿ, ಜಿರಾಫೆ, ಕಾಂಗರೂ, ಡೈನೊಸಾರ್, ಡ್ರ್ಯಾಗನ್, ಚಿಂಪಾಂಜಿ, ಘೇಂಡಾಮೃಗ, ಆಸ್ಟಿಚ್, ಮೊಸಳೆ, ಫೆಲಿಕಾನ್ ಗ್ಲೊಬ್ , ಜಿಂಕೆ, ಕುದುರೆ, ಇತ್ಯಾದಿ 15 ಕಾಂಕ್ರಿಟ್ ಕಲಾಕೃತಿಗಳನ್ನು ನೋಡಿ ಮಕ್ಕಳ ಉತ್ಸಾಹ ಮೇರೆ ಮೀರಿತು. ಒಂದೊಂದು ಪ್ರಾಣಿಯ ಕಲಾಕೃತಿಯನ್ನು ಮುಟ್ಟಿ ನೋಡಿ ಚಪ್ಪಾಳೆ ತಟ್ಟಿ, ಕುಣಿದು
ಕುಪ್ಪಳಿಸಿದರು.

ಇಲ್ಲಿನ ಪ್ರಾಣಿ-ಪಕ್ಷಿಗಳ ಕಲಾಕೃತಿ ನಿರ್ಮಾಣಕ್ಕೆ ಬಳಸಿರುವುದು ನಿರುಪಯುಕ್ತ ವಸ್ತುಗಳನ್ನು. ಹಳೆಯ ಪ್ಲಾಸ್ಟಿಕ್ ಬಾಟಲ್‌ಗಳು, ಕವರ್‌ಗಳು, ಹಳೆಯ ಬಟ್ಟೆ, ಗುಜರಿ ಅಂಗಡಿಯಿಂದ ತಂದ ಹಳೆಯ ರಾಡ್ ಮತ್ತು ತಂತಿ ಜತೆಗೆ ಸಿಮೆಂಟ್ ಬಳಸಿ ಪ್ರಾಣಿಗಳ ಮಾದರಿಯನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಾದ ಯುಗನ್, ತನ್ವಿ, ದುಷ್ಯಂತ್, ಶೀಶ್ಮಾ, ಬೃಂದಾ ರಜೆಯಲ್ಲೂ ಶಿಕ್ಷಕರಿಗೆ ಈ ಕಲಾಕೃತಿ ನಿರ್ಮಿಸಲು ಸಹಕಾರ ನೀಡಿರುವುದು ವಿಶೇಷ.

ಶಾಲೆಗೆ ಮಕ್ಕಳ ಹಾಜರಾತಿಯನ್ನು ಹೆಚ್ಚಿಸುವುದು ಇದರ ಉದ್ದೇಶ. ಈ ಮೂಲಕ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಸರ್ಕಾರಿ ಶಾಲೆ
ಕಂಗೊಳಿಸತೊಡಗಿದೆ.

ಪುಟ್ಟ ಮಕ್ಕಳ ಸಂತೋಷಕ್ಕೆ ಕಾರಣವಾದ ಶಾಲಾ ಮುಂಭಾಗದ ಈ ಕೃತಕ ಕಾಂಕ್ರಿಟ್ ಮಿನಿ ಮೃಗಾಲಯದ ನಿರ್ಮಾತೃ ಮುಖ್ಯಶಿಕ್ಷಕ ಸಿ.ಎಸ್.ಸತೀಶ್. ಇವರ ಕಾಯಕಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಅವರೂ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹದ ಜತೆಗೆ ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT