24ರಂದು ಅರಣ್ಯ ಭವನದ ಎದುರು ಪ್ರತಿಭಟನೆ

7
ಮರ ಮಾರಾಟಕ್ಕೆ ಅನುಮತಿ ನೀಡಲು ಹೋರಾಟ ಸಮಿತಿ ಆಗ್ರಹ

24ರಂದು ಅರಣ್ಯ ಭವನದ ಎದುರು ಪ್ರತಿಭಟನೆ

Published:
Updated:
Deccan Herald

ಮಡಿಕೇರಿ: ಭೂಕುಸಿತದಿಂದ ಕೃಷಿ ಜಮೀನಿನಲ್ಲಿ ಬಿದ್ದಿರುವ ಮರಗಳನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆಯುತ್ತಿರುವುದನ್ನು ಖಂಡಿಸಿ ಡಿ.24ರಂದು ಅರಣ್ಯ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ. ದೇವಯ್ಯ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕೃತಿ ವಿಕೋಪದಿಂದ ಸಾವಿರಾರು ಮರಗಳು ನೆಲಕ್ಕುರುಳಿವೆ. ಈ ಮರಗಳನ್ನು ಸಾಗಣೆ ಮಾಡಲು ಆಯಾ ತೋಟದ ಮಾಲೀಕರಿಗೇ ಅವಕಾಶ ನೀಡಬೇಕು. ಅರಣ್ಯ ಇಲಾಖೆ ಮಧ್ಯ ಪ್ರವೇಶಿಸಬಾರದು’ ಎಂದು ಕೋರಿದರು.

ಸಂತ್ರಸ್ತರ ಮನೆ ನಿರ್ಮಾಣ ಕಾರ್ಯ ಚುರುಕುಗೊಳಿಸುವ ಪ್ರಯತ್ನದಲ್ಲಿ ಸರ್ಕಾರ ವಿಫಲವಾಗಿದೆ. ಪುನರ್ವಸತಿ ಸ್ಥಳದಲ್ಲಿ ತಿಂಗಳಿಗೆ 50 ಮನೆ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಮನೆ ನಿರ್ಮಾಣವನ್ನು ಒಂದೇ ಸಂಸ್ಥೆಗೆ ಗುತ್ತಿಗೆ ನೀಡಿರುವ ಕ್ರಮ ಸರಿಯಲ್ಲ. ಪ್ರತ್ಯೇಕ ಗುತ್ತಿಗೆದಾರರಿಗೆ ನೀಡಬೇಕಿತ್ತು. ಇದರಿಂದ ಮನೆ ನಿರ್ಮಾಣ ಕಾಮಗಾರಿ ಬೇಗ ಮುಗಿಯುತ್ತಿತ್ತು ಎಂದು ಹೇಳಿದರು.

ಭೂಕುಸಿತದಿಂದ ನದಿ ಹಾಗೂ ಗದ್ದೆಗಳಲ್ಲಿ ಹೂಳಿನ ಸಮಸ್ಯೆ ತೀವ್ರವಾಗಿದೆ. ಕಾಲೂರು, ಗಾಳಿಬೀಡು, ಕರ್ಣಂಗೇರಿ, ಸಂಪಾಜೆ ಗದ್ದೆಗಳಲ್ಲಿ ಬಿದ್ದಿರುವ ಮಣ್ಣು ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹546 ಕೋಟಿಯನ್ನೂ ಕೊಡಗಿನ ಅಭಿವೃದ್ಧಿಗೇ ಮೀಸಲಿಡಬೇಕು. ಕೊಡಗು ಮರು ನಿರ್ಮಾಣಕ್ಕೆ ಇನ್ನಷ್ಟು ಅನುದಾನ ಅಗತ್ಯವಿದೆ. ಆ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿಂತಿಸಬೇಕು ಎಂದು ಕೋರಿದರು.

ಸಮಿತಿ ಸದಸ್ಯ ಎ.ಟಿ.ಮಾದಪ್ಪ ಮಾತನಾಡಿ, ಕಾಲೂರು, ದೇವಸ್ತೂರು ಭಾಗದಲ್ಲಿರುವ ಕೆಲವು ಕೃಷಿಕರ ಹೆಸರು ಸಂತ್ರಸ್ತರ ಪಟ್ಟಿಯಲ್ಲಿ ಕಾಣುತ್ತಿಲ್ಲ. ಅಧಿಕಾರಿಗಳ ಸರ್ವೆ ಕಾರ್ಯದಲ್ಲಿ ಎಡವಿದ್ದಾರೆ. ಕೃಷಿಕನ ನಷ್ಟಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕಿದೆ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಅರವಿಂದ, ಕೆ.ಟಿ. ಪ್ರಸನ್ನ, ಪುಲ್ಲೇರ ಕಾಳಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !