ಕಾಡಾನೆ ಉಪಟಳ: ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಅಳವಡಿಕೆ

ಭಾನುವಾರ, ಏಪ್ರಿಲ್ 21, 2019
27 °C
ಅರಣ್ಯ ಇಲಾಖೆಯಿಂದ ವಿನೂತನ ಪ್ರಯತ್ನ, ಅಲ್ಪಮಟ್ಟಿಗೆ ಯಶಸ್ವಿ

ಕಾಡಾನೆ ಉಪಟಳ: ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಅಳವಡಿಕೆ

Published:
Updated:
Prajavani

ಸಿದ್ದಾಪುರ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸದೊಂದು ಪ್ರಯೋಗಕ್ಕೆ ಕೈಹಾಕಿದ್ದು, ಅರಣ್ಯದಂಚಿನಲ್ಲಿ ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಅನ್ನು ಅಳವಡಿಸುತ್ತಿದೆ.

ಜಿಲ್ಲೆಯ ವಿವಿಧ ಭಾಗದಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು, ಸಿದ್ದಾಪುರ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರವಾಗಿ ಕಾಡಾನೆ ಹಿಂಡು ಕಾಫಿ ತೋಟಗಳಿಗೆ ಹಾಗೂ ಜನವಸತಿ ಪ್ರದೇಶಕ್ಕೆ ಲಗ್ಗೆ ಇಡುತ್ತಿವೆ.

ಅರಣ್ಯದಿಂದ ಕಾಫಿ ತೋಟಕ್ಕೆ ಲಗ್ಗೆಯಿಡುವ ಕಾಡಾನೆಗಳು ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿದ್ದು, ಬಾಳೆ, ಅಡಿಕೆ ಸೇರಿದಂತೆ ಗಿಡಿಗಳನ್ನು ಧ್ವಂಸ ಮಾಡುವುದರೊಂದಿಗೆ, ಮನುಷ್ಯನ ಮೇಲೂ ದಾಳಿ ನಡೆಸುತ್ತಿವೆ.

ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಕಾಡಾನೆ ತಡೆಗೆ ಅರಣ್ಯ ಇಲಾಖೆ ವಿನೂತನ ಮಾದರಿಯ ಹ್ಯಾಂಗಿಂಗ್ ಸೊಲಾರ್ ಫೆನ್ಸ್‌ ಅನ್ನು ಅಳವಡಿಸುತ್ತಿದೆ.

ಸಿದ್ದಾಪುರದ ಮಾಲ್ದಾರೆಯ ದೇವಮಚ್ಚಿ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯದಂಚಿನಲ್ಲಿ ಈ ಸೋಲಾರ್ ಅಳವಡಿಸಿದ್ದು, ಅರಣ್ಯದ ಸುತ್ತಲೂ ಸುಮಾರು 20 ಅಡಿ ಉದ್ದದ ಕಂಬವನ್ನು ಹಾಕಲಾಗಿದ್ದು, ಪ್ರತಿ ಕಂಬದಿಂದ ಕಂಬಕ್ಕೆ ಸೋಲಾರ್ ವಿದ್ಯುತ್‌ ತಂತಿ ಅಳವಡಿಸಲಾಗಿದೆ.

ಬಳಿಕ ಆ ತಂತಿಯಿಂದ ಕೆಳಕ್ಕೆ ಸುಮಾರು 15 ಅಡಿ ಉದ್ದದ ತಂತಿಯನ್ನು ಜೋತು ಬಿಡಲಾಗಿದೆ. ಬಳಿಕ ತಂತಿಗಳಿಗೆ ಸೋಲಾರ್‌ನ ಮೂಲಕ ಸಣ್ಣ ಪ್ರಮಾಣದ ವಿದ್ಯುತ್ ಹರಿಸಲಾಗುತ್ತಿದ್ದು, ಕಾಡಾನೆಗಳು ಅರಣ್ಯದಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಲಂಕಾ ಸೇರಿದಂತೆ ಕೆಲವು ದೇಶಗಳಲ್ಲಿ ಈ ವಿಧಾನವನ್ನು ಅನುಸರಿಸಿ ಯಶಸ್ವಿಯನ್ನು ಕಂಡಿದ್ದು, ಜಿಲ್ಲೆಯಲ್ಲೂ ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ. ಹ್ಯಾಂಗಿಂಗ್ ಫೆನ್ಸ್‌ನಿಂದಾಗಿ ಕಾಡಾನೆಗಳು ಕಾಡಿನಿಂದ ಹೊರ ಬರುವುದನ್ನು ತಡೆಯುವುದರೊಂದಿಗೆ ಸಣ್ಣ ಪ್ರಾಣಿಗಳಿಗೂ ಕೆಳಭಾಗದ ಸುಮಾರ್ ಐದು ಅಡಿ ತಂತಿ ಇಲ್ಲದ ಪ್ರದೇಶದ ಮೂಲಕ ಓಡಾಡಬಹುದಾಗಿದೆ.

ಕಾಡಾನೆ ತಡೆಗೆ ಸೋಲಾರ್ ಬೇಲಿ, ಕಂದಕ, ರೈಲ್ವೆ ಕಂಬಿ ಅಳವಡಿಕೆ ಸೇರಿದಂತೆ ಹಲವು ಯೋಜನೆಯನ್ನು ಜಾರಿಗೆ ತಂದಿದ್ದರೂ, ಕಾಡಾನೆಗಳ ಉಪಟಳ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿತ್ತು. ಇದೀಗ ನೂತನ ಪ್ರಯೋಗದಿಂದ ಕಾಡಾನೆ ಹಾವಳಿ ಕಡಿಮೆಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !