ಆಲಿಕಲ್ಲು ಮಳೆ ಸುರಿಯಿತು, ನಷ್ಟ ತಂದಿತು

ಶನಿವಾರ, ಏಪ್ರಿಲ್ 20, 2019
27 °C
ಸೋಮವಾರಪೇಟೆಯ ಕೆಲವು ಭಾಗದಲ್ಲೂ ಇನ್ನೂ ಮಳೆ ಬಿದ್ದಿಲ್ಲ

ಆಲಿಕಲ್ಲು ಮಳೆ ಸುರಿಯಿತು, ನಷ್ಟ ತಂದಿತು

Published:
Updated:

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಹಲವೆಡೆ ಮಳೆಯಾಗಿದ್ದು ಕಾಫಿ, ಕಾಳುಮೆಣಸು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ಆದರೆ, ಕೆಲವೆಡೆ ಮಳೆ ಬಾರದೆ ಬೆಳೆಗಳು ಒಣಗುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ಮುಂಗಾರು ಮಳೆಯ ಆರ್ಭಟಕ್ಕೆ ನಲುಗಿದ್ದ ಇಲ್ಲಿನ ಬೆಳೆಗಾರರು, ಇದೀಗ ಬರದಿಂದ ಬಸವಳಿದಿದ್ದಾರೆ. ಮಳೆ ಸರಿಯಾಗಿ ಬೀಳದ ಕಾರಣ ಕಾಫಿ ಗಿಡಗಳಲ್ಲಿ ಹೂವು ಸರಿಯಾಗಿ ಬಿಡುತ್ತಿಲ್ಲ. ಮೆಣಸಿನ ಬಳ್ಳಿ ಹಾಗೂ ಫಸಲು ಒಣಗಿ ಹೋಗುತ್ತಿದೆ.

ತಾಲ್ಲೂಕಿನ ಯಲಕನೂರು, ಹೊಸಳ್ಳಿ, ಅರೆಯೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಆಲಿಕಲ್ಲಿನೊಂದಿಗೆ ಭಾರಿ ಗಾಳಿ, ಮಳೆ ಸುರಿದಿದ್ದು, ಕೃಷಿಕರು ತತ್ತರಿಸಿದ್ದಾರೆ. ನೀರಿನ ಅಲಭ್ಯದ ನಡುವೆಯೂ ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದರು. ಆದರೆ, ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಈ ಭಾಗದಲ್ಲಿ ಬೆಳೆದಿರುವ ಫಸಲು ನಾಶವಾಗಿದೆ.

ಕೆಲವೊಂದು ಆಲಿಕಲ್ಲು ಅರ್ಧ ಕೆ.ಜಿ.ಗೂ ಅಧಿಕ ತೂಕವಿತ್ತು ಎಂದು ಹೊಸಳ್ಳಿ ಗ್ರಾಮದ ಪ್ರಮೋದ್ ಮತ್ತು ಎಚ್.ಎ. ರಾಜೇಶ್ ತಿಳಿಸಿದರು.


ಸೋಮವಾರಪೇಟೆ ತಾಲ್ಲೂಕಿನ ಹೆಗ್ಗುಳ ಗ್ರಾಮದಲ್ಲಿ ಮಳೆಯಾಗದ ಕಾರಣ ಗಿಡಗಳಲ್ಲಿ ಕಾಫಿ ಮೊಗ್ಗುಗಳು ಒಣಗಿವೆ

ಆಲಿಕಲ್ಲು ಮಳೆಗೆ ಕಾಫಿ ತೋಟದ ಎಲೆ, ಕಾಯಿ ಸೇರಿದಂತೆ ಕೊಂಬೆಗಳು ನೆಲಕಚ್ಚಿವೆ. ಇದರೊಂದಿಗೆ ಹೊಲ, ಗದ್ದೆಗಳಲ್ಲಿ ಕೃಷಿಕರು ಬೇಸಿಗೆ ಬೆಳೆಯಾಗಿರುವ ವಿವಿಧ ತರಕಾರಿ, ಶುಂಠಿ, ಕ್ಯಾನೆ ಗೆಣಸು, ಕೆಸ, ಬೀನ್ಸ್, ಹಸಿಮೆಣಸು ಕೃಷಿ ಮಾಡಿದ್ದು, ಆಲಿಕಲ್ಲು ಮಳೆಯಿಂದ ನಷ್ಟವಾಗಿದೆ.

ಹೊಸಳ್ಳಿ ಗ್ರಾಮದ ಲೋಕೇಶ್, ಪ್ರಮೋದ್, ಮಾದಪ್ಪ, ಬಿ.ಎಂ.ರಾಜೀವ, ಎಂ.ಟಿ. ಸುರೇಶ್, ಜೋಯಪ್ಪ, ಕೃಷ್ಣಪ್ಪ, ಎಚ್.ಎ.ರಾಜೇಶ್, ರತನ್ ಸೇರಿದಂತೆ ಅನೇಕ ರೈತರು ಬೆಳೆದಿದ್ದ ಕೃಷಿ ಸಂಪೂರ್ಣವಾಗಿ ನಾಶಗೊಂಡಿದೆ.

ಮಳೆ ತಡವಾಗಿ ಬರುತ್ತಿರುವುದರಿಂದ ಎಲ್ಲ ಕೃಷಿ ಫಸಲಿನ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಬಹುತೇಕ ಕೆರೆಗಳು, ಹೊಳೆ, ತೊರೆಗಳು ಬತ್ತುತ್ತಿವೆ. ಕಾಫಿ ತೋಟ, ಕಾಳುಮೆಣಸು ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಬೆಳೆಗಾರರು ಕೊಳವೆಬಾವಿಗಳ ಮೊರೆ ಹೋಗಿದ್ದಾರೆ. ದಿನವಿಡೀ ಕಾಫಿ ಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿರುವ ಕಾಳುಮೆಣಸು ಬಳ್ಳಿಗಳು ಒಣಗುತ್ತಿದ್ದು, ಬೇಸಿಗೆ ಕಾಲವಾಗಿರುವುದರಿಂದ ಗಿಡಗಳಿಗೆ ನೀರಿನ ಅಗತ್ಯ ಹೆಚ್ಚಾಗಿದೆ.

ಅತಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿಗಳಲ್ಲಿ ಹೆಚ್ಚಿನ ಬೆಳೆಗಾರರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಕೆರೆ, ಕೊಳವೆಬಾವಿಗಳಿಂದ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

ಸುಂಟಿಕೊಪ್ಪ ಹೋಬಳಿಯಲ್ಲಿ ರೋಬಸ್ಟಾ ಕಾಫಿ ಹೆಚ್ಚಿದ್ದು, ಬೆಳೆಗಾರರು ನೀರಿಗಾಗಿ ಹೊಳೆ, ಕೆರೆಗಳನ್ನು ಆಶ್ರಯಿಸಿದ್ದಾರೆ. ರೋಬಸ್ಟಾ ಬೆಳೆಗಾರರು ಹರದೂರು, ಹಟ್ಟಿಹೊಳೆಯ ನೀರನ್ನು ಆಶ್ರಯಿಸಿದ್ದರು. ಆದರೆ, ಈಗಾಗಲೇ ಇವೆರಡು ಹೊಳೆಗಳಲ್ಲಿ ನೀರಿನ ಹರಿವು ತುಂಬಾ ಕಡಿಮೆಯಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಇರುವ ಕೊಳವೆಬಾವಿಗಳಲ್ಲಿನ ನೀರು ಸಾಕಾಗುತ್ತಿಲ್ಲ.

ಕಳೆದ ಹಲವು ವರ್ಷಗಳಿಂದ ಹೂವಿನ ಮಳೆ ಸಕಾಲದಲ್ಲಿ ಬೀಳದ ಕಾರಣ ಕಾಫಿ ಮತ್ತು ಮೆಣಸಿನ ಫಸಲು ಪಡೆಯಲು ಸಾಧ್ಯವಾಗಿಲ್ಲ. ಬಿಸಿಲು ಹೆಚ್ಚಾಗುತ್ತಿದ್ದು, ಕಾಫಿ ಮತ್ತು ಮೆಣಸಿನ ಗಿಡಗಳು ಒಣಗಿ ಹೋಗುತ್ತಿವೆ. ತಾಪಮಾನ ಜಾಸ್ತಿಯಾದರೆ, ಬಿಳಿಕಾಂಡ ಕೊರಕ ರೋಗಬಾಧೆ ಉಲ್ಬಣಿಸಬಹುದು ಎಂದು ಹೆಗ್ಗುಳ ಗ್ರಾಮದ ಕಾಫಿ ಬೆಳೆಗಾರ ಎಸ್.ಪಿ.ಸತೀಶ್ ಆತಂಕ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !