ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವದ ರಂಗು, ಹೂವಿನ ಸೊಬಗು

ಪ್ರವಾಸಿಗರ ಸೆಳೆಯಲು ಸಜ್ಜಾಗಿದೆ ‘ಮಂಜಿನ ನಗರಿ’
Last Updated 10 ಜನವರಿ 2019, 9:02 IST
ಅಕ್ಷರ ಗಾತ್ರ

ಮಡಿಕೇರಿ: ಬಹುದಿನಗಳ ಬಳಿಕ ಮಂಜಿನ ನಗರಿಮಡಿಕೇರಿಯು ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಆಗುತ್ತಿದೆ. ಜ.11, 12 ಹಾಗೂ 13ರಂದು ಕೊಡಗು ಪ್ರವಾಸಿ ಉತ್ಸವದ ಹೆಸರಿನಲ್ಲಿ ನಡೆಯುವ ಸಾಂಸ್ಕೃತಿಕ ರಸದೌತಣವು ಕಲಾರಸಿಕರನ್ನು ರಂಜಿಸಲಿದೆ. ಫಲಪುಷ್ಪ ಪ್ರದರ್ಶನಕ್ಕೂ ರಾಜಾಸೀಟ್‌ ಸಜ್ಜಾಗಿದೆ. ಕೊಡಗು ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮೂರು ದಿನಗಳ ಕಾಲ ಕಾರ್ಯಕ್ರಮಕ್ಕೆ ಗಾಂಧಿ ಮೈದಾನದಲ್ಲಿ ಬೃಹತ್‌ ವೇದಿಕೆ ಹಾಕಲಾಗಿದೆ. ಪ್ರೇಕ್ಷಕರು ಕುಳಿತು ವೀಕ್ಷಿಸಿಲು ಕುರ್ಚಿ ವ್ಯವಸ್ಥೆ, ದೊಡ್ಡ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ವೇದಿಕೆ ಎದುರು ಕೊಡವ ಸೇರಿದಂತೆ ಹಲವು ಬಗೆಯ ಖಾದ್ಯ ಸವಿಯಲು 30ಕ್ಕೂ ಹೆಚ್ಚು ಮಳಿಗೆಗಳು ಸಜ್ಜಾಗಿವೆ. ‘ಮೈತ್ರಿ’ ಸರ್ಕಾರದ ಸಾಧನೆ ಅನಾವರಣಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೃಹತ್‌ ಮಳಿಗೆಯೊಂದು ಆಕರ್ಷಿಸುತ್ತಿದೆ.

ಮೊದಲ ದಿನವು ಎಂ.ಡಿ.ಪಲ್ಲವಿ ತಂಡದ ‘ಜುಗಲ್‌ಬಂದಿ’ಯ ಆಕರ್ಷಣೆ. ಬಳಿಕ ಸರಿಗಮಪ ಲಿಟ್ಲ್‌ ಚಾಂಪ್ಸ್‌ ತಂಡದಿಂದ ಸಂಗೀತ ಸಂಜೆ, ಡಾನ್ಸ್‌ ಕರ್ನಾಟಕ ಡಾನ್ಸ್‌ ಮಕ್ಕಳಿಂದ ನೃತ್ಯ ವೈಭವ ಮನಸೂರೆಗೊಳಿಸಲಿದೆ. ಭಾನುವಾರ ನಡೆಯುವ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ಗಾಗಿ ರಾಜಾಸೀಟ್‌ನ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಸಿಗರ ವಾಹನ ಸಂಚಾರ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಮಾರ್ಗ ಬದಲಾವಣೆ ಮಾಡಿಕೊಂಡಿದೆ.

ಹೂವಿನ ಆಕರ್ಷಣೆ: ರಾಜಾಸೀಟ್‌ನಲ್ಲಿ ಬಗೆಬಗೆಯ ಹೂವಿನ ರಾಶಿಗಳು ಅರಳಿ ನಿಂತಿವೆ. ಮೂರು ದಿನವೂ ಸಾರ್ವಜನಿಕರಿಗೆ ಬೆಳಿಗ್ಗೆ 10ರಿಂದ ರಾತ್ರಿ 8.30ರ ತನಕ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಮುಕ್ತ ಅವಕಾಶವಿದೆ. ಪೇಟೂನಿಯ, ಸೇವಂತಿಗೆ, ಚೆಂಡು ಹೂವು, ಪ್ಲಾಕ್ಸ್‌, ವಿಂಕಾ, ರೋಸಿಯಾ, ಡೇಲಿಯಾ ಸೇರಿದಂತೆ ತೋಟಗಾರಿಕೆ ಪಾತಿಯಲ್ಲಿ ನಾಟಿ ಮಾಡಿದ್ದ 5 ಸಾವಿರ ಹೂವಿನ ಪಾಟ್‌ಗಳುಉದ್ಯಾನದಲ್ಲಿ ನಳಿನಳಿಸುತ್ತಿವೆ.

ಗುರುವಾರ ಕಾರ್ಮಿಕರು ಕಲಾಕೃತಿ ರಚನೆಯ ಅಂತಿಮ ಕಾರ್ಯದಲ್ಲಿ ಮಗ್ನರಾಗಿದ್ದರು. ಕೊಡಗಿನ ಕುಲದೇವತೆ ಕಾವೇರಿ, ತೀರ್ಥೋದ್ಭವದ ಬ್ರಹ್ಮಕುಂಡಿಕೆ, ಜಲಕೃಷಿ ಮಾದರಿಯಲ್ಲಿ ಹಣ್ಣು ತರಕಾರಿ ಬೆಳೆಯುವ ಪ್ರಾತ್ಯಕ್ಷಿಕೆ, ಮಾವು, ಕಿತ್ತಳೆ, ಅನಾನಸ್‌ ಹಣ್ಣುಗಳು, ದಪ್ಪ ಮೆಣಸಿನಕಾಯಿಯಿಂದ ಆನೆ, ನವಿಲು, ಗಿಟಾರ್‌, ತಬಲ ಮಾದರಿಯ ಕಲಾಕೃತಿಗಳನ್ನು ರಚಿಸಲಾಗುತ್ತಿದೆ. ಈ ಎಲ್ಲವೂ ನೋಡುಗರ ಕಣ್ಮನ ತಣಿಸಲಿವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಪ್ರವಾಸಿಗರ ನಿರೀಕ್ಷೆ: ಪ್ರಾಕೃತಿಕ ವಿಕೋಪದ ಬಳಿಕ ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಇದರಿಂದ ಹೋಟೆಲ್‌ ಹಾಗೂ ರೆಸಾರ್ಟ್‌ ಮಾಲೀಕರು, ಹೋಂಸ್ಟೇ ಮಾಲೀಕರು ನಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ‘ಕೊಡಗು ಸುರಕ್ಷಿತವಾಗಿದೆ. ಮಡಿಕೇರಿಗೆ ಬಂದರೆ ಯಾವುದೇ ತೊಂದರೆ ಇಲ್ಲ’ವೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಾಂದೋಲನ ಆರಂಭಿಸಿದ್ದರು. ಬಳಿಕ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡಿದ್ದರು. ಈಗ ಪ್ರವಾಸೋದ್ಯಮ ಇಲಾಖೆಯೇ ಪ್ರವಾಸಿಗರ ಸೆಳೆಯಲು ಮುಂದಾಗಿದ್ದು ಹಲವು ನಿರೀಕ್ಷೆಗಳು ಗರಿಗೆದರಿವೆ. ನಿಧಾನವಾಗಿ ಕೊಡಗಿನ ಪ್ರವಾಸೋದ್ಯಮ ಚೇತರಿಕೆಯ ಹಾದಿ ಹಿಡಿದಿದ್ದು, ಉದ್ದಿಮೆದಾರರು ನಿಟ್ಟಿಸಿರು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT