ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಾಸ್ತ್ರ ಬಿಟ್ಟು ನಕ್ಸಲರ ಸಂಚಾರ; ಭದ್ರತೆ ಹೆಚ್ಚಳಕ್ಕೆ ಬೆದರಿದರೇ ನಕ್ಸಲರು?

ಕೇರಳದ ವೈಯನಾಡು ವ್ಯಾಪ್ತಿಯಲ್ಲಿ ಭದ್ರತೆ ಹೆಚ್ಚಳ
Last Updated 26 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಅರಣ್ಯ ಪ್ರದೇಶದಲ್ಲಿ ನಕ್ಸಲರು ಶಸ್ತ್ರಾಸ್ತ್ರ ಬಿಟ್ಟು ಸಂಚರಿಸುತ್ತಿದ್ದಾರೆಯೇ? –ಹೀಗೊಂದು ಅನುಮಾನ ಜಿಲ್ಲೆಯಲ್ಲಿ ವ್ಯಕ್ತವಾಗಿದ್ದು, ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಹದ್ದಿನ ಕಣ್ಣಿಟ್ಟಿದೆ.

ತಾಲ್ಲೂಕಿನ ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮಕ್ಕೆ ಗುರುವಾರ ಮಧ್ಯಾಹ್ನ ಪುರುಷ ಹಾಗೂ ಮಹಿಳೆ ಶಸ್ತ್ರ ರಹಿತವಾಗಿ ಬಂದು ಹೋಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮನೆಯೊಂದಕ್ಕೆ ನುಗ್ಗಿ ಅಕ್ಕಿಯನ್ನೂ ಕೊಂಡೊಯ್ದಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದು, ಅವರು ನಕ್ಸಲರೇ ಅಥವಾ ಬೇರೆ ಯಾರು ಎನ್ನುವ ಸಂಶಯ ದಟ್ಟವಾಗಿದೆ.

ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ರಾಹುಲ್‌ ಗಾಂಧಿ ಸ್ಪರ್ಧಿಸಿದ್ದು, ಅದೇ ಜಿಲ್ಲೆಯಲ್ಲಿ ನಕ್ಸಲ್‌ ಹಾಗೂ ಪೊಲೀಸರ ನಡುವೆ ಮಾರ್ಚ್‌ ತಿಂಗಳಿನಲ್ಲಿ ನಡೆದಿದ್ದ ಗುಂಡಿನ ಕಾಳಗದ ನಂತರ ಅಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಇದರಿಂದಾಗಿ ಕೊಡಗಿನತ್ತ ಧಾವಿಸಿರುವ ಸಾಧ್ಯತೆಯಿದೆ. ಜಿಲ್ಲೆಯ ಗಡಿಭಾಗದ ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿತ್ತು. ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ವರಿಷ್ಠಾಧಿಕಾರಿಯೇ ಕೇರಳಕ್ಕೆ ಹೊಂದಿಕೊಂಡಿರುವ ಕುಟ್ಟ ಭಾಗಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಹಲವು ದಿನಗಳಿಂದ ಕಾರ್ಕಳ ಹಾಗೂ ಕೊಡಗು ಎಎನ್‌ಎಫ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಅದರಿಂದ ನಕ್ಸಲ್‌ ತಂಡವು ಹೆದರಿ ಬೇರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲೇ ಅಡಗಿಸಿಟ್ಟು ಪ್ರತ್ಯೇಕ ತಂಡಗಳಾಗಿ ಕೇರಳದಿಂದ ಜಿಲ್ಲೆಯತ್ತ ಬಂದಿರುವ ಸಾಧ್ಯತೆಯಿದ್ದು, ಶೋಧ ತೀವ್ರಗೊಳಿಸಲಾಗಿದೆ. ಅನುಮಾನ ಬಾರದಂತೆ ಸಾಮಾನ್ಯರಂತೆಯೇ ಓಡಾಡುತ್ತಿದ್ದಾರೆ. ಅದರ ಬೆನ್ನಲೇ ಯವಕಪಾಡಿ ಗ್ರಾಮದಲ್ಲಿ ಇಬ್ಬರು ಅಪರಿಚಿತರು ಸುಳಿದಾಡಿ ಆತಂಕ ಸೃಷ್ಟಿಸಿದ್ದಾರೆ.

ಯವಕಪಾಡಿ ಗ್ರಾಮದ ಮಹಿಳೆ ನೀಡಿರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತಡಿಯಂಡಮೋಳ್‌ ಬೆಟ್ಟದ ಆಸುಪಾಸಿನಲ್ಲಿ ಎರಡು ದಿನಗಳಿಂದ ಶೋಧ ತೀವ್ರಗೊಳಿಸಿದ್ದಾರೆ. ಕುಟ್ಟ ವ್ಯಾಪ್ತಿಯ ಹಲವು ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಬ್ರಹ್ಮಗಿರಿ ವನ್ಯಧಾಮ, ಮಾಕುಟ್ಟ, ನಾಲಾಡಿ, ಬಿರುನಾಣಿ, ಕರಿಕೆ, ತಲಕಾವೇರಿ, ಬ್ರಹ್ಮಗಿರಿ, ಶ್ರೀಮಂಗಲ, ಇರ್ಫು ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

‘ಯವಕಪಾಡಿಗೆ ಬಂದಿದ್ದ ವ್ಯಕ್ತಿಗಳು ನಕ್ಸಲರು ಧರಿಸುವ ಸಮವಸ್ತ್ರದಲ್ಲಿ ಇರಲಿಲ್ಲ. ಪುರುಷ ಪ್ಯಾಂಟ್‌– ಶರ್ಟ್‌ ತೊಟ್ಟಿದ್ದರೆ, ಮಹಿಳೆ ಚೂಡೀದಾರ್‌ ಧರಿಸಿದ್ದರು. ಇಬ್ಬರ ಬಳಿಯೂ ಯಾವುದೇ ಆಯುಧ ಇರಲಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಗ್ರಾಮದ ಮಹಿಳೆಯಿಂದ ಕಸಿದುಕೊಂಡಿದ್ದ ಮೊಬೈಲ್‌ ಸಹ ಸಮೀಪದಲ್ಲೇ ಸಿಕ್ಕಿದೆ. ಗ್ರಾಮದ ಸುತ್ತಲಿನ ಅರಣ್ಯದಲ್ಲಿ ಶೋಧ ನಡೆಸಲಾಗಿದೆ. ನಕ್ಸಲರ ಸುಳಿವು ಸಿಕ್ಕಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಕ್ಷಣೆಗೆ ಮನವಿ
‘ಕುಡಿಯ ಸಮುದಾಯದ ಮುಖಂಡರೊಬ್ಬರ ಮನೆಗೆ ಬಾಗಿಲು ಇರಲಿಲ್ಲ. ಅವರ ಮನೆಯಲ್ಲಿದ್ದ 15 ಕೆ.ಜಿಯಷ್ಟು ಅಕ್ಕಿ ಕಾಣಿಸುತ್ತಿಲ್ಲ. ಹೀಗಾಗಿ, ಭಯ ಉಂಟಾಗಿದೆ. ನಮಗೆ ರಕ್ಷಣೆ ಬೇಕು’ ಎಂದು ಬುಡಕಟ್ಟು ಕೃಷಿಕರ ಸಂಘದ ಮುಖಂಡರೊಬ್ಬರು ಅಳಲು ತೋಡಿಕೊಂಡಿದ್ದಾರೆ.

‘ಮನೆ ಬಳಿ ನೆಟ್‌ವರ್ಕ್‌ ಸಿಗದಿರುವ ಕಾರಣ ಕರೆ ಮಾಡಲು ತೋಟದತ್ತ ತೆರಳುತ್ತಿದೆ. ಆಗ ಇಬ್ಬರು ದಿಢೀರ್‌ ಪ್ರತ್ಯಕ್ಷಗೊಂಡರು. ಭಯವಾಗಿ ಕೂಗಾಡಿದೆ. ಚೂಡಿದಾರ ತೊಟ್ಟಿದ್ದ ಮಹಿಳೆ ಮೊಬೈಲ್‌ ಕಸಿದುಕೊಂಡು, ಯಾರಿಗಾದರೂ ಮಾಹಿತಿ ನೀಡಿದರೆ ಪ್ರಾಣ ತೆಗೆಯುತ್ತೇವೆಂದು ಬೆದರಿಕೆ ಒಡ್ಡಿದರು’ ಎಂದು ಮೊಬೈಲ್‌ ಕಳೆದುಕೊಂಡಿದ್ದ ಮಹಿಳೆ ಹೇಳಿದರು.

***

ಯವಕಪಾಡಿ ಗ್ರಾಮಸ್ಥರಿಗೆ ಶಂಕಿತ ನಕ್ಸಲರ ಭಾವಚಿತ್ರ ತೋರಿಸಲಾಗಿದೆ. ಭೇಟಿ ನೀಡಿದ್ದ ವ್ಯಕ್ತಿಗಳಿಗೂ, ನಕ್ಸಲರ ಭಾವಚಿತ್ರಕ್ಕೂ ಹೋಲಿಕೆ ಆಗುತ್ತಿಲ್ಲ
– ಡಾ.ಸುಮನ್‌ ಡಿ.ಪೆನ್ನೇಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಕೊಡಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT