ಹೊಸ ಭತ್ತ ಮನೆ ತುಂಬಿಸುವ ಸಿದ್ಧತೆ

7
ಕಟಾವಿಗೆ ಬಂದ ಭತ್ತದ ಬೆಳೆ, ಒಕ್ಕಣೆ ಬಿರುಸು

ಹೊಸ ಭತ್ತ ಮನೆ ತುಂಬಿಸುವ ಸಿದ್ಧತೆ

Published:
Updated:
Deccan Herald

ಸೋಮವಾರಪೇಟೆ: ಮುಂಗಾರು ಗಾಳಿ ಮಳೆಯ ಆರ್ಭಟದ ನಡುವೆಯೂ ರೈತರು ಎರಡು ಮೂರು ಬಾರಿ ನಾಟಿ ಮಾಡಿ ಭತ್ತದ ಕೃಷಿ ಮಾಡಿದ್ದು ಇದೀಗ ಹೊಸ ಫಸಲನ್ನು ಮನೆ ತುಂಬಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ತೋಟಗಾರಿಕೆ ಬೆಳೆ ಕಾಫಿಯ ನಂತರದ ಸ್ಥಾನವನ್ನು ಭತ್ತ ಪಡೆದಿದೆ. ಆದರೆ, ಪ್ರಸಕ್ತ ವರ್ಷದ ಮುಂಗಾರು ಮಳೆ, ಭತ್ತದ ಕೃಷಿಕರನ್ನು ಹೈರಾಣಾಗಿಸಿತ್ತು.

ಶಾಂತಳ್ಳಿ ಹೋಬಳಿಯ ಹಲವೆಡೆ ಮತ್ತು ಸುಂಟಿಕೊಪ್ಪ ಹೋಬಳಿಯ ಗರ್ವಾಲೆ– ಸೂರ್ಲಬ್ಬಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಿಂದ ಭತ್ತದ ಕೃಷಿಗೆ ಹೆಚ್ಚು ನಷ್ಟವಾಗಿತ್ತು. ಹಲವು ಗದ್ದೆಗಳು ಬರೆ, ಗುಡ್ಡ ಕುಸಿತದಿಂದ ಮುಚ್ಚಿ ಹೋಗಿದ್ದರೆ ಹಲವು ಕಡೆಗಳಲ್ಲಿ ಭತ್ತದ ನಾಟಿ ಪೈರು ಕೊಳೆರೋಗಕ್ಕೆ ತುತ್ತಾಗಿತ್ತು.

ನದಿ, ತೊರೆಗಳು ತುಂಬಿ ಹರಿದಿದ್ದರಿಂದ ಗದ್ದೆಗಳಲ್ಲಿ ನಾಟಿ ಮಾಡಿದ ಪೈರು ಕೊಚ್ಚಿ ಹೋಗಿತ್ತು. ಹಲವೆಡೆ ಭತ್ತಕ್ಕೆ ಬೆಂಕಿರೋಗ, ಕಂಬಳಿ ಹುಳು ಬಾಧೆ ಹಾಗೂ ಸೈನಿಕ ಹುಳುಗಳ ಕಾಟವೂ ಅಲ್ಲಲ್ಲಿ ಕಂಡುಬಂದಿತ್ತು.

ಮಹಾಮಳೆ ಶಾಂತಳ್ಳಿ, ಸೋಮವಾರಪೇಟೆ, ಕಸಬಾ ಹಾಗೂ ಸುಂಟಿಕೊಪ್ಪದ ಹೋಬಳಿಯ ಭತ್ತ ಫಸಲು ಸಾಧಾರಣವಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳಲ್ಲಿನ ಭತ್ತ ಕೃಷಿಕರು, ಕಷ್ಟಪಟ್ಟು ಭತ್ತದ ಫಸಲನ್ನು ಉಳಿಸಿಕೊಂಡಿದ್ದರು. ಆದರೆ, ಇದೀಗ ಅಕಾಲಿಕ ಮಳೆಯ ಆತಂಕ ಎದುರಾಗಿದ್ದು, ಭತ್ತದ ಫಸಲು ಮನೆ ಸೇರುವುದೇ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಕಳೆದ ಹದಿನೈದು ದಿನಗಳಿಂದ ಮೋಡದ ವಾತಾವರಣ ಇವರುವುದರಿಂದ ಕೆಲವು ರೈತರು ಪೈರನ್ನು ಕೊಯ್ಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಶನಿವಾರಸಂತೆಯ ಕೆಲವೆಡೆ ಹಾಗೂ ಕೊಡ್ಲಿಪೇಟೆಯ ಹೆಚ್ಚಿನ ಭಾಗದಲ್ಲಿ ಹಿಂದಿನ ವಾರ ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರಿದಿದೆ. ಮಳೆ ಬಿದ್ದರೆ ಭತ್ತ ಉದುರಿ ಫಸಲು ನಷ್ಟವಾಗುವ ಭೀತಿಯಲ್ಲಿ ಬೆಳೆಗಾರರು ಇದ್ದಾರೆ.

ಶಾಂತಳ್ಳಿ ಹೋಬಳಿಯ ಮಲ್ಲಳ್ಳಿ, ಕೂತಿ, ಕೊತ್ನಳ್ಳಿ, ಕುಡಿಗಾಣ, ಹೆಗ್ಗಡಮನೆ, ಹರಗ, ಬೆಟ್ಟದಳ್ಳಿ, ಬೆಂಕಳ್ಳಿ, ಬೀದಳ್ಳಿ, ನಾಡ್ನಳ್ಳಿ, ಕುಂದಳ್ಳಿ, ಕುಮಾರಳ್ಳಿ ಬಾಚಳ್ಳಿ, ಸುಂಟಿಕೊಪ್ಪ ಹೋಬಳಿಯ ಕುಂಬಾರಗಡಿಗೆ, ಕಿಕ್ಕರಳ್ಳಿ, ಇಗ್ಗೊಡ್ಡು, ಮೂವತ್ತೊಕ್ಲು, ಮಂಕ್ಯಾ, ಸೂರ್ಲಬ್ಬಿ ಗ್ರಾಮಗಳಲ್ಲಿ ಮಳೆಯಿಂದ ಭತ್ತ ಶೇ 50ರಷ್ಟು ಹಾನಿಯಾಗಿದೆ.

‘9,370 ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿತ್ತು. ನಂತರ ಸುರಿದ ಧಾರಾಕಾರ ಮಳೆಯಿಂದ ಭತ್ತ ಬೆಳೆ ಸಂಪೂರ್ಣ ನಾಶವಾಗುವ ಆತಂಕವಿತ್ತು. ನಂತರ ಹೂಳು ತುಂಬಿದ್ದ ಸುಮಾರು 85 ಹೆಕ್ಟೇರ್ ಗದ್ದೆಯಲ್ಲಿ ಹೂಳು ತೆಗೆದು ಮರು ನಾಟಿ ಮಾಡಲಾಗಿದೆ. ಹಾನಿಯಾದ ಪ್ರದೇಶದಲ್ಲೂ ಭತ್ತದ ಪೈರು ಮತ್ತೆ ಚಿಗುರಿದೆ. ಪರಿಹಾರಕ್ಕಾಗಿ ಬೆಳೆಹಾನಿ ಪ್ರದೇಶಗಳಿಗೆ ಪರಿಶೀಲನೆ ನಡೆಸಿ ತಹಶೀಲ್ದಾರ್‌ಗೆ ವರದಿ ನೀಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ರಾಜಶೇಖರ್ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !