ಕೊಡಗು: ಸಾಹಸ ಜಲಕ್ರೀಡೆಗೆ ರ‍್ಯಾಫ್ಟಿಂಗ್ ಆರಂಭ

ಮಂಗಳವಾರ, ಜೂಲೈ 23, 2019
27 °C
ಕುಶಾಲನಗರ ದುಬಾರೆಯಲ್ಲಿ ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ಕೊಡಗು: ಸಾಹಸ ಜಲಕ್ರೀಡೆಗೆ ರ‍್ಯಾಫ್ಟಿಂಗ್ ಆರಂಭ

Published:
Updated:
Prajavani

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ದುಬಾರೆ ಬಳಿಯ ಕಾವೇರಿ ನದಿಯಲ್ಲಿ ಜಲಕ್ರೀಡೆಗೆ ಅನುಮತಿ ಸಿಕ್ಕಿದ್ದು ಶುಕ್ರವಾರ ಡಿವೈಎಸ್ಪಿ ಪಿ.ಕೆ.ಮುರಳೀಧರ್ ಅವರು ರ‍್ಯಾಫ್ಟಿಂಗ್ ಕ್ರೀಡೆಗೆ ಚಾಲನೆ ನೀಡಿದರು. 

ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ರಿವರ್ ರ‍್ಯಾಫ್ಟಿಂಗ್ ಮತ್ತೆ ಆರಂಭಗೊಂಡು ಪ್ರವಾಸಿಗರಲ್ಲಿ ಹಾಗೂ ಉದ್ಯಮಿಗಳಿಗೆ ಹರ್ಷ ತಂದಿದೆ. ಇದರೊಂದಿಗೆ ಅರಣ್ಯ ಇಲಾಖೆ ನಡೆಸುವ ದೋಣಿ ವಿಹಾರವು ಆರಂಭವಾಗಿದೆ. ದೂರದ ಊರುಗಳಿಂದ ಬಂದ ಪ್ರವಾಸಿಗರು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ, ರ‍್ಯಾಫ್ಟಿಂಗ್ ಹಾಗೂ ದೋಣಿ ವಿಹಾರದಲ್ಲಿ ಪಾಲ್ಗೊಂಡರು.

ದುಬಾರೆ ಪ್ರವಾಸಿ ತಾಣದಲ್ಲಿ ಸ್ಥಳೀಯ ವ್ಯಾಪಾರಿಗಳು ಎಂದಿನಂತೆ ತಮ್ಮ ಅಂಗಡಿ– ಮುಂಗಟ್ಟುಗಳನ್ನು ತೆರೆದು ವ್ಯಾಪಾರ ನಡೆಸಿದರು.

ಐದು ಮಂದಿಗೆ ಅವಕಾಶ: 

ದುಬಾರೆ ಕಾವೇರಿ ನದಿಯಲ್ಲಿ ರಿವರ್ ರ‍್ಯಾಫ್ಟಿಂಗ್ ನಡೆಸಲು ಐದು ಮಂದಿಗೆ ಮೊದಲ ಹಂತವಾಗಿ ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರು ಅನುಮತಿ ನೀಡಿದ್ದಾರೆ. ಪ್ರತಿಯೊಬ್ಬ ರ‍್ಯಾಫ್ಟಿಂಗ್ ಮಾಲೀಕರು ತಲಾ ಎರಡು ರ‍್ಯಾಫ್ಟಿಂಗ್‌ಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಅಲ್ಲದೇ ದುಬಾರೆ ಹೊರತು ಪಡಿಸಿ ಕಾವೇರಿ ನದಿಯ ಇತರೆ ಭಾಗಗಳಲ್ಲಿ ರ‍್ಯಾಫ್ಟಿಂಗ್ ನಡೆಸದಂತೆ ನಿರ್ದೇಶನ ನೀಡಿದ್ದಾರೆ.

ದುಬಾರೆ ರ‍್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ನಂಜುಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ದುಬಾರೆಯಲ್ಲಿರುವ ಟಿಕೆಟ್ ವಿತರಣಾ ಕೇಂದ್ರದಲ್ಲಿ ಬೆಳಿಗ್ಗೆ ಗಣಪತಿ ಹೋಮ ನಡೆಸಿದರು.

ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಕೆ.ಎಸ್.ರತೀಶ್, ಸಿ.ಎಲ್.ವಿಶ್ವ, ಸಾಗರ್ ವಸಂತ್, ಚೇತನ್, ಸುಜಿತ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನದೀಶ್ ಕುಮಾರ್, ಪ್ರೊಪೇಷನರಿ ಎಸ್.ಐ. ಅರ್ಚನಾ, ಗ್ರಾ.ಪಂ ಸದಸ್ಯ ಸುಮೇಶ್, ಮಾಜಿ ಸದಸ್ಯ ನಂದ ಹಾಗೂ ಗ್ರಾಮಸ್ಥರು ಇದ್ದರು. ಇದೇ ಸಂದರ್ಭ ದುಬಾರೆ ಆವರಣದಲ್ಲಿ ಡಿವೈಎಸ್ಪಿ ಮುರಳೀಧರ್ ಅವರು ಗಿಡ ನೇಟ್ಟು ನೀರು ಹಾಕಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !