ಕೊಡಗು ಪ್ರವಾಹ ಸಂತ್ರಸ್ತರ ಆಕ್ರೋಶ

7
ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಕೊಡಗು ಪ್ರವಾಹ ಸಂತ್ರಸ್ತರ ಆಕ್ರೋಶ

Published:
Updated:
Prajavani

ಮಡಿಕೇರಿ: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ, ಪ್ರಕೃತಿ ವಿಕೋಪ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು. ನಂತರ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರಕೃತಿ ವಿಕೋಪ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಐದು ತಿಂಗಳು ಕಳೆದರೂ ಇನ್ನೂ ಕೂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಲ್ಲ. ಒಂದು ಮನೆಯೂ ನಿರ್ಮಾಣವಾಗಿಲ್ಲ. ಸರ್ಕಾರದ ಭರವಸೆಗಳು ಸುಳ್ಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಮೀನುಗಳಲ್ಲಿ ಇನ್ನೂ ರಾಶಿ ಮಣ್ಣು ತುಂಬಿಕೊಂಡಿದೆ. ನದಿಗಳು ತಮ್ಮ ದಿಕ್ಕು ಬದಲಿಸಿ ಹರಿದು ಆತಂಕ ಸೃಷ್ಟಿಸಿವೆ. ಅದಕ್ಕೆ ಯಾವುದೇ ಪರಿಹಾರವನ್ನೂ ಕಂಡುಕೊಂಡಿಲ್ಲ. ಜನಪ್ರತಿನಿಧಿಗಳು ರಾಜಕೀಯ ಚೆಲ್ಲಾಟದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗು ಬಂದ್‌–ಎಚ್ಚರಿಕೆ: ನಿರಾಶ್ರಿತರನ್ನು ಸತಾಯಿಸುತ್ತಿರುವ ಸರ್ಕಾರದ ವಿರುದ್ಧ ರಾಜಕೀಯ ರಹಿತ ಹೋರಾಟ ಮುಂದುವರಿಯಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಇತ್ಯರ್ಥ ಪಡಿಸದಿದ್ದರೆ ಕೊಡಗು ಬಂದ್‌ ಮಾಡುತ್ತೇವೆ ಎಂದು ಎಚ್ಚರಿಸಿದರು.

ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ: ಜಿಲ್ಲೆಯಲ್ಲಿ 40 ಗ್ರಾಮಗಳು ಮಾತ್ರ ವಿಕೋಪದಿಂದ ಹಾನಿಯಾಗಿದ್ದು, ಇಲ್ಲಿಯ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮರೆತಿದ್ದಾರೆ. ಆದ್ದರಿಂದ, ಈ ಭಾಗದ ಸಂತ್ರಸ್ತ ಜನರು ಮುಂದಿನ ಯಾವುದೇ ಚುನಾವಣೆ ಬರಲಿ ಅವುಗಳಲ್ಲಿ ಮತದಾನ ಮಾಡದೇ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.

ಪ್ರಕೃತಿ ವಿಕೋಪ ಹೋರಾಟ ಸಮಿತಿಯ ಪ್ರಮುಖ ರವಿ ಕಾಳಪ್ಪ ಮಾತನಾಡಿ, ‘ಸರ್ಕಾರ ಹಾಗೂ ಜಿಲ್ಲಾಡಳಿತ ಮೇಲಿಂದ ಮೇಲೆ ಸಭೆ ನಡೆಸಿ ಹಣ ಬಿಡುಗಡೆಯಾಗಿದೆ ಎಂದು ಭರವಸೆಗಳನ್ನು ಮಾತ್ರ ನೀಡುತ್ತಾರೆಯೇ ಹೊರತು ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಇನ್ನು 3 ತಿಂಗಳಿನಲ್ಲಿ ಮತ್ತೆ ಮಳೆ ಆರಂಭವಾಗಲಿದ್ದು ಆ ಸಂದರ್ಭ ಮನೆ ಕಳೆದುಕೊಂಡ ಸಂತ್ರಸ್ತರು ಹೋಗುವುದಾದರೂ ಎಲ್ಲಿಗೆ? ಹೂಳೆತ್ತುವ ಕೆಲಸ ನಡೆದಿಲ್ಲ. ತೋಟ, ಗದ್ದೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸವೂ ಆಗಿಲ್ಲ ಎಂದು ದೂರಿದರು.  

ಪರಿಹಾರ ನೀಡದೇ ಸರ್ಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಈಗಾಗಲೇ ಒಬ್ಬ ಸಂತ್ರಸ್ತ ಆತ್ಮಹತ್ಯೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಸಾಲಗಾರರ ಹಾವಳಿಯಿಂದ ಮತ್ತಷ್ಟು ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆಯಿದೆ ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಭಾರತೀಶ್‌ ಮಾತನಾಡಿ, ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಾಕಷ್ಟು ಹಣ ಬಂದಿದೆ. ಇದನ್ನು ಸಕಾಲದಲ್ಲಿ ಬಳಸಬೇಕು. ಕೋಟ್ಯಂತರ ರೂಪಾಯಿ ಹಣವಿದೆ. ಅದು ಮೂಲ ಸೌಕರ್ಯಕ್ಕೆ ಬಳಕೆಯಾಗಬೇಕು ಎಂದು ಮನವಿ ಮಾಡಿದರು.

ಸಂತ್ರಸ್ತ ಕೃಷಿಕರ ಜಮೀನಿನ ಸರ್ವೆ ಕಾರ್ಯ ಇನ್ನೂ ಮುಗಿದಿಲ್ಲ. ಅಧಿಕಾರಿಗಳು ಪರಿಹಾರ ಚೆಕ್‌ ವಿತರಣೆ, ಬಾಡಿಗೆ ಮನೆ ಹಣ ವಿಷಯದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇನ್ನು ಸಂಸ್ರಸ್ತರ ನೆರವಿಗೆ ಬಂದ ಹಣ ದುರ್ಬಳಕೆಯಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಮಿತಿಯ ಸದಸ್ಯರಾದ ರವಿ ಕುಶಾಲಪ್ಪ, ಕೆ.ಟಿ.ಪ್ರಸನ್ನ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಂತ್ರಸ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !