ಪ್ರೇಕ್ಷಕರ ರಂಜಿಸಿದ ಗಾಯನ, ನೃತ್ಯ

7
ಕೊಡಗು ಪ್ರವಾಸಿ ಉತ್ಸವಕ್ಕೆ ಭಾನುವಾರ ರಾತ್ರಿ ತೆರೆ

ಪ್ರೇಕ್ಷಕರ ರಂಜಿಸಿದ ಗಾಯನ, ನೃತ್ಯ

Published:
Updated:
Prajavani

ಮಡಿಕೇರಿ: ನಗರದ ಗಾಂಧಿ ಮೈದಾನದಲ್ಲಿ ‘ಕೊಡಗು ಪ್ರವಾಸಿ ಉತ್ಸವ’ದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದವು. ಭಾನುವಾರ ರಾತ್ರಿ ವೈವಿಧ್ಯಮಯ ಸಾಂಸ್ಕೃತಿಕ ರಂಗಿನೊಂದಿಗೆ ಮೂರು ದಿನಗಳ ಕಾಲ ನಡೆದ ಉತ್ಸವಕ್ಕೆ ತೆರೆಬಿತ್ತು.

ಶನಿವಾರ ರಾತ್ರಿಯೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರಿಗೆ ಸರಿಗಮಪ ತಂಡವು ಸಂಗೀತ ಲೋಕಕ್ಕೆ ಕೊಂಡೊಯ್ಯುವಂತೆ ಮಾಡಿತು. ಆರಂಭದಲ್ಲಿ ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದ ಶಿಕ್ಷಕರ ನೃತ್ಯವು ರಂಜಿಸಿತು. ಹೇರಂಭ - ಹೇಮಂತ್‌ ತಂಡದ ಕೊಳಲು ವಾದನ ಗಮನ ಸೆಳೆಯಿತು.

ಬಳಿಕ ಧಾರಾವಾಹಿ ಹಾಗೂ ಸರಿಗಮಪ ತಂಡದವರ ನೃತ್ಯ, ಗಾಯನ ಉತ್ಸವ ಕಳೆಗಟ್ಟುವಂತೆ ಮಾಡಿತು. ಗಾಯಕರಾದ ಸುಪ್ರಿತ್ ಫಲ್ಗುಣ ಮತ್ತು ಪುಷ್ಪಾ ಆರಾಧ್ಯ ಅವರು ಪ್ರಸ್ತುತ ಪಡಿಸಿದ ‘ಜೀವ ಹೂವಾಗಿದೆ....’ ಎಂಬ ಹಾಡಿಗೆ ಶಿಳ್ಳೆ, ಚಪ್ಪಾಳೆ ಬಿದ್ದವು.

ಸುಪ್ರಿಯಾ ಲೋಹಿತ್ ‘ನೀ ನಾದೆ ನಾ' ಹಾಡು ಭಾವನಾ ಲೋಕಕ್ಕೆ ಕೊಂಡೊಯ್ಯಲು ಯಶಸ್ವಿ ಆಯಿತು. ಚನ್ನಪ್ಪ ‘ಐ ಲವ್‌ಯು...’ ಎಂದು ವೇದಿಕೆ ಮೇಲೇರಿದರು.

ಕುಲವಧು ಧಾರಾವಾಹಿಯ ಧನ್ಯಾ ಅವರು ‘ಸೇಸಮ್ಮ ಸೇಸಮ್ಮ...’ ಎಂದು ನೃತ್ಯ ಮಾಡಿದರು. ನಂತರ ಸಿಂಧು ಲೋಕನಾಥ್ ತಂಡದ ನೃತ್ಯವು ಮನಸೂರೆಗೊಳಿಸಿತು.

ವಿಶೇಷ ಚೇತನ ಮಕ್ಕಳ ವೀರಯೋಧರ ನೃತ್ಯರೂಪಕವು ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿತು. ಚೆನ್ನಪ್ಪ, ಶ್ರೀಹರ್ಷ, ಇಂಪನಾ, ಐಶ್ವರ್ಯಾ, ಸುಹಾನಾ ಸೈಯದ್ ಅವರ ಸಂಗೀತ ಸುಧೆ ಮಂಜಿನ ನಗರಿಯ ಉತ್ಸವಕ್ಕೆ ಕಳೆತಂದಿತು.

ಕೊನೆಯ ದಿನ ಭಾನುವಾರ ರಾಜಾಸೀಟ್‌ ರಸ್ತೆಯಲ್ಲಿ ‘ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌’ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು. ಬೆಳಿಗ್ಗೆ ಯೋಗ ಶಿಬಿರದಲ್ಲಿ ಸಾಕಷ್ಟು ಜನರು ಪಾಲ್ಗೊಂಡಿದ್ದರು. ನಂತರ, ರಸ್ತೆಯ ಮಧ್ಯೆದಲ್ಲಿ ನಿರ್ಮಾಣಗೊಂಡ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಿದವು. ಡೊಳ್ಳು ಕುಣಿತ, ಸುಗ್ಗಿ ಕುಣಿತ, ಚಂಡೆ, ಮರಗಾಲು ಕುಣಿತ, ಜಾನಪದ ಶೈಲಿಯ ವಿವಿಧ ನೃತ್ಯಕ್ಕೆ ಪ್ರವಾಸಿಗರೂ ಹೆಜ್ಜೆ ಹಾಕಿದರು.

ಕಿಂಗ್ಸ್‌ ಆಫ್‌ ಕೂರ್ಗ್‌ ಸಂಸ್ಥೆಯ 25ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಪ್ರಸ್ತುತ ಪಡಿಸಿದ ನೃತ್ಯ ಪ್ರದರ್ಶನ, ಆರ್ಕೇಸ್ಟ್ರಾ, ಡಿ.ಜೆ., ಕೊಡವ ವಾಲಗ ಪ್ರೇಕ್ಷಕರು ಮನಸೋತರು.

ಜಾದು ಮೋಡಿ: ಜಾದೂಗಾರ ವಿಕ್ರಂ ಅವರು ತನ್ನ 20 ನಿಮಿಷದ ಜಾದೂ ಪ್ರದರ್ಶನವು ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದರು. ಪುಟ್ಟ ಮಕ್ಕಳನ್ನು ವೇದಿಕೆಯತ್ತ ಕರೆಸಿ ಮಕ್ಕಳಿಂದಲೇ ಜಾದೂ ಪ್ರಯೋಗ ಮಾಡಿದ್ದು ವಿಶೇಷವಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !