ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನಿಗಳಿಗೆ ಅವಕಾಶ ನೀಡಿದ ಸರ್ಕಾರ: ಸುಧಾಮೂರ್ತಿ

ಇನ್ಫೊಸಿಸ್‌ನಿಂದ 200 ಮನೆ ನಿರ್ಮಾಣ
Last Updated 1 ಫೆಬ್ರುವರಿ 2019, 13:53 IST
ಅಕ್ಷರ ಗಾತ್ರ

ಮಡಿಕೇರಿ: ‘840 ಸಂತ್ರಸ್ತರ ಮನೆಗಳನ್ನೂ ನಾವೇ ನಿರ್ಮಿಸುತ್ತೇವೆ’ ಎಂದಿದ್ದ ಸರ್ಕಾರ ಕಾಮಗಾರಿಯಲ್ಲಿ ವಿಳಂಬ ಧೋರಣೆ ಅನುಸರಿಸಿತ್ತು. ದಾನಿಗಳು ಮುಂದೆ ಬಂದಿದ್ದರೂ ಅವರಿಗೆ ಜಾಗ ತೋರಿಸಿರಲಿಲ್ಲ. ಇದೀಗ ದಾನಿಗಳ ನೆರವಿನ ಮೂಲಕ ಸಂತ್ರಸ್ತರ ಮನೆ ನಿರ್ಮಾಣಕ್ಕೂ ತೀರ್ಮಾನಿಸಿದೆ. ‘ಒಂದು ಮನೆ ನಿರ್ಮಿಸಲು ಮುಂದೆ ಬಂದವರಿಗೂ ಅವಕಾಶ ನೀಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಶುಕ್ರವಾರ ನಗರಕ್ಕೆ ಬಂದಿದ್ದ ಇನ್ಫೊಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು, 200 ಮನೆ ನಿರ್ಮಿಸುತ್ತೇವೆ ಎಂದು ಹೇಳಿದರು. ಪುನರ್ವಸತಿ ಜಾಗವನ್ನೂ ಪರಿಶೀಲಿಸಿದರು.

‘ಮೈಸೂರು ದಸರಾ ಉದ್ಘಾಟನೆಯ ವೇಳೆ ನೆರೆ ಸಂತ್ರಸ್ತರಿಗೆ ₹ 25 ಕೋಟಿ ನೆರವು ನೀಡುವುದಾಗಿ ಘೋಷಿಸಲಾಗಿತ್ತು. ಆ ಮೊತ್ತದಲ್ಲಿ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 100, ಎರಡನೇ ಹಂತದಲ್ಲಿ 100 ಮನೆ ನಿರ್ಮಾಣ ಮಾಡಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸುಧಾಮೂರ್ತಿ ಹೇಳಿದರು.

‘ಸರ್ಕಾರವು ಪ್ರತಿಮನೆಗೆ ₹ 9.85 ಲಕ್ಷ ಮಾಡಲು ನಿರ್ಧರಿಸಿದೆ. ನಾವೂ ಸಹ ಪ್ರತಿಮನೆಗೆ ಅಷ್ಟೇ ವೆಚ್ಚ ಮಾಡುತ್ತೇವೆ. ಸರ್ಕಾರ ನಿರ್ಮಾಣ ಮಾಡುತ್ತಿರುವ ಮಾದರಿಯಲ್ಲೇ ನಮ್ಮ ಗುತ್ತಿಗೆದಾರರು ಮನೆ ನಿರ್ಮಿಸಲಿದ್ದಾರೆ’ ಎಂದು ತಿಳಿಸಿದರು.

‘ಮನೆ ನಿರ್ಮಾಣದೊಂದಿಗೆ 100 ದನದ ಕೊಟ್ಟಿಗೆ, 100 ಕೋಳಿ ಸಾಕಣೆ ಕೇಂದ್ರ ನಿರ್ಮಿಸುತ್ತೇವೆ. ₹ 25 ಲಕ್ಷ ವೆಚ್ಚದಲ್ಲಿ ರೈತರಿಗೆ ಪಾಲಿಹೌಸ್‌ ನಿರ್ಮಿಸಿ ಕೊಡಲಾಗುವುದು. ಭಾರೀ ಮಳೆಯಿಂದ ಹಾಳಾದ ಮನೆಗಳ ದುರಸ್ತಿಗೂ ಆರ್ಥಿಕ ನೆರವು ಒದಗಿಸಲಾಗುವುದು. ಕೊಡಗು ಜಿಲ್ಲೆಯಲ್ಲೇ ನಮ್ಮ ಪ್ರತಿಷ್ಠಾನದ ಪ್ರತಿನಿಧಿಗಳಿದ್ದು, ಮನೆ ನಿರ್ಮಾಣ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮತ್ತೆಂದೂ ಈ ರೀತಿಯ ಸಂಕಷ್ಟ ಎದುರಾಗಬಾರದು’ ಎಂದು ಆಶಿಸಿದರು.

ಕೆಲಸ ಮುಗಿಸಿ: ಮಳೆಗಾಲ ಆರಂಭಕ್ಕೆ ಇನ್ನು ಎರಡೂವರೆ ತಿಂಗಳು ಮಾತ್ರ ಇದೆ. ಅಧಿಕಾರಿಗಳಿಗೆ ವಹಿಸಿದ ಕೆಲಸ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಸೂಚಿಸಿದರು.

10ಕ್ಕೆ ಪ್ರಾಧಿಕಾರದ ಸಭೆ: ಕೊಡಗು ಮರು ನಿರ್ಮಾಣ ಪ್ರಾಧಿಕಾರ ಸಭೆಯು ಇದೇ 10ರಂದು ನಡೆಯಲಿದ್ದು ಭೂಕುಸಿತದಿಂದ ಬಿದ್ದಿರುವ ಮರಗಳ ವಿಲೇವಾರಿಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ‘ಸಿ’ ಅಂಡ್‌ ‘ಡಿ’ ಭೂಮಿಯ ಬಗ್ಗೆಯೂ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ನದಿಗಳಲ್ಲಿ ನಿಂತಿರುವ ಹೂಳು ತೆರವು ಮಾಡಲು ತೀರ್ಮಾನಿಸಲಾಗಿದೆ. ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗುವುದು. ಕೊಡಗಿನ ವಿಚಾರದಲ್ಲಿ ಎಲ್ಲ ರೀತಿಯ ಸ್ಪಂದನೆಯಿದೆ’ ಎಂದು ಸಚಿವರು ಭರವಸೆ ನೀಡಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT