ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಯಲ್ಲಿ ರಾಶಿ ರಾಶಿ ಬಾಟಲಿ!

ಮಂಜಿನ ನಗರಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
Last Updated 23 ಫೆಬ್ರುವರಿ 2019, 11:09 IST
ಅಕ್ಷರ ಗಾತ್ರ

ಮಡಿಕೇರಿ: ಚರಂಡಿ ತುಂಬೆಲ್ಲಾ ದುರ್ವಾಸನೆ... ರಾಶಿ ರಾಶಿ ಖಾಲಿ ಬಾಟಲಿಗಳು... ಮೂಟೆಗಟ್ಟಲೇ ಪ್ಲಾಸ್ಟಿಕ್‌... ಕಲುಷಿತ ನೀರು...

–ಇದು ಜಿಲ್ಲಾ ಕೇಂದ್ರ ಮಡಿಕೇರಿ ಹೃದಯ ಭಾಗದಲ್ಲಿ ಹರಿಯುತ್ತಿರುವ ಚರಂಡಿಯ ಅಯೋಮಯ ಸ್ಥಿತಿ.

ನಗರಸಭೆ ಹಾಗೂ ಗ್ರೀನ್‌ ಸಿಟಿ ಫೋರಂ ಆಶ್ರಯದಲ್ಲಿ ಶನಿವಾರ ಬೃಹತ್‌ ಚರಂಡಿ ಸ್ವಚ್ಛತಾ ಆಂದೋಲನಾ ನಡೆಯಿತು. ಫೋರಂ ಸಂಘಟನೆಯು ನಗರಸಭೆ ಆಡಳಿತಕ್ಕೆ ಮನವಿ ಮಾಡಿಕೊಂಡ ಮೇರೆಗೆ ಚರಂಡಿ ಸ್ವಚ್ಛಗೊಳಿಸಲು ಚಾಲನೆ ದೊರೆಯಿತು.

ಶನಿವಾರ ಬೆಳ್ಳಂಬೆಳಿಗ್ಗೆಯೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಹರಿಯುತ್ತಿರುವ ಚರಂಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪೌರ ಕಾರ್ಮಿಕರು ನಿರತರಾಗಿದ್ದರು. ಅದಕ್ಕೆ ಹಲವು ಕೈಜೋಡಿಸಿದ್ದರು.

ಜೆಸಿಬಿ ಸಹಾಯದಿಂದ ಚರಂಡಿಯಲ್ಲಿದ್ದ ತ್ಯಾಜ್ಯಗಳನ್ನು ಹೊರ ತೆಗೆಯಲಾಯಿತು. ಚರಂಡಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಮೂಲಕ ನಗರ ಸೌಂದರ್ಯ ಕಾಪಾಡಲು ಪಣ ತೊಡಲಾಯಿತು.

ಚರಂಡಿ ಸಮೀಪದಲ್ಲಿರುವ ವಸತಿ ಗೃಹ, ಹೋಟೆಲ್‌ ಸಿಬ್ಬಂದಿ ತ್ಯಾಜ್ಯವನ್ನು ನೇರವಾಗಿ ಚರಂಡಿ ಹಾಕುತ್ತಿದ್ದಾರೆ ಎಂದು ಗ್ರೀನ್ ಸಿಟಿ ಫೋರಂ ಮುಖಂಡರು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು. ‘ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಚರಂಡಿ ಅಕ್ಕಪಕ್ಕದ ಮಾಲೀಕರಿಗೆ ಎಚ್ಚರಿಕೆ ನೀಡುತ್ತೇವೆ’ ಎಂದು ಪೌರಾಯುಕ್ತರು ಭರವಸೆ ನೀಡಿದರು.

ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ನೇತೃತ್ವದಲ್ಲಿ ಚರಂಡಿ ಸಮೀಪದಲ್ಲಿ ವ್ಯಾಪಾರ ನಡೆಸುತ್ತಿರುವ ವರ್ತಕರ ಬಳಿಗೆ ತೆರಳಿ, ತ್ಯಾಜ್ಯ ಹಾಕದ್ದಂತೆ ಮನವಿ ಮಾಡಿಕೊಳ್ಳಲಾಯಿತು.

ಸಾರ್ವಜನಿಕರು ಕೂಡ ತ್ಯಾಜ್ಯವನ್ನು ಚರಂಡಿಗೆ ಹಾಕದ್ದಂತೆ ನೋಡಿಕೊಳ್ಳುವಂತೆ ಮನವಿ ಮಾಡಲಾಯಿತು. ಅದಕ್ಕೆ ವರ್ತಕರೂ ಸಕಾರಾತ್ಮಕವಾಗಿ ಸ್ಪಂದಿಸಿದರು.

‘ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರೀನ್ ಸಿಟಿ ಫೋರಂ ಕಳಕಳಿ ಮೆಚ್ಚುವಂತಹದ್ದು. ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಚ್ಛತೆ ಕಾಪಾಡಲು ನಗರಸಭೆಯೊಂದಿಗೆ ಕೈಜೋಡಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯ ಪ್ರಕಾಶ್ ಆಚಾರ್ಯ, ಪೌರಾಯುಕ್ತ ಬಿ.ರಮೇಶ್ ಕೋರಿದರು.

ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ಖಜಾಂಚಿ ಕನ್ನಂಡ ಕವಿತಾ ಬೊಳ್ಳಪ್ಪ, ಸ್ಥಾಪಕ ಅಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕರಾದ ಪಿ.ಕೃಷ್ಣಮೂರ್ತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ರತನ್ ತಮ್ಮಯ್ಯ, ಮೋಂತಿ ಗಣೇಶ್, ಸವಿತಾ ಭಟ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT