ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

ಅರ್ಜಿ ಸ್ವೀಕರಿಸಿದ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌
Last Updated 4 ಡಿಸೆಂಬರ್ 2018, 14:27 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಆಶ್ರಯ ಕಳೆದುಕೊಂಡವರಿಗೆ ಪರಿಹಾರ ಕಾರ್ಯ ವಿಳಂಬ ಆಗುತ್ತಿರುವ ಬೆನ್ನಲೇ ಸಂತ್ರಸ್ತರ ಆಕ್ರೋಶ ಹೆಚ್ಚಾಗುತ್ತಿದೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಸಭೆಯಲ್ಲೂ ಪರಿಹಾರ ಹಾಗೂ ಮನೆ ನಿರ್ಮಾಣ ಕಾರ್ಯ ವಿಳಂಬ ಖಂಡಿಸಿ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಂದೂರು ನಿವಾಸಿ ಕುಡೇಕಲ್‌ ಸಂತೋಷ್‌ ಮಾತನಾಡಿ, ‘ಮಾದರಿ ಮನೆಗಳಲ್ಲಿ ಸೌಲಭ್ಯಗಳಿಲ್ಲ. ಬಟ್ಟೆ ಇಟ್ಟುಕೊಳ್ಳಲು ಸ್ಲ್ಯಾಬ್‌ ಸೇರಿದಂತೆ ಯಾವ ಸೌಲಭ್ಯಗಳೂ ಇಲ್ಲವಾಗಿವೆ. ಅದೇ ಮಾದರಿಯ ಮನೆ ನಿರ್ಮಾಣವಾದರೆ ವಾಸಿಸಲು ಸಾಧ್ಯವಿಲ್ಲ. ಕನಿಷ್ಠ 7 ಸೆಂಟ್ ಜಾಗದಲ್ಲಿ ಮನೆ ಕಟ್ಟಿಕೊಡಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ಮಾತನಾಡಿ, ‘ಭಾರತದ ಇತಿಹಾಸದಲ್ಲಿಯೇ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ₹ 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಎನ್‌ಡಿಆರ್‌ಎಫ್‌ ನಿಯಮದಂತೆ ₹ 6 ಲಕ್ಷದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶವಿದೆ. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಶೇಷ ಕಾಳಜಿ ವಹಿಸಿ ಎರಡು ಬೆಡ್‌ರೂಂವುಳ್ಳ ಮನೆಯನ್ನೇ ನಿರ್ಮಿಸಿಕೊಡಲು ಮುಂದಾಗಿದ್ದಾರೆ. ₹ 10 ಲಕ್ಷದ ಮನೆಗೆ ಆರ್ಥಿಕ ಇಲಾಖೆಯೂ ಆಕ್ಷೇಪ ವ್ಯಕ್ತಪಡಿಸಿತ್ತು’ ಎಂದು ಸಂತ್ರಸ್ತರಿಗೆ ತಿಳಿಸಿದರು.

‘ಮೂರು ತಿಂಗಳಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ತೋಟ ಕುಸಿದಿರುವುದಕ್ಕೆ ಹೆಕ್ಟೇರ್‌ಗೆ ₹ 37 ಸಾವಿರ ಪರಿಹಾರ ನೀಡಲು ಮಾತ್ರ ಅವಕಾಶವಿದೆ. ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿದರೆ ಮಾತ್ರ ದೊಡ್ಡಮೊತ್ತದ ಪರಿಹಾರ ವಿತರಣೆ ಮಾಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಸಂತ್ರಸ್ತರ ಸತೀಶ್‌ ಮಾತನಾಡಿ, ‘ತೋಟ ಕಳೆದುಕೊಂಡವರಿಗೆ ಸರ್ಕಾರ ಯಾವುದೇ ಪರಿಹಾರ ನೀಡಲು ಮುಂದಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ವಿಳಂಬ–ಪ್ರತಿಭಟನೆ: ಮಧ್ಯಾಹ್ನ ಸಭೆ ನಿಗದಿ ಆಗಿತ್ತು. ಆದರೆ, ಸಂಜೆ 4 ಗಂಟೆಯಾದರೂ ಸಭೆ ಆರಂಭಗೊಳ್ಳದಿದ್ದ ಕಾರಣ ಸಂತ್ರಸ್ತರು ಕಾವೇರಿ ಕಲಾಕ್ಷೇತ್ರದ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಎಂ.ಬಿ. ದೇವಯ್ಯ ಅವರು, ‘ಸರ್ಕಾರ ಈಗಾಗಲೇ ಪುನರ್ವಸತಿ ಕಾರ್ಯದಲ್ಲಿ ವಿಳಂಬ ಧೋರಣೆ ಅನುಸರಿಸಿದೆ. ಇನ್ನೂ ವಿಳಂಬ ಮಾಡಬಾರದು’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT