ಸಾಲ ಮರು ಪಾವತಿ: ಒತ್ತಡ ಹೇರಿದರೆ ಕ್ರಮ- ಖಾಸಗಿ ಹಣಕಾಸು ಸಂಸ್ಥೆಗಳಿಗೆ ಎಚ್ಚರಿಕೆ

7
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ

ಸಾಲ ಮರು ಪಾವತಿ: ಒತ್ತಡ ಹೇರಿದರೆ ಕ್ರಮ- ಖಾಸಗಿ ಹಣಕಾಸು ಸಂಸ್ಥೆಗಳಿಗೆ ಎಚ್ಚರಿಕೆ

Published:
Updated:

ಮಡಿಕೇರಿ: ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳು ಹಾಗೂ ಖಾಸಗಿ ಬ್ಯಾಂಕ್‌ಗಳಿಂದ ಸಾಲ ಪಡೆದ ಸಂತ್ರಸ್ತ ಕುಟುಂಬದವರಿಗೆ ಸಾಲ ಮರು ಪಾವತಿಸುವಂತೆ ಒತ್ತಡ ಹೇರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಂಸ್ಥೆ, ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿದಾರರ ಸಮ್ಮುಖದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಅತಿವೃಷ್ಟಿಯಿಂದ ಜಿಲ್ಲೆಯ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಇವರ ನೆರವಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಹಜವಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ಸಾಲ ಮರು ಪಾವತಿಸುವಂತೆ ಒತ್ತಡ ಉಂಟು ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.  

ಸ್ವಇಚ್ಛೆಯಿಂದ ಸಾಲ ಮರು ಪಾವತಿ ಮಾಡುವಂತಹ ಜನರಿಂದ ಪಾವತಿ ಮಾಡಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ. ಅದನ್ನು ಹೊರತುಪಡಿಸಿ ಒತ್ತಾಯದಿಂದ ಮರುಪಾವತಿಗೆ ಒತ್ತಡ ಹೇರಿದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಬಾರ್ಡ್‌ನ ಸಹಾಯಕ ಪ್ರಬಂಧಕರಾದ ಮುಂಡಂಡ ಸಿ. ನಾಣಯ್ಯ ಮಾತನಾಡಿ, ‘ಪ್ರಕೃತಿ ವಿಕೋಪದಿಂದ ಜಿಲ್ಲೆಯ ಎಲ್ಲಾ ಜನರು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ, ಯಾರಿಂದಲೂ ಸಾಲ ಮರು ಪಾವತಿಗೆ ಒತ್ತಾಯಿಸಬಾರದು’ ಎಂದು ಕೋರಿದರು.  

ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕರಾದ ಗುಪ್ತಾಜಿ, ಸಹಕಾರ ಸಂಘಗಳ ಉಪ ನಿಬಂಧಕ ಡಿ. ಭಾಸ್ಕರಾಚಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !