ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಿಕಾ ವಿತರಕರ ದಿನ: ಮುಂಜಾನೆಯ ಕಾಯಕಯೋಗಿಗಳಿಗಿಲ್ಲ ಸೂರು!

Published : 4 ಸೆಪ್ಟೆಂಬರ್ 2024, 6:41 IST
Last Updated : 4 ಸೆಪ್ಟೆಂಬರ್ 2024, 6:41 IST
ಫಾಲೋ ಮಾಡಿ
Comments

ಮಡಿಕೇರಿ: ಮುಂಜಾನೆಯ ಕಾಯಕಯೋಗಿಗಳು ಎನಿಸಿದ ಪತ್ರಿಕಾ ವಿತರಕರು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಅತ್ಯಂತ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದು ಅವರ ಆರೋಪವಾಗಿದೆ. ಇನ್ನಾದರೂ ನಮ್ಮ ಸಮಸ್ಯೆಗಳನ್ನು ಆಲಿಸಲಿ ಎಂಬುದು ಅವರು ಒತ್ತಾಯವಾಗಿದೆ.

ಮೈಸೂರು ನಗರದಲ್ಲಿರುವಂತೆ ಮಡಿಕೇರಿಯಲ್ಲೂ ಪತ್ರಿಕಾ ವಿತರಕರಿಗೆಂದೇ ನಿರ್ದಿಷ್ಟ ಜಾಗವನ್ನು ಗುರುತಿಸಬೇಕು, ಒಂದು ಸೂರು ಕಲ್ಪಿಸಬೇಕು ಎಂಬದು ಪತ್ರಿಕಾ ವಿತರಕರ ಬಲು ದಿನಗಳ ಒತ್ತಾಯ. ಈ ಕುರಿತು ಅವರು ಸಾಕಷ್ಟು ಬಾರಿ ನಗರಸಭೆಗೆ ಮನವಿ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಮಳೆ ಹೆಚ್ಚು. ನಿರಂತರವಾಗಿ ಧೋ ಎಂದು ಸುರಿಯುವ ಮಳೆಯಲ್ಲಿ ಪತ್ರಿಕೆಗಳನ್ನು ವಿಂಗಡಿಸಿಕೊಳ್ಳುವುದು ನಿಜಕ್ಕೂ ಹೆಚ್ಚಿನ ಕಷ್ಟಕರವಾದ ಕೆಲಸ. ಅದರಲ್ಲೂ ಮಡಿಕೇರಿಯಲ್ಲಿ ವರ್ಷದ ಬಹುತೇಕ ತಿಂಗಳುಗಳ ಕಾಲ ಮುಂಜಾನೆ ಸುರಿಯುವ ಮಂಜಿನ ನಡುವೆ ಅವರು ಕಾರ್ಯನಿರ್ವಹಿಸಬೇಕಿದೆ. ಗಡಗಡನೆ ನಡುಗುತ್ತಾ ಸೂರ್ಯೋದಯಕ್ಕೂ ಮುನ್ನವೇ ಅವರು ತಮ್ಮ ಕಾರ್ಯಗಳಿಗೆ ಅಣಿಯಾಗಬೇಕಿದೆ. ಒಂದಿಷ್ಟು ಜಾಗ ಮತ್ತು ಸೂರು ಕೊಡಿ ಎಂಬುದು ಅವರ ಬಹುದಿನಗಳ ಮನವಿ.

ಎರಡು ವರ್ಷಗಳ ಹಿಂದೆಯೇ ಅವರು ಅಂದಿನ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಮನವಿಪತ್ರ ಸಲ್ಲಿಸಿದ್ದರು. ನಂತರ ಆ ಮನವ ಪತ್ರ ನಗರಸಭೆಗೂ ಬಂದಿತ್ತು. ಆದರೆ, ಅಧಿಕಾರಿಗಳು ವರ್ಗಾವಣೆಯಾಗಿ ಹೊಸ ಅಧಿಕಾರಿಗಳು ಬಂದಂತೆ ಇವರ ಮನವಿಪತ್ರ ಕಡತದಲ್ಲೇ ಉಳಿದಿದೆ.

ಈ ಕುರಿತು ‘ಪ್ರಜಾವಾಣಿ’ ನಗರಸಭೆ ಪೌರಾಯುಕ್ತ ವಿಜಯ್ ಅವರನ್ನು ಸಂಪರ್ಕಿಸಿದಾಗ ಅವರು, ‘ಮನವಿ ಪತ್ರದ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸವಲತ್ತುಗಳು ಬೇಕಿವೆ

ಮಡಿಕೇರಿಯಲ್ಲಿ ಪತ್ರಿಕಾ ವಿತರಕರು ಬೆಳ್ಳಂಬೆಳಿಗ್ಗೆ ದಿನಪತ್ರಿಕೆಗಳನ್ನು ಜೋಡಿಸುವ ಕಾರ್ಯದಲ್ಲಿ ಮಗ್ನರಾಗಿರುವುದು
ಮಡಿಕೇರಿಯಲ್ಲಿ ಪತ್ರಿಕಾ ವಿತರಕರು ಬೆಳ್ಳಂಬೆಳಿಗ್ಗೆ ದಿನಪತ್ರಿಕೆಗಳನ್ನು ಜೋಡಿಸುವ ಕಾರ್ಯದಲ್ಲಿ ಮಗ್ನರಾಗಿರುವುದು

ಸರ್ಕಾರವೂ ಪತ್ರಿಕಾ ವಿತರಕರ ಕಷ್ಟಗಳನ್ನು ಗಮನಿಸಬೇಕಿದೆ. ಮುಂಜಾನೆಯೇ ಎಲ್ಲರೂ ಎದ್ದೇಳುವ ಮೊದಲೇ ಕಾಯಕದಲ್ಲಿ ತೊಡಗುವ ಪತ್ರಿಕಾ ವಿತರಕರಿಗಾಗಿಯೇ ಆರೋಗ್ಯ ವಿಮೆ, ಜೀವವಿಮಾ ಸೌಲಭ್ಯಗಳನ್ನು ನೀಡಬೇಕು ಎನ್ನುವುದು ಬಹಳಷ್ಟು ಪತ್ರಿಕಾ ವಿತರಕರ ಒತ್ತಾಯವಾಗಿದೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಿಸಬೇಕಿದೆ.

ಮಡಿಕೇರಿಯಲ್ಲಿ ಪತ್ರಿಕಾ ವಿತರಕರು ಬೆಳ್ಳಂಬೆಳಿಗ್ಗೆ ದಿನಪತ್ರಿಕೆಗಳನ್ನು ಜೋಡಿಸುವ ಕಾರ್ಯದಲ್ಲಿ ಮಗ್ನರಾಗಿರುವುದು
ಮಡಿಕೇರಿಯಲ್ಲಿ ಪತ್ರಿಕಾ ವಿತರಕರು ಬೆಳ್ಳಂಬೆಳಿಗ್ಗೆ ದಿನಪತ್ರಿಕೆಗಳನ್ನು ಜೋಡಿಸುವ ಕಾರ್ಯದಲ್ಲಿ ಮಗ್ನರಾಗಿರುವುದು

ಹಲವು ಸವಾಲುಗಳ ಮಧ್ಯೆ ಪತ್ರಿಕೆ ವಿತರಣೆ

‘ಪತ್ರಿಕಾ ವಿತರಣೆ ಎಂಬುದು ಕೇವಲ ಕೆಲವೇ ಗಂಟೆಗಳ ಕೆಲಸ ಎಂದು ಮೇಲ್ನೋಟಕ್ಕೆ ಅತಿ ಸುಲಭ ಎನಿಸಬಹುದು. ಆದರೆ ಇದು ಅತ್ಯಂತ ಹೆಚ್ಚು ಸವಾಲಿನ ಕೆಲಸ ಎಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆಲ್ಲ ಗೊತ್ತಿರುವ ಸಂಗತಿಯಾಗಿದೆ’ ಎಂದು ಗೋಣಿಕೊಪ್ಪಲಿನ ಪತ್ರಿಕಾ ವಿತರಕರಾದ ನಂಗಾರು ಜಮುನಾ ವಸಂತ್ ತಾವು ಎದುರಿಸಿದ ಸವಾಲಿನ ಸಂಗತಿಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಕಳೆದ 14 ವರ್ಷಗಳ ನನ್ನ ಪತ್ರಿಕಾ ವಿತರಣಾ ಕ್ಷೇತ್ರದಲ್ಲಿ ಅನೇಕ ಸವಾಲುಗಳು ಎದುರಾಗಿವೆ. ಅವುಗಳಲ್ಲಿ ಕೋವಿಡ್ ಸಮಯದಲ್ಲಿ ಅತಿ ಹೆಚ್ಚಿನ ಸವಾಲುಗಳು ಎದುರಾದವು. ಬಹುತೇಕ ಕ್ಷೇತ್ರಗಳ ಜನರು ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲೆ ಉಳಿದರು. ಸಮಾಜದಲ್ಲಿ ಒಂದು ಬಗೆಯ ಭೀತಿ ಸೃಷ್ಟಿಯಾಯಿತು. ಆ ಭಯದ ನಡುವೆಯೂ ನಾವು ನಮ್ಮ ವೃತ್ತಿ ಬಿಡಲಿಲ್ಲ’ ಎಂದು ಹೆಮ್ಮೆಯಿಂದ ಅವರು ವಿವರಿಸುತ್ತಾರೆ. ಪತ್ರಿಕೆಗಳನ್ನು ಮುಟ್ಟುವುದರಿಂದಲೆ ಕೋವಿಡ್ ಬರುತ್ತದೆ ಎಂಬ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಆಗಂತೂ ಜನರು ಪತ್ರಿಕೆಗಳನ್ನು ಮುಟ್ಟುವುದಕ್ಕೆ ಹಿಂಜರಿದರು. ಆಗ ಅವರ ಮನವೊಲಿಸಿ ಪತ್ರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಣೆ ನೀಡಿದೆವು. ಇವಷ್ಟೇ ಅಲ್ಲ ಇನ್ನೂ ಅನೇಕ ಬಗೆಯ ಸಂಕಷ್ಟಗಳನ್ನು ಕೋವಿಡ್‌ ಕಾಲಘಟ್ಟದಲ್ಲಿ ಎದುರಿಸಿದೆವು ಎಂದು ಅವರು ಹೇಳಿದರು.

‘ಪತ್ರಿಕಾ ವಿತರಕರಿಗೆ ಸಂಭ್ರಮದಲ್ಲಿ ಬೇಡ ಕನಿಷ್ಠ ಪಕ್ಷ ಒಂದು ದುಃಖದ ಸನ್ನಿವೇಶದಲ್ಲಿ ಸರಿಯಾಗಿ ಪಾಲ್ಗೊಳ್ಳುವುದಕ್ಕೆ ಆಗುವುದಿಲ್ಲ. ತೀರಾ ಆಪ್ತರ ಸಾವಿನ ಸಂದರ್ಭಗಳು ಅನಾರೋಗ್ಯದ ಸನ್ನಿವೇಶಗಳು ಎದುರಾದಾಗಲೂ ನಾವು ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುತ್ತೇವೆ. ಇದು ನಮ್ಮ ಕಾಯಕ ನಿಷ್ಠೆ’ ಎಂದು ಅವರು ವಿವರಿಸುತ್ತಾರೆ.

ಪತ್ರಿಕಾ ವಿತರಣೆ ಎಂಬುದು ಖಂಡಿತವಾಗಿಯೂ ನಷ್ಟದ ಕೆಲಸ ಅಲ್ಲ. ಆದರೆ ಪತ್ರಿಕೆ ವಿತರಣೆ ಮಾಡುವವರು ಈ ಕಾಯಕದಲ್ಲಿ ಅತ್ಯಂತ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಆಸಕ್ತಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ಆಗ ಯಶಸ್ಸು ತಾನೇ ತಾನಾಗಿ ಒಲಿದು ಬರುತ್ತದೆ ಎಂದರು. ‘ನನ್ನೊಡನೇ ನನ್ನ ಪತಿ ವಸಂತ್ ಅವರು ಅಧಿಕ ಶ್ರಮ ವಹಿಸುತ್ತಿದ್ದಾರೆ’ ಎಂದು ಅವರು ಶ್ಲಾಘಿಸಿದರು.

22 ಪತ್ರಿಕೆಗಳಿಂದ 8 ಸಾವಿರ ಪತ್ರಿಕೆಗಳವರೆಗೆ...

ಕಳೆದ 25 ವರ್ಷಗಳ ಹಿಂದೆ ಕೇವಲ 22 ಪತ್ರಿಕೆಗಳ ಮೂಲಕ ಪತ್ರಿಕೆ ವಿತರಣೆ ಆರಂಭಿಸಿದ್ದೆ. ಈಗ ವಿವಿಧ 8 ಸಾವಿರ ಪತ್ರಿಕೆಗಳನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುತ್ತಿರುವೆ. 18 ಯುವಕರಿಗೆ ಕೆಲಸ ನೀಡಿರುವೆ... ಹೀಗೆ ಪತ್ರಿಕಾ ವಿತರಣಾ ಕ್ಷೇತ್ರಕ್ಕೆ ಕಾಲಿರಿಸಿದ ಕುರಿತು ‘ಪ್ರಜಾವಾಣಿ’ ಜೊತೆ ಮಾತಿಗಿಳಿದವರು ಟಿ.ಜಿ.ಸತೀಶ್.

‘ನಾನು ಆಗ ಕೇವಲ ₹ 11 ಸಂಬಳದಿಂದ ಕೆಲಸ ಆರಂಭಿಸಿದ್ದೆ. ಈಗ ಇಂದು ₹ 5ರಿಂದ ₹ 10 ಸಾವಿರದವರೆಗೆ ಸಂಬಳ ನೀಡುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಬೇಸರದಿಂದ ಅವರು ಹೇಳಿದರು.

ಮುಂಚೆ ಸಂಜೆ 6 ಗಂಟೆಯವರೆಗೂ ಪತ್ರಿಕೆಯನ್ನು ವಿತರಣೆ ಮಾಡಿದ ಉದಾಹರಣೆಗಳಿವೆ. ಬೆಂಗಳೂರಿನಲ್ಲಿ ಮಾತ್ರವೇ ಮುದ್ರಣವಾಗಿ ಆ ಪತ್ರಿಕೆ ಕಾಡಂಚಿನ ಗ್ರಾಮವನ್ನು ತಲುಪಬೇಕಾದರೆ ಸಂಜೆಯಾಗುತ್ತಿತ್ತು. ಆದರೂ ಆಗ ಪತ್ರಿಕೆಗಳಿಗಾಗಿ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಆಗ ರೇಡಿಯೊ ಬಿಟ್ಟರೆ ಪತ್ರಿಕೆ ಮಾತ್ರವೇ ಹೊರಜಗತ್ತಿನ ವಿದ್ಯಮಾನಗಳನ್ನು ತಿಳಿಯುವ ಸಾಧನಗಳಾಗಿದ್ದವು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಆದರೆ ಈಗ ಕಾಲ ಬದಲಾಗಿದೆ. ಇತ್ತೀಚೆಗಂತೂ ಕಾಲ ವೇಗವಾಗಿ ಬದಲಾಗುತ್ತಿದೆ. ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಟಿ.ವಿ ಬಂದ ಮೇಲೆ ಪತ್ರಿಕಾ ವಿತರಣೆ ಕ್ಷೇತ್ರಕ್ಕೆ ತೊಡಕಾಗಿರಲಿಲ್ಲ. ಆದರೆ ಸ್ಮಾರ್ಟ್‌ಫೋನ್‌ಗಳು ಬಂದ ಮೇಲಂತೂ ಅಗ್ಗದ ಡೇಟಾ ಪ್ಯಾಕ್‌ಗಳು ಬಂದ ಮೇಲಂತೂ ಯುವ ಸಮೂಹ ಮುದ್ರಿತ ಪತ್ರಿಕೆಗಳಿಂದ ದೂರ ಉಳಿಯುತ್ತಿದೆ. ಒಂದು ಮನೆಯಲ್ಲಿ ಹಿರಿಯರು ಕಾಲವಾದ ಮೇಲೆ ಅವರ ಮಕ್ಕಳು ಪತ್ರಿಕೆಗಳು ಬೇಡ ಎನ್ನುವಂತಹ ಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಬೇಸರದಿಂದ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT