ಶುಕ್ರವಾರ, ಫೆಬ್ರವರಿ 26, 2021
30 °C
ಗೊಂದಲದ ಹೇಳಿಕೆ ಸಲ್ಲದು: ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ.ಭಾರತೀಶ್ ಮನವಿ

ಟಿಪ್ಪು ಜಯಂತಿ ರದ್ದು: ಬಿಜೆಪಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿರುವುದು ಶ್ಲಾಘನೀಯ ವಿಚಾರ. ಈ ಸಂಬಂಧ ಕೆಲವರು ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನವೆಂಬರ್‌ ಬಂದರೆ ಸಾಕು ಟಿಪ್ಪು ಜಯಂತಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಕಾನೂನು ಸುವ್ಯವಸ್ಥೆ ಹದಗೆಟ್ಟು, ಟಿಪ್ಪು ಜಯಂತಿ ಆಚರಣೆಯಿಂದ ಜಿಲ್ಲೆಯಲ್ಲಿ ಕೋಮು ಗಲಭೆ ಉಂಟಾಗಿತ್ತು. ಇದನ್ನು ಈ ಮೊದಲೇ ನಿಲ್ಲಿಸಬೇಕಿತ್ತು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಶಾಂತಿ ನೆಲೆಸಲೆಂದು ಟಿಪ್ಪು ಜಯಂತಿ ರದ್ದು ಮಾಡಿದೆ. ಈ ವಿಚಾರದಲ್ಲಿ ಯಾರೂ ಗೊಂದಲ ಉಂಟು ಮಾಡುವ ಹೇಳಿಕೆ ನೀಡಬಾರದು’ ಎಂದು ಮನವಿ ಮಾಡಿದರು.

‘ಬಿಜೆಪಿಯನ್ನು ಜನ ಮತದ ಮೂಲಕ ಗೆಲ್ಲೆಸಿದ್ದರೂ ಅಪವಿತ್ರ ಮೈತ್ರಿ ಸರ್ಕಾರದಿಂದ 14 ತಿಂಗಳು ರಾಜ್ಯದಲ್ಲಿ ಅಧಿಕಾರ ತಪ್ಪಿತ್ತು. ಇದೀಗ ಜನರ ಅಭಿಲಾಷೆಯಂತೆ ಬಿಜೆಪಿಗೆ ಅಧಿಕಾರ ದೊರೆತಿದ್ದು ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಾರೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು. 

‘ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೊಡಗಿನ ಜನರ ಬಗ್ಗೆ ವಿಶೇಷ ಕಾಳಜಿ ವಹಿಸಿದ ಯಡಿಯೂರಪ್ಪ ಅವರು ₹ 535 ಕೋಟಿ ಬಿಡುಗಡೆ ಮಾಡುವುದಕ್ಕಾಗಿ ಪ್ರಸ್ತಾವ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಈ ರೀತಿಯ ಅಭಿವೃದ್ಧಿ ಪರ ಅನುದಾನಗಳು ಕೊಡಗಿಗೆ ಇನ್ನಷ್ಟು ಬೇಕಿದೆ’ ಎಂದು ಹೇಳಿದರು.

‘ಬಿಜೆಪಿ ತನ್ನ ಸದಸ್ಯತ್ವ ನೋಂದಣಿಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿದೆ. 35 ಸಾವಿರ ಸದಸ್ಯತ್ವದ ಗುರಿಯನ್ನು ಹೊಂದಿದ್ದೇವೆ. 14 ಸಾವಿರಕ್ಕೂ ಅಧಿಕ ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ ಮಾತನಾಡಿ, ರೈತ ಪರ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿರುವುದು ಜನಪರ ಕಾಳಜಿ ಯೋಜನೆಯನ್ನು ಹಮ್ಮಿಕೊಳ್ಳುವ ಭರವಸೆ ಎಲ್ಲರಲ್ಲಿಯೂ ಇದೆ. ಆದರೆ, ಕೆಲವು ಸಂಘಟನೆಗಳು ಅವರ ವಿರುದ್ಧ ಧ್ವನಿ ಎತ್ತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ನೇಕಾರರ, ಮೀನುಗಾರರ ಸಾಲಮನ್ನಾ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಕಳೆದ ಬಾರಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ 8 ಗ್ರಾ.ಪಂನ 42 ಹೋಬಳಿಯ ಬೆಳೆಗಾರರ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ಸಾಲವನ್ನು ಮನ್ನಾ ಮಾಡಬೇಕು. ಈ ಕುರಿತು ಶಾಸಕರ ಬಳಿ ಚರ್ಚಿಸಿ, ಯಡಿಯೂರಪ್ಪಗೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಸಾಮಾಜಿಕ ಜಾಲತಾಣ ಮುಖ್ಯಸ್ಥ ಕಾಳಚಂಡ ಅಪ್ಪಣ್ಣ, ಜಿಲ್ಲಾ ವಕ್ತಾರ ಎಂ.ಎಂ.ಕಾಳಪ್ಪ ಉಪಸ್ಥಿತರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.