ಕಾಫಿ ತೋಟದಲ್ಲಿ ಕಾಡಾನೆ ಹಾವಳಿ

ಶುಕ್ರವಾರ, ಏಪ್ರಿಲ್ 19, 2019
27 °C

ಕಾಫಿ ತೋಟದಲ್ಲಿ ಕಾಡಾನೆ ಹಾವಳಿ

Published:
Updated:
Prajavani

ಸೋಮವಾರಪೇಟೆ: ತಾಲ್ಲೂಕಿನ ನಗರಳ್ಳಿ, ಕುಂದಳ್ಳಿ, ಕೂತಿ ಗ್ರಾಮ ಸೇರಿದಂತೆ ಹಲವೆಡೆಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಈ ಭಾಗದ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ.

ಬೇಸಿಗೆ ಕಾಲವಾಗಿರುವುದರಿಂದ ಆಹಾರವನ್ನರಸಿ ಕಾಫಿ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು, ಹೆಚ್ಚಿನ ಪ್ರಮಾಣದಲ್ಲಿ ಫಸಲನ್ನು ನಷ್ಟಗೊಳಿಸುತ್ತಿವೆ. ಕಾಫಿ ತೋಟಗಳಲ್ಲಿ ಬೆಳೆದಿರುವ ಬೈನೆ ಮರದ ತಿರುಳು ಕಾಡಾನೆಗಳಿಗೆ ಇಷ್ಟವಾದ ಆಹಾರ. ಕಾಫಿ ತೋಟಗಳಲ್ಲಿ ಹುಡುಕಿ ಬೈನೆ ಮರಗಳನ್ನು ಕೆಡವಿ ತಿರುಳನ್ನು ತಿನ್ನುತ್ತವೆ. ಬೈನೆ ಸೊಪ್ಪು, ಹಲಸಿನ ಹಣ್ಣು ತಿನ್ನಲು ಪ್ರತೀ ದಿನ ತೋಟಗಳಿಗೆ ದಾಳಿಯಿಡುತ್ತಿವೆ.

ಕುಂದಳ್ಳಿ ಕಾಡು, ಸಕಲೇಶಪುರ ತಾಲ್ಲೂಕಿನ ತಂಬಲಗೇರಿ ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ರಾತ್ರಿ ಸಮಯದಲ್ಲಿ ಕಾಫಿ ತೋಟಕ್ಕೆ ದಾಳಿ ಇಡುತ್ತಿವೆ.

ಗುರುವಾರ  ನಗರಳ್ಳಿ ಗ್ರಾಮದ ಎನ್.ಬಿ. ಗಣಪತಿ ಅವರ ಕಾಫಿ ತೋಟದಲ್ಲಿ ಅಳವಡಿಸಿದ್ದ 12 ಅಲ್ಯುಮಿನಿಯಂ ಸ್ಪ್ರಿಂಕ್ಲರ್ ಪೈಪ್ ಗಳು ಹಾಗೂ ಪ್ಲಾಸ್ಟಿಕ್ ಪೈಪ್ ಗಳನ್ನು ನಾಶಪಡಿಸಿವೆ.  ಅಲ್ಲದೆ ಪ್ರಕಾಶ್, ಚಂದ್ರ, ತೀರ್ಥ ಅವರು ತೋಟಗಳಲ್ಲಿ ಕಾಫಿ ಗಿಡಗಳನ್ನು ಮುರಿದು ಹಾಕಿವೆ.

ಕಾಡಾನೆಗಳಿಂದ ಸಂಭವಿಸಿದ ಬೆಳೆಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುತ್ತಿಲ್ಲ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಕೃಷಿಕರಿಗೆ ಹೆಚ್ಚಿನ ಸಹಕಾರ ಸಿಗುತ್ತಿಲ್ಲ. ನಿತ್ಯವೂ ತೋಟಕ್ಕೆ ನುಗ್ಗಿ ಹಾನಿ ಮಾಡುತ್ತಿದ್ದು ನಷ್ಟವಾಗುತ್ತಿದ್ದು, ದಿನಾ ಪರಿಹಾರಕ್ಕೆ ಅರ್ಜಿ ಕೊಡಲು ಸಾಧ್ಯವಿಲ್ಲ. ಕಾಡಾನೆ ನಿಯಂತ್ರಣಕ್ಕೆ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತ ಗಣಪತಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !