ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳಿನ ಗೋಳು; ಹೊಳೆಗಳೇ ಮಾಯವಾಗುವ ಭೀತಿ!

ಮೂರು ವರ್ಷದಿಂದ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ, ಮಳೆಗಾಲದಲ್ಲಿ ಕಾಡುವ ಆತಂಕ
Last Updated 7 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಸುಂಟಿಕೊಪ್ಪ: 2018ರಿಂದ ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಸಂಭವಿಸುತ್ತಿರುವ ಭೀಕರ ಜಲಪ್ರಳಯ ಮತ್ತು ಭೂಕುಸಿತದ ಬಳಿಕ ಈ ವ್ಯಾಪ್ತಿಯ ಗ್ರಾಮಗಳ ಹಲವು ಹೊಳೆಗಳಲ್ಲಿ ಹೂಳಿನ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಹೊಳೆಗಳು ಕಣ್ಮರೆಯಾಗುವ ಭೀತಿ ಉಂಟಾಗಿದೆ.

ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಮಾದಾಪುರ ಹೊಳೆ, ಹಟ್ಟಿಹೊಳೆ ಹಾಗೂ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು ಹೊಳೆಯಲ್ಲಿ ಮಣ್ಣು ತುಂಬಿ ನೀರು ಮಾಯವಾಗಿದೆ.

ಹರದೂರು ಹೊಳೆಯು ಹಾರಂಗಿ ಹಿನ್ನೀರಾಗಿದ್ದು, ಇದೀಗ ನೀರು ಸಂಪೂರ್ಣ ಇಳಿಮುಖಗೊಂಡಿದೆ. ಕಳೆದ 2-3 ವರ್ಷಗಳಿಂದ ಸಂಭವಿಸುತ್ತಿರುವ ಭೂಕುಸಿತ ಮತ್ತು ಪ್ರವಾಹದಿಂದ ಹರಿದು ಬಂದ ಮಣ್ಣು ಅಲ್ಲಲ್ಲಿಯೇ ಸಂಗ್ರಹವಾಗಿ ಹೊಳೆಗಳೆ ಮುಚ್ಚಲ್ಪಟ್ಟಿವೆ. ಇದರಿಂದ ಈ ಭಾಗಗಳ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ಬಂದಿದೆ.

ಈ ಹಿಂದೆ ಹಟ್ಟಿಹೊಳೆ, ಮುಕ್ಕೋಡ್ಲು ಸೇರಿದಂತೆ ಈ ಭಾಗದ ಕೆಲವು ಕಡೆ ಬೆಟ್ಟ, ಕಾಫಿ ತೋಟದಲ್ಲಿ ಕುಸಿದ ಮಣ್ಣು ಈ ಹೊಳೆಗಳ ಪಾಲಾಗಿವೆ. ಒಂದು ವೇಳೆ ಮಾದಾಪುರ, ಹಟ್ಟಿಹೊಳೆ, ಹರದೂರು ಹೊಳೆಗಳಲ್ಲಿ ಹೂಳು ತೆಗೆಯದಿದ್ದರೆ ಮೇ, ಜೂನ್‌ನಲ್ಲಿ ಪ್ರಾರಂಭವಾಗುವ ಮಳೆಗೆ ಹೊಳೆಗಳು ಉಕ್ಕಿ ಮೇಲೇರಲಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಎಲ್ಲ ಹೊಳೆಗಳು ಜನವರಿ, ಫೆಬ್ರುವರಿಯವರೆಗೂ ಹರಿಯುತ್ತಿತ್ತು. ಆದರೆ, ಕಳೆದ 2-3 ವರ್ಷಗಳಿಂದ ನವಂಬರ್‌ನಲ್ಲಿಯೇ ಹೊಳೆಯ ನೀರು ಖಾಲಿಯಾಗುತ್ತಿದ್ದು ಭವಿಷ್ಯದಲ್ಲಿ ಹೊಳೆಯೇ ಮಾಯಾವಾಗಲಿದೆಯೇ ಎಂಬ ಆತಂಕ ಜನರಲ್ಲಿ ಮೂಡಲಾರಂಭಿಸಿದೆ.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಭಾಗಗಳಲ್ಲಿ ಹೊಳೆ ಮಾತ್ರವಲ್ಲ. ನದಿ, ತೊರೆಗಳಲ್ಲಿ ಸೇರಿಕೊಂಡ ಪ್ರವಾಹದ ಹೂಳುಗಳನ್ನು ತೆಗೆಯುವಲ್ಲಿ ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ತೋರಿರುವುದರಿಂದ ಮತ್ತೊಮ್ಮೆ ಪ್ರವಾಹ ಕಂಡುಬಂದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹರದೂರು, ಹಟ್ಟಿಹೊಳೆ ಈ ಭಾಗದಲ್ಲಿ ಹೊಳೆಯ, ತೊರೆಗಳ ಅಕ್ಕಪಕ್ಕದಲ್ಲಿಯೇ ಸೂರು ಕಟ್ಟಿಕೊಂಡು ಬಹುತೇಕ ಜನರು ಬದುಕು ಸಾಗಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಏನಾಗಬಹುದು ಎಂಬ ಕಾತರದಲ್ಲಿ ಇದ್ದಾರೆ ಈ ಭಾಗದ ಜನ.

2018ರಲ್ಲಿ ಸಂಭವಿಸಿದ ಭೂಕುಸಿತ, ಜಲಪ್ರಳಯದ ವೇಳೆ ಈ ಭಾಗದಲ್ಲಿ ಹಲವು ಸಾವು– ನೋವುಗಳು ಸಂಭವಿಸಿದಲ್ಲದೇ, ಮನೆ, ತೋಟ ಕಳೆದುಕೊಂಡು ನಿರ್ಗತಿರಾಗಿದ್ದರು. ಮತ್ತೇ ಅಂತಹ ಪ್ರಾಕೃತಿಕ ವೈಫಲ್ಯ ಸಂಭವಿಸಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಈ ಭಾಗದ ಹೊಳೆಗಳಲ್ಲಿ ಅಷ್ಟೊಂದು ಹೂಳು ತುಂಬಿದ್ದರೂ ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡಿ ತೆರಳುತ್ತಿದ್ದಾರೆ ಎಂದು ಮಾದಾಪುರದ ಮಹಮ್ಮದ್ ಶರೀಫ್ ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT