ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾ‍ಪುರದಲ್ಲಿ ಮೊದಲ ಮಹಿಳಾ ಅಂಚೆ ಕಚೇರಿ

ಚಾಲನೆ ನೀಡಿದ ಹಿರಿಯ ಅಧಿಕಾರಿಗಳು
Last Updated 9 ಮಾರ್ಚ್ 2020, 13:55 IST
ಅಕ್ಷರ ಗಾತ್ರ

ಸಿದ್ದಾಪುರ: ಮಹಿಳಾ ಪೊಲೀಸ್ ಠಾಣೆ, ಮಹಿಳಾ ಕಾಲೇಜು... ಹೀಗೆ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಿರುವ ವಿವಿಧ ಕೇಂದ್ರಗಳನ್ನು ನೋಡಿದ್ದೀರಾ. ಆದರೆ, ಮಹಿಳಾ ಅಂಚೆ ಕಚೇರಿಯನ್ನು ನೋಡಬೇಕಾದರೆ ಸಿದ್ದಾಪುರಕ್ಕೇ ಬರಬೇಕಾದಿತು.

ಏನಿದು ಮಹಿಳಾ ಅಂಚೆ ಕಚೇರಿ ಅಂದುಕೊಂಡಿದ್ದೀರಾ? ಅಚ್ಚರಿಯಾದರೂ ಇದು ಸತ್ಯ.

ಸಿದ್ದಾಪುರ ಪಟ್ದಟಣದಲ್ಲಿರುವ ಅಂಚೆ ಕಚೇರಿಯ ಎಲ್ಲಾ ಸಿಬ್ಬಂದಿ ಕೂಡ ಮಹಿಳೆಯರೇ.

ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಿದ್ದಾಪುರದಲ್ಲಿ ಮಹಿಳಾ ಉದ್ಯೋಗಿಗಳ ಅಂಚೆ ಕಚೇರಿಗೆ ಸೋಮವಾರ ಚಾಲನೆ ನೀಡಲಾಯಿತು. ಜಿಲ್ಲಾ ಅಂಚೆ ಕಚೇರಿಯ ಉಪ ಅಂಚೆ ಅಧೀಕ್ಷಕ ದಯಾನಂದ ದೇವಾಡಿಗ ಅವರು ಅಂಚೆ ಕಚೇರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣಾ ಅಂಗವಾಗಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಉದ್ಯೋಗಿಗಳ ಅಂಚೆ ಕಚೇರಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಯೋಜನೆ ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಸಿದ್ದಾಪುರದ ಅಂಚೆ ಕಚೇರಿಯನ್ನು ಆಯ್ಕೆ ಮಾಡಲಾಗಿದೆ. ಅಂಚೆ ಕಚೇರಿಯ ಮೂಲಕ ವಿವಿಧ ಯೋಜನೆಗಳಿದ್ದು, ಜೀವ ವಿಮೆ, ಆರ್‌ಡಿ. ಖಾತೆ, ಬ್ಯಾಂಕ್ ಸೌಲಭ್ಯ ಸೇರಿದಂತೆ ಇನ್ನಿತರ ಉತ್ತಮ ಸೌಲಭ್ಯಗಳಿವೆ ಎಂದು ಮಾಹಿತಿ ನೀಡಿದರು.

ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಎಂ.ಕೆ.ಮೋಹನ್ ಮಾತನಾಡಿ, ಮಹಿಳಾ ಪೋಲಿಸ್ ಠಾಣೆಗಳು ಇರುವ ರೀತಿಯಲ್ಲಿ ಮಹಿಳಾ ಅಂಚೆ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಮಹಿಳಾ ಉದ್ಯೋಗಿಗಳು ಸಿದ್ದಾಪುರದ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರಿಂದ ಕಚೇರಿಯನ್ನು ಗುರುತಿಸಲಾಗಿದೆ ಎಂದರು.

ಸಿದ್ದಾಪುರದ ಅಂಚೆ ಪಾಲಕರಾದ ಗೀತಾ ಪ್ರಭಾ ಅವರು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿದ್ದಾರೆ. ಮಹಿಳೆಯರೇ ಇರುವ ಸಿದ್ದಾಪುರ ಅಂಚೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವ ಗುರಿ ಹೊಂದಲಾಗಿದೆ ಎಂದರು.

ಅಂಚೆ ಇಲಾಖೆಯ ಸಿಬ್ಬಂದಿ ಚೈತ್ರಾ, ಪವಿತ್ರಾ, ರವೀಂದ್ರ, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT