ಫೆ.11ಕ್ಕೆ ಪರಿಸರವಾದಿಗಳ ವಿರುದ್ಧ ಹೋರಾಟ

7
ಸೇವ್‌ ಕೊಡಗು ಆಂದೋಲನದಿಂದ ಆಯೋಜನೆ

ಫೆ.11ಕ್ಕೆ ಪರಿಸರವಾದಿಗಳ ವಿರುದ್ಧ ಹೋರಾಟ

Published:
Updated:

ಮಡಿಕೇರಿ: ಕೊಡಗಿನ ಅಭಿವೃದ್ಧಿಗೆ ತೊಡಕ್ಕಾಗಿರುವ ಪರಿಸರವಾದಿಗಳ ವಿರುದ್ಧ ಸೇವ್‌ ಕೊಡಗು ಆಂದೋಲನದ ವತಿಯಿಂದ ಫೆ. 11ರಂದು ಗೋಣಿಕೊಪ್ಪಲಿನಲ್ಲಿ ಬೃಹತ್‌ ಪ್ರತಿಭಟನಾ ರ್‍ಯಾಲಿ ಹಾಗೂ ಸಭೆ ಆಯೋಜಿಸಲಾಗಿದೆ ಎಂದು ಆಂದೋಲನದ ಸಂಚಾಲಕ ಮಧು ಬೋಪ್ಪಣ್ಣ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪರಿಸರವಾದಿಗಳ ವಿರುದ್ಧ ರಾಜಕೀಯ ರಹಿತ, ಜಾತ್ಯತೀತ, ಧರ್ಮಾತೀತವಾಗಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ್‍ಯಾಲಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ಕೊಡಗಿನಲ್ಲಿ ಭೂಹಿಡುವಳಿದಾರರಿಂದ ಪರಿಸರ ನಾಶವಾಗಿಲ್ಲ. ಬದಲಿಗೆ ಕೊಡಗಿನಲ್ಲಿ ಸದಾ ಹಸಿರಿನಿಂದ ಕಂಗೊಳಿಸಲು ಇಲ್ಲಿನ ಕೃಷಿಕರೇ ಕಾರಣರಾಗಿದ್ದಾರೆ. ಆದರೆ, ಕೆಲವು ಪರಿಸರವಾದಿಗಳು ಮಾತ್ರ ವಿದೇಶಿ ಹಣದ ವ್ಯಾಮೋಹಕ್ಕಾಗಿ ಪರಿಸರ ನಾಶವಾಗುತ್ತಿವೆ ಎಂದು ಅಪಪ್ರಚಾರ ಮಾಡಿ ರೈಲು ಹಾಗೂ ರಸ್ತೆ ಯೋಜನೆಗಳಿಗೆ ತೊಡಕ್ಕಾಗಿದ್ದಾರೆ’ ಎಂದು ದೂರಿದರು.

‘ಈ ಹಿಂದೆ ಅರಣ್ಯ ಇಲಾಖೆಯ ಉನ್ನತ್ತ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಜಿಲ್ಲೆಯ ಬಾಣೆ ಜಮೀನುಗಳನ್ನು ಸರ್ಕಾರದ ಅರಣ್ಯ ಪ್ರದೇಶವೆಂದು ಘೋಷಿಸಿ ಸರ್ಕಾರದ ಸುತ್ತೋಲೆ ಹೊರಡಿಸುವಲ್ಲಿ ಯಶಸ್ವಿ ಆಗಿದ್ದಾರೆ’ ಎಂದು ಆರೋಪಿಸಿದರು.

‘ಢೋಂಗಿ ಪರಿಸರವಾದಿಗಳು ಪರಿಸರ ರಕ್ಷಣೆ ಹೆಸರಿನಲ್ಲಿ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತಿದ್ದು ಇಲ್ಲಿನ ಜನರ ಬೆಂಬಲ ಸಿಗದೆ ಬೆಂಗಳೂರು, ಮೈಸೂರು ಭಾಗಗಳಿಂದ ಜನಗಳನ್ನು ಕರೆಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಡಿಸೆಂಬರ್‌ನಲ್ಲಿ ನಡೆದ ಹೋರಾಟದಲ್ಲಿ ಜಿಲ್ಲೆಯ ಜನರೇ ಇರಲಿಲ್ಲ’ ಎಂದು ಮಧು ಬೋಪ್ಪಣ್ಣ ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ಕೊಡಗನ್ನು ಸಂಪೂರ್ಣವಾಗಿ ಸೂಕ್ಮ ವಲಯವನ್ನಾಗಿ ಘೋಷಿಸುವುದು, ಬಾಣೆ ಜಮೀನನ್ನು ಡೀಮ್ಡ್‌ ಫಾರೆಸ್ಟ್ ಮಾಡುವ ಷಡ್ಯಂತ್ರಗಳು ನಡೆಯುತ್ತಿವೆ. ಕೊಡಗನ್ನು ನಾಶ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಕೇಂದ್ರದ ಮಂತ್ರಿ ಮಂಡಲಕ್ಕೆ ಪರಿಸರವಾದಿಗಳು ಕೊಡಗಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತೆ ಸಾವಿರಾರು ಪತ್ರಗಳನ್ನು ರವಾನಿದ್ದಾರೆ. ಇದರಿಂದ ಮಂತ್ರಿ ಮಂಡಲದಲ್ಲಿ ಕೊಡಗಿನ ಪರಿಸರದ ರಕ್ಷಣೆಗೆ ಅಭಿವೃದ್ಧಿ ಕಾರ್ಯ ಬೇಡವೆನ್ನುವ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರವಾದಿಗಳ ಹೋರಾಟದಿಂದ ಕೇಂದ್ರದಿಂದ ಬೃಹತ್‌ ಯೋಜನೆಗೆಂದು ಬರುವ ಹಣಗಳ ಬಳಕೆಯಾಗದೇ ವಾಪಸ್‌ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನು ಕೋರಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಅರುಣ್‌ ಭೀಮಯ್ಯ ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭ ನಿರಾಶ್ರಿತರಾದ ಕುಟುಂಬಗಳನ್ನು ಕೃಷಿಭೂಮಿ ಹಾಗೂ ಮನೆಗಳು ವಾಸಕ್ಕೆ ಯೋಗ್ಯಯಿಲ್ಲ ಎಂದು ಹೇಳಿ ಒಕ್ಕಲು ಎಬ್ಬಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನು ಕೆಲವರು ಸಂತ್ರಸ್ತರ ಆಸ್ತಿಗಳನ್ನು ಖರೀದಿ ಮಾಡಲು ದುಪ್ಪಟ್ಟು ಬೆಲೆ ನೀಡುವ ಆಮಿಷವೊಡ್ಡುತ್ತಿದ್ದಾರೆ’ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಟಾಟು ಮೊಣ್ಣಪ್ಪ, ಸೇವ್‌ ಕೊಡಗು ಪದಾಧಿಕಾರಿ ಬಿ.ಟಿ. ದಿನೇಶ್‌, ಜೆಡಿಎಸ್‌ ಮುಖಂಡ ವಿಶ್ವನಾಥ್‌ ಹಾಜರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !