ದೌರ್ಜನ್ಯ ಖಂಡಿಸಿ ನಗರದಲ್ಲಿ ಪ್ರತಿಭಟನೆ

ಶುಕ್ರವಾರ, ಜೂಲೈ 19, 2019
24 °C
ಮಡಿಕೇರಿ ಚೌಕಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಆಕ್ರೋಶ

ದೌರ್ಜನ್ಯ ಖಂಡಿಸಿ ನಗರದಲ್ಲಿ ಪ್ರತಿಭಟನೆ

Published:
Updated:
Prajavani

ಮಡಿಕೇರಿ: ದಲಿತ ಹಾಗೂ ಮುಸ್ಲಿಂ ಸಮುದಾಯದ ಮೇಲಿನ ದೌರ್ಜನ್ಯ ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಮಂಗಳವಾರ ನಗರದ ಚೌಕಿಯಲ್ಲಿ ಪ್ರತಿಭಟನೆ ನಡೆಯಿತು.

ದಲಿತರ ಮೇಲೆ ನಿರಂತರ ಕೃತ್ಯಗಳು ಎಸಗಿರುವವರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ದೌರ್ಜನ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಗಡೀಪಾರು ಮಾಡಿ ರೌಡಿಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದೇಶದಲ್ಲಿ ಮೇಲ್ವರ್ಗದ ಜನರ ತುಳಿತಕ್ಕೆ ಒಳಗಾಗಿದ್ದ ದಲಿತರು ಸಮಾನತೆಯಿಂದ ಬದುಕಬೇಕು ಎನ್ನುವ ಆಶಯದಿಂದ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿ, ಜಾರಿಗೆ ತಂದಿದ್ದಾರೆ. ಆದರೆ, ಇಂದಿಗೂ ಮುಸ್ಲಿಮರು ಹಾಗೂ ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ ಎಂದು ಎಸ್‌ಡಿಪಿಐ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ಅಬ್ದುಲ್ ಹ್ಯಾರೀಸ್‌ ಮಾತನಾಡಿ , ‘ಕಳೆದ 4 ವರ್ಷಗಳಿಂದ ರಾಜ್ಯದಲ್ಲಿ ದಲಿತ ಹಾಗೂ ಮುಸ್ಲಿಂ ವರ್ಗದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದಲಿತ ವಿದ್ಯಾರ್ಥಿ ಎಸ್‌.ಪ್ರದೀಪ್‌ನ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಇನ್ನು ಬೆಂಗಳೂರಿನ ರಾಮನಗರದಲ್ಲಿ ಸೈಯ್ಯದ್ ತೌಫಿಕ್ ಎಂಬ ಅಮಾಯಕನ ಮೇಲೆ ದೌರ್ಜನ್ಯವಾಗಿ ಎರಡು ತಿಂಗಳು ಕಳೆದರೂ, ತಪ್ಪಿತಸ್ಥನ ವಿರುದ್ಧ ಕ್ರಮವಾಗಿಲ್ಲ ಎಂದು ಆರೋಪಿಸಿದರು.

ದೇವಸ್ಥಾನ ಅಪವಿತ್ರವಾಗಿದೆಯೆಂದು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಹೊಡೆದು ಜಾತಿ ನಿಂದನೆ ಮಾಡಿ ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಹೇಯ ಕೃತ್ಯ ಎಂದು ಹ್ಯಾರೀಸ್‌ ವಿಷಾದಿಸಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಟಿ.ಎಚ್.ಅಬೂಬುಕರ್‌ ಮಾತನಾಡಿ, ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಜತೆಗೆ ಜಾತಿ ಧರ್ಮದ ಹೆಸರಿನಲ್ಲಿ ಆಗುತ್ತಿರುವ ದೌರ್ಜನ್ಯಕ್ಕೆ ಮುಕ್ತಿ ನೀಡಬೇಕು. ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಕೆ.ಜೆ.ಪೀಟರ್, ನಗರ ಅಧ್ಯಕ್ಷ ಮನ್ಸೂರ್‌, ಕಾರ್ಯದರ್ಶಿ ರಿಯಾಜ್‌, ಪಿಎಫ್‌ಐ ಕಾರ್ಯದರ್ಶಿ ಇಬ್ರಾಹಿಂ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !