ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಡಯಾಲಿಸಿಸ್‌ಗಾಗಿ ರೋಗಿಗಳ ಪರದಾಟ

Published 3 ಡಿಸೆಂಬರ್ 2023, 3:37 IST
Last Updated 3 ಡಿಸೆಂಬರ್ 2023, 3:37 IST
ಅಕ್ಷರ ಗಾತ್ರ

ಮಡಿಕೇರಿ/ವಿರಾಜಪೇಟೆ: ಡಯಾಲಿಸಿಸ್‌ ಕೇಂದ್ರಗಳ ಸಿಬ್ಬಂದಿ ಮುಷ್ಕರ ನಡೆಸಿರುವುದರಿಂದಾಗಿ, ಈ ಸೇವೆ ಅಗತ್ಯವಿರುವ ರೋಗಿಗಳಿಗೆ ತೊಂದರೆಯಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಿವೆ. ಸಿದ್ದಾಪುರ, ಗೋಣಿಕೊಪ್ಪಲು ಹಾಗೂ ಅಮ್ಮತ್ತಿಯಲ್ಲಿ ಮಾತ್ರ ಖಾಸಗಿ ಕೇಂದ್ರಗಳಿವೆ. ಈಗ ಸರ್ಕಾರಿ ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ನೂರಾರು ರೋಗಿಗಳು ಸೇವೆಗಾಗಿ ಪರದಾಡುವಂತಾಗಿದೆ.

ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ 15 ಮಂದಿಗೆ ಡಯಾಲಿಸಸ್ ಮಾಡಲಾಗುತ್ತಿತ್ತು. ಅದೀಗ ಬಂದ್ ಆಗಿದೆ. ಹೀಗಾಗಿ, ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಿ ಡಯಾಲಿಸಿಸ್ ಮಾಡುತ್ತಿದ್ದಾರೆ. ಇದು, ರೋಗಿಗಳಿಗೆ ದುಬಾರಿಯಾಗಿ ಪರಿಣಮಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ.ವಿಶ್ವನಾಥ ಸಿಂಪಿ, ‘ರೋಗಿಗಳಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸುವ ದೃಷ್ಟಿಯಿಂದ ಆಸ್ಪತ್ರೆಯ ಸಿಬ್ಬಂದಿಯನ್ನೇ ಬಳಸಿಕೊಂಡು ತಂತ್ರಜ್ಞರ ಸಹಕಾರ ಪಡೆದು ಸೋಮವಾರದಿಂದ ಡಯಾಲಿಸಿಸ್‌ ಸೇವೆ ಕೊಡಲಾಗುವುದು’ ಎಂದು ಹೇಳಿದರು.

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ.

‘ಡಯಾಲಿಸಿಸ್ ಮಾಡಿಲ್ಲ ಎಂದು ಈವರೆಗೆ ಯಾರಿಂದಲೂ ದೂರು ಬಂದಿಲ್ಲ. ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದರೂ, ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸುತ್ತಿದ್ದಾರೆ. ನಾವೂ ನಿಗಾ ಇಟ್ಟಿದ್ದೇವೆ’ ಎಂದು ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ಕುಮಾರ್ ಪ್ರತಿಕ್ರಿಯಿಸಿದರು.

ಸೋಮವಾರಪೇಟೆ: ನಿರಾಸೆ ಆತಂಕದಿಂದ ವಾಪಸ್ಸಾದ ರೋಗಿಗಳು

ಸೋಮವಾರಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆಯೇ ಡಯಾಲಿಸಿಸ್‌ಗಾಗಿ ಬಂದಿದ್ದ 8 ಮಂದಿ ಸಂಜೆ ತನಕ ಕುಳಿತು ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗದೆ ನಿರಾಸೆ ಹಾಗೂ ಆತಂಕದಿಂದ ವಾಪಸ್ಸಾದರು. ಆಸ್ಪತ್ರೆ ವತಿಯಿಂದ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಶನಿವಾರವೂ ಸಾಧ್ಯವಾಗಲಿಲ್ಲ. ಹೀಗಾಗಿ ದೂರದ ಊರುಗಳಿಂದ ಬಂದಿದ್ದವರು ಪರದಾಡಿದರು. ಡಯಾಲಿಸಿಸ್‌ಗಾಗಿ ಹಾಸನ ಇಲ್ಲವೇ ಮೈಸೂರಿಗೆ ತೆರಳಬೇಕಿದೆ. ಇಲ್ಲಿ ಕನಿಷ್ಠ ಎಂದರೂ ₹ 5 ರಿಂದ ₹ 6 ಸಾವಿರ ವೆಚ್ಚವಾಗುತ್ತದೆ. ಇದನ್ನು ಭರಿಸಲು ಹೆಚ್ಚಿನ ಕುಟುಂಬದವರಿಂದ ಸಾಧ್ಯವಿಲ್ಲ ಎಂದು ಹೇಳಿದರು. ಇದರಿಂದಾಗಿ ಬೆಳಿಗ್ಗೆಯಿಂದ ಡಾಯಲಿಸಿಸ್‌ಗೆ ಬಂದ ರೋಗಿಗಳಾದ ಭೋಪಾಲ್ ಸುರೇಶ್ ಶೇಖರ್ ಸೇರಿದಂತೆ 8 ಜನರು ಹಿಂದಕ್ಕೆ ತೆರಳಿದರು.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮುಷ್ಕರ ನಿರತರಾಗಿರುವುದರಿಂದ ಡಯಾಲಿಸಿಸ್ ಸೇವೆ ಇರುವುದಿಲ್ಲ ಎಂದು ಚೀಟಿ ಅಂಟಿಸಿರುವುದು
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮುಷ್ಕರ ನಿರತರಾಗಿರುವುದರಿಂದ ಡಯಾಲಿಸಿಸ್ ಸೇವೆ ಇರುವುದಿಲ್ಲ ಎಂದು ಚೀಟಿ ಅಂಟಿಸಿರುವುದು
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮುಷ್ಕರ ನಿರತರಾಗಿರುವುದರಿಂದ ಡಯಾಲಿಸಿಸ್ ಸೇವೆ ಇರುವುದಿಲ್ಲ ಎಂದು ಚೀಟಿ ಅಂಟಿಸಿರುವುದು
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮುಷ್ಕರ ನಿರತರಾಗಿರುವುದರಿಂದ ಡಯಾಲಿಸಿಸ್ ಸೇವೆ ಇರುವುದಿಲ್ಲ ಎಂದು ಚೀಟಿ ಅಂಟಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT