ಸೋಮವಾರ, ಏಪ್ರಿಲ್ 12, 2021
25 °C
‘ವಿಶ್ವ ಜನಸಂಖ್ಯಾ ದಿನಚಾರಣೆ’ ಕಾರ್ಯಕ್ರಮ

ಜನಸಂಖ್ಯಾ ಸ್ಫೋಟ ತಡೆಯುವುದು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜೀವನಮಟ್ಟ ಸುಧಾರಣೆ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನಸಂಖ್ಯಾ ಸ್ಫೋಟ ತಡೆಯುವುದು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಪ್ರತಿಪಾದಿಸಿದರು. 

ಜಿಲ್ಲಾಡಳಿತ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಗರದ ಕಾವೇರಿ ಕಲಾ ಕೇತ್ರದಲ್ಲಿ ಗುರುವಾರ ನಡೆದ ‘ವಿಶ್ವ ಜನಸಂಖ್ಯಾ ದಿನಚಾರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.      

ಪ್ರತಿಯೊಬ್ಬರಿಗೂ ಶಿಕ್ಷಣ ಆರೋಗ್ಯ, ಆಹಾರ, ವಸತಿ, ಉದ್ಯೋಗ ಮತ್ತಿತರ ಮೂಲ ಸೌಲಭ್ಯ ದೊರೆಯುವಂತಾಗಲೂ ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದು ಹೇಳಿದರು.

 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಪಕ ಡಾ.ಕೆ.ಸಿ. ದಯಾನಂದ ಮಾತನಾಡಿ, ಮಾನವ ಸಂಪನ್ಮೂಲ ಒಂದು ರೀತಿ ವರವಾಗಿದೆ. ಆದರೆ, ಭಾರತ ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಜನಸಂಖ್ಯೆ ವರವಾಗಿಲ್ಲ ಬದವಾಗಿ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.  

ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ಜನಸಂಖ್ಯಾ ಸ್ಫೋಟ ಕಾಣಬಹುದು. ಆದರಿಂದ, ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು, ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಮತ್ತಿತರ ಕಾರ್ಯಕ್ರಮ ಜಾರಿಗೊಳಿಸುವುದು ಅತ್ಯಗತ್ಯ ಎಂದು ಹೇಳಿದರು.

ಜತೆಗೆ ಜನಸಂಖ್ಯೆ ನಿಯಂತ್ರಿಸಲು ಶಸ್ತ್ರ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡುವುದು. ಕುಟುಂಬಗಳಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮ ಕಲ್ಪಿಸುವುದು, ಕುಟುಂಬಗಳಲ್ಲಿನ ಮಕ್ಕಳಲ್ಲಿ ವಿಶ್ವಾಸ ಬೆಳೆಸುವುದು, ಮತ್ತಿತ್ತರ ಕಾರ್ಯಕ್ರಮ ಜಾರಿಗೊಳಿಸಬೇಕಿದೆ ಎಂದು ಸಲಹೆ ಮಾಡಿದರು. 

ಬಡತನ, ಶಿಕ್ಷಣ, ಸಾಮಾಜಿಕ ನಂಬಿಕೆಗಳು, ಮಕ್ಕಳ ನಡುವೆ ಅಂತರ ಇಲ್ಲದಿರುವುದು ಜನಸಂಖ್ಯೆ ಸ್ಫೋಟಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಜನಸಂಖ್ಯೆ ಹೆಚ್ಚಳವಾದಷ್ಟು ಸಮಾಜಘಾತುಕ ಚಟುವಟಿಕೆಗಳು ಅಧಿಕವಾಗುತ್ತದೆ. ಆದ್ದರಿಂದ ಜನಸಂಖ್ಯೆ ಸ್ಥಿರೀಕರಣ ಬಗ್ಗೆ ಗಮನ ಅರಿಸುವುದು ಅತ್ಯಗತ್ಯ ಎಂದು ಹೇಳಿದರು.

ಜನಸಂಖ್ಯೆ ಹೊರೆಯನ್ನು ಸಂಪನ್ಮೂಲವಾಗಿ ಪರಿವರ್ತನೆ ಮಾಡಬೇಕು, ಜ್ಞಾನವನ್ನು ವೃದ್ಧಿಸುವುದು, ವೃತ್ತಿ ಕೌಶಲ ತರಬೇತಿ ಕಾರ್ಯಕ್ರಮ ಜಾರಿಗೊಳಿಸಬೇಕಿದೆ ಎಂದು ಹೇಳಿದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಜನಸಂಖ್ಯೆ ನಿಯಂತ್ರಣ ಸಂಬಂಧಿಸಿದಂತೆ ಕುಟುಂಬ ಕಲ್ಯಾಣ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಸಿ. ಕಾರ್ಯಪ್ಪ ಅವರು ವಸ್ತು ಪ್ರದರ್ಶನ ಉದ್ಘಾಟಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎಂ. ಶಿವಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಸ್. ಗೋಪಿನಾಥ್, ಸ್ತ್ರೀರೋಗ ತಜ್ಞರಾದ ಡಾ.ರಾಜೇಶ್ವರಿ ಹಾಜರಿದ್ದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಎ.ಸಿ. ಶಿವಕುಮಾರ್ ಸ್ವಾಗತಿಸಿದರು. ಸುಮಿತ್ರಾ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ರಮೇಶ್ ಅವರು ನಿರೂಪಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.