ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ತಿಪ್ಪೆ ಸೇರಿದ ಹೂವು, ಮೆಣಸಿನಕಾಯಿ ಕೇಳೋರಿಲ್ಲ

ಬೆಲೆ ಕುಸಿತ, ಮಾರುಕಟ್ಟೆ ಇಲ್ಲದೆ ಕಂಗಾಲಾದ ರೈತರು
Last Updated 3 ಮೇ 2021, 3:34 IST
ಅಕ್ಷರ ಗಾತ್ರ

ಶನಿವಾರಸಂತೆ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಕೊಳ್ಳುವ ವರಿಲ್ಲದೇ ಹಸಿರುಮೆಣಸಿ ನಕಾಯಿ ದರ ಕುಸಿತ ಕಂಡರೆ, ಚೆಂಡು ಹೂವಿಗೆ ಮಾರುಕಟ್ಟೆ ಇಲ್ಲವಾಗಿದೆ. ಬೆಳೆದ ಹೂವಿನ ಗಿಡಗಳನ್ನು ಕಿತ್ತು ತಿಪ್ಪೆಗೆ ಎಸೆಯುವ ಸ್ಥಿತಿ ನಿರ್ಮಾಣವಾಗಿದೆ.

ಸಮೀಪದ ದೊಡ್ಡಬಿಳಾಹ ಗ್ರಾಮದ ಕೃಷಿಕ ಬಿ.ಎಂ. ವಿಜಯ್ ತಮ್ಮ ಅರ್ಧ ಎಕರೆ ಗದ್ದೆಯಲ್ಲಿ ₹25 ಸಾವಿರ ಖರ್ಚು ಮಾಡಿ ನಾಲ್ಕು ಸಾವಿರ ಚೆಂಡು ಹೂವು ಬೆಳೆದಿದ್ದರು. ಈಗಾಗಲೇ ಹೂವನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕಿತ್ತು. ಇದೇ ವೇಳೆ ಲಾಕ್‌ಡೌನ್‌ ಘೋಷಿಸಿರುವುದರಿಂದ ಮಾರುಕಟ್ಟೆಯಿಲ್ಲದಂತಾಗಿದೆ. ಚೆಂಡು ಹೂ ಮಾರಬೇಕೆಂದರೂ ಖರೀದಿಸುವವರಿಲ್ಲ. ಹತಾಶರಾದ ವಿಜಯ್ ಅವರು, ತಾವು ಬೆಳೆದಿದ್ದ ಚೆಂಡು ಹೂವಿನ ಗಿಡಗಳನ್ನು ಕಿತ್ತು ಗೊಬ್ಬರದ ಗುಂಡಿಗೆ ಹಾಕಿದ್ದಾರೆ. ಗ್ರಾಮದಲ್ಲಿ ಇನ್ನೂ ಕೆಲ ರೈತರು ಚೆಂಡು ಹೂವು ಬೆಳೆದಿದ್ದು ಕಂಗಾಲಾಗಿದ್ದಾರೆ.

ಯುವ ಕೃಷಿಕ ಬಿ.ಪಿ.ಪ್ರಣೀತ್ ಕುಮಾರ್ ತಮ್ಮ ಗದ್ದೆಯಲ್ಲಿ ಹಸಿರು ಮೆಣಸಿನಕಾಯಿ ಗಿಡಗಳನ್ನು ಬೆಳೆದಿದ್ದಾರೆ. ಸೊಂಪಾಗಿ ಬೆಳೆದಿರುವ ಗಿಡಗಳಲ್ಲಿ ಉತ್ತಮ ಫಸಲು ಬಂದಿದೆ. ಉತ್ತಮ ದರ ಸಿಗುವ ಸಮಯದಲ್ಲಿ ಘೋಷಣೆಯಾದ ಲಾಕ್‌ಡೌನ್ ನಿರಾಶೆ ಮೂಡಿಸಿದೆ.

ಮೆಣಸಿನಕಾಯಿ ದರ ಕುಸಿತ: ಖರ್ಚು ಮಾಡಿ ಬೆಳೆದ ಮೆಣಸಿನಕಾಯಿಗೆ ಆರಂಭದಲ್ಲಿ 1 ಕೆ.ಜಿ.ಗೆ ₹8 ರಿಂದ ₹10 ದರವಿತ್ತು. ವಾರದಿಂದ ವಾರಕ್ಕೆ ಏರಿಕೆಯಾಗುತ್ತಾ ಬಂದು ₹40 ದರ ದೊರೆಯುತ್ತಿತ್ತು. ಹೊರ ಜಿಲ್ಲೆಯ ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಮೆಣಸಿನ ಕಾಯಿ ಖರೀದಿಸುತ್ತಿದ್ದರು. ಕೋವಿಡ್ ಲಾಕ್‌ಡೌನ್ ನಂತರವೂ ಬರುತ್ತಿದ್ದಾರೆ. ಆದರೆ, ದರ ಕುಸಿದಿದ್ದು, ₹10ಕ್ಕೆ ಖರೀದಿಸುತ್ತಿದ್ದಾರೆ. ರೈತರು ವಿಧಿಯಿಲ್ಲದೆ ಮಾರುವಂತಾಗಿದೆ.

‘ಮೆಣಸಿನಕಾಯಿ ಕೊಯ್ಯಲು ಕಾರ್ಮಿಕರ ಕೊರತೆಯಿದೆ. ಹೆಣ್ಣಾಳಿಗೆ ದಿನಕ್ಕೆ ₹180ರಿಂದ ₹300 ಹಾಗೂ ಗಂಡಾಳಿಗೆ ₹400 ಕೂಲಿ ಕೊಡಬೇಕು. ಗೊಬ್ಬರದ ಬೆಲೆ ಜಾಸ್ತಿಯಾಗಿದೆ, ಪೆಟ್ರೋಲ್-ಡೀಸೆಲ್ ಬೆಲೆಯೂ ಹೆಚ್ಚಾಗಿದೆ. ದರ ಕುಸಿತಕ್ಕೆ ಲಾಕ್‌ಡೌನ್ ಕಾರಣ ಎಂದು ದೊಡ್ಡಬಿಳಾಹ ಗ್ರಾಮದ ಯುವ ಕೃಷಿಕ ಬಿ.ಎಂ.ಪ್ರಣೀತ್ ಕುಮಾರ್ ಅಳಲು ತೋಡಿಕೊಂಡರು.

‘ಮುಂದೆ ಕೃಷಿ ಮಾಡಬೇಕೋ, ಬಿಡಬೇಕೋ ಎಂಬ ಜಿಜ್ಞಾಸೆ ರೈತರಲ್ಲಿ ಮೂಡಿದೆ. ಯುವಕರಿಗೆ ಕೃಷಿ ಬಗ್ಗೆ ಆಸಕ್ತಿಯಿಲ್ಲ ಎಂಬ ಮಾತನ್ನು ಸುಳ್ಳಾಗಿಸುವ ಸಲುವಾಗಿ ಪದವಿ ಮುಗಿದ ಮೇಲೆ ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಲಾಕ್‌ಡೌನ್ ಜೊತೆಗೆ ಕೂಲಿ ಕೊಡಲು ಕಾಸಿಲ್ಲದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ನಿಗದಿತ ಬೆಂಬಲ ಬೆಲೆ ಘೋಷಿಸಲಿ’ ಎಂದು ಅವರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT