ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತಿ, ಪರಂಪರೆ ಉಳಿಸಿ–ಬೆಳೆಸಿ’

ಕಾಲೂರು ಗ್ರಾಮದಲ್ಲಿ ‘ಕೊಡವ ಜಾನಪದ ನಮ್ಮೆ’ ಸಂಭ್ರಮ
Last Updated 11 ಫೆಬ್ರುವರಿ 2019, 14:06 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡವ ಜಾನಪದ ಕಲೆ ಮತ್ತು ಸಂಸ್ಕೃತಿ ವಿಶಿಷ್ಟವಾದದ್ದು; ಕೊಡವ ಜಾನಪದಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದ್ದರಿಂದ, ಕೊಡವ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ಉಳಿಸಬೇಕು’ ಎಂದು ಕೆ.ಜಿ.ಬೋಪಯ್ಯ ಕರೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮುತ್ತುನಾಡು ಅಭಿಮಾನಿ ಒಕ್ಕೂಟ ಸಹಯೋಗದಲ್ಲಿ ಕಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಕೊಡವ ಜಾನಪದ ನಮ್ಮೆಯಲ್ಲಿ ಅವರು ಮಾತನಾಡಿದರು.

‘ಕಾಲೂರಿನ ಮುತ್ತುನಾಡು ಭಾಗದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.

‘ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಕುಟುಂಬಗಳು ತೊಂದರೆಗೆ ಸಿಲುಕಿದ್ದವು. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಎಲ್ಲ ಕುಟುಂಬಗಳಿಗೂ ಪರಿಹಾರ ದೊರೆಯಲಿದೆ’ ಎಂದು ತಿಳಿಸಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮಾತನಾಡಿ, ‘ಕೊಡವ ಸಂಸ್ಕೃತಿ, ಕಲೆ, ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ಶ್ರಮಿಸುತ್ತಿದೆ. ಹೀಗಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ಕೊಡವ ನಮ್ಮೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಕೃತಿ ವಿಕೋಪಕ್ಕೆ ಸಿಲುಕಿ ಇಲ್ಲಿನ ಜನರು ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದರು. ಇದರಿಂದ ಮುತ್ತುನಾಡು ಭಾಗದಲ್ಲಿ ಕೊಡವ ಜಾನಪದ ನಮ್ಮೆ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಸದ್ಯ ಇಲ್ಲಿನ ಜನರು ಯಥಾಸ್ಥಿತಿಗೆ ಮರಳುತ್ತಿದ್ದಾರೆ ಎಂದು ಹೇಳಿದರು.

ಮುತ್ತುನಾಡು ಬಗ್ಗೆ ಅಯ್ಯಲಪಂಡ ಎ. ಉತ್ತಪ್ಪ ವಿಚಾರ ಮಂಡಿಸಿದರು. ಗಾಳಿಬೀಡು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯಲಪ್ಪಂಡ ಎ. ಪೊನ್ನಪ್ಪ ಮತ್ತು ಕಾರೇರ ಜಮುನಾ ಪಳಂಗಪ್ಪ ಅವರು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿದರು.

ಉಮ್ಮತ್ತಾಟ್, ಬಾಳೋಪಾಟ್, ತಾಲಿಪಾಟ್, ಪರಿಯಕಳಿ, ಕೋಲಾಟ್, ಬೊಳಕಾಟ್, ಕತ್ತಿಯಾಟ್, ವಾಲಗತ್ತಾಟ್, ಕೊಡವ ಪಾಟ್, ಕೊಡವ ಗಾದೆ... ಹೀಗೆ ವಿವಿಧ ಸ್ಪರ್ಧೆಗಳು ನಡೆದವು.

ಸಾಹಿತಿ ನಾಗೇಶ್ ಕಾಲೂರು, ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಕೋಳೇರ ಝರು ಗಣಪತಿ ಮತ್ತು ಅಯ್ಯಲಪ್ಪಂಡ ಎ. ಪೊನ್ನಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ, ಅಯ್ಯಲಪಂಡ ಎ. ಉತ್ತಪ್ಪ, ಅಕಾಡೆಮಿ ಸದಸ್ಯರಾದ ಅಪಟ್ಟೀರ ಟಾಟು ಮೊಣ್ಣಪ್ಪ, ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಕುಡಿಯರ ಶಾರದಾ, ಮನ್ನಕ್ಕಮನೆ ಬಾಲಕೃಷ್ಣ, ಎಚ್.ಎ. ಗಣಪತಿ, ಬೊಳ್ಳಜೀರ ಬಿ. ಅಯ್ಯಪ್ಪ, ಆಂಗೀರ ಕುಸುಮ್, ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ, ಮುಕ್ಕಾಟೀರ ತಂಗಮ್ಮ, ಚಂಗುಲಂಡ ಸೂರಜ್ ಇದ್ದರು. ಪಂಚಮ್ ತ್ಯಾಗರಾಜ್ ಅವರಿಂದ ಕೊಡವ ಜಾನಪದ ಗೀತಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT