ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತೆ ಓದಿಗೆ ಪೂರ್ವಾಗ್ರಹದ ಕನ್ನಡಕ ಬೇಡ: ಸಾಹಿತಿ ಮಾರುತಿ ದಾಸಣ್ಣನವರ್

ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಮಾರುತಿ ದಾಸಣ್ಣನವರ್ ಪ್ರತಿಪಾದನೆ
Published 22 ಮೇ 2024, 4:50 IST
Last Updated 22 ಮೇ 2024, 4:50 IST
ಅಕ್ಷರ ಗಾತ್ರ

ಕುಶಾಲನಗರ: ಪೂರ್ವಾಗ್ರಹದ ಕನ್ನಡಕ ಹಾಕಿಕೊಂಡೇ ಒಂದು ಕವಿತೆಯನ್ನು ಪರೀಕ್ಷೆಗೊಳಪಡಿಸುವುದು ಸರಿಯಲ್ಲ. ಕವಿತೆ ಅದು ಕವಿತೆ. ಅದನ್ನು ಸುಮ್ಮನೇ ತೆರೆದ ಮನಸ್ಸಿನಲ್ಲಿ ಓದಬೇಕು ಮತ್ತು ಅನುಭವಿಸಬೇಕು ಎಂದು ಸಾಹಿತಿ ಮಾರುತಿ ದಾಸಣ್ಣನವರ್ ಪ್ರತಿಪಾದಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ಸುವರ್ಣ ಸಂಭ್ರಮ: 50ರ ಸಂದರ್ಭದ ಅಂಗವಾಗಿ ಏರ್ಪಡಿಸಿದ್ದ
ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಮೂರ್ನಾಡಿನ ಕವಯಿತ್ರಿ, ಶಿಕ್ಷಕಿ ಕೆ.ಜಿ.ರಮ್ಯಾ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಕವಿತೆ ರಚನೆಗೆ ಯಾವುದೇ ಛಂದ, ಬಂಧ, ಪ್ರಾಸ, ಧೋರಣೆ, ವಸ್ತು, ಆಶಯಗಳಂತಹ ಸಿದ್ದ ರಚನೆ ಇರಬೇಕಿಲ್ಲ. ವಾಸ್ತವಿಕ ನೆಲೆಗಟ್ಟಿನಲ್ಲಿ ಭಾವನಾತ್ಮಕ ಸನ್ನಿವೇಶದಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಳ್ಳುವ ಕವಿತೆಗಳು ಗಟ್ಟಿಯಾಗಿ ನೆಲೆಯೂರುತ್ತವೆ ಎಂದು  ಅಭಿಪ್ರಾಯಪಟ್ಟರು.

ಕೆ.ಜಿ.ರಮ್ಯ ಅವರ ‘ದಾಹಗಳ ಮೈ ಸವರುತ್ತಾ’ ಸಂಕಲನವು ಶೋಷಿತ ಮಹಿಳೆಯರ ನೋವು- ನಲಿವುಗಳ ಬಗ್ಗೆ ಬೆಳಕು ಚೆಲ್ಲತ್ತವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ,
‘ಗೌರಮ್ಮ ದತ್ತಿ ಪ್ರಶಸ್ತಿ ಆರಂಭದ ಹಂತದಲ್ಲಿ ಜಿಲ್ಲೆಯಲ್ಲಿದ್ದ ಮಹಿಳಾ ಬರಹಗಾರರ ಕೊರತೆ ಇದೀಗ ನೀಗಿದ್ದು, ಇಂದು ಜಿಲ್ಲೆಯಲ್ಲಿ ಹೆಚ್ಚಿನ ಮಹಿಳಾ ಸಾಹಿತಿಗಳು ಬೆಳೆದಿರುವುದು ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದರು.

ಸಾಹಿತಿ ಸುನಿತಾ ಲೋಕೇಶ್ ಅವರು ‘ಮಹಿಳಾ ಸಾಹಿತ್ಯದ ಬೆಳವಣಿಗೆ ಹಾಗೂ ಕೊಡಗಿನ ಕಥೆಗಾರ್ತಿ ಗೌರಮ್ಮ ಅವರ ಕಥೆಗಳ ಕುರಿತು ಮಾತನಾಡಿದರು. ‘ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಬರಹಗಾರರ ಸಂಖ್ಯೆ ವೃದ್ಧಿಸುತ್ತಿರುವುದು ಶ್ಲಾಘನೀಯ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್ ಮಾತನಾಡಿ,‘ಮಹಿಳಾ ಬರಹಗಾರರ ಬರವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕ.ಸಾ.ಪ.ವತಿಯಿಂದ ನೀಡುವ ಕೊಡಗಿನ ಪ್ರತಿಷ್ಠಿತ ಪ್ರಶಸ್ತಿಯಾದ ಗೌರಮ್ಮ ದತ್ತಿ ಪ್ರಶಸ್ತಿಯು ಈ ಬಾರಿ ಕೆ.ಜಿ.ರಮ್ಯ ಅವರ ‘ದಾಹಗಳ ಮೈ ಸವರುತ್ತಾ’ ಎಂಬ ಕವನ ಸಂಕಲನಕ್ಕೆ ಲಭಿಸಿದೆ.

ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶ ಮೈಗೂಡಿಸಿಕೊಂಡ ಕಥೆಗಾರ್ತಿ ಗೌರಮ್ಮ , ಪ್ರಗತಿಪರ ಚಿಂತನೆ ಮತ್ತು ಆಲೋಚನೆಗಳಿಂದ ತಮ್ಮ ಕಥೆಗಳಲ್ಲಿ ಮಹಿಳೆಯರ ಧ್ವನಿಯನ್ನು ಪ್ರತಿಬಿಂಬಿಸಿದ್ದಾರೆ ಎಂದರು.

ಗೌರಮ್ಮ ಪ್ರಶಸ್ತಿ ಪುರಸ್ಕೃತರಾದ ಕೆ.ಜಿ.ರಮ್ಯಾ , ತಾವು ಕವನ ರಚಿಸಲು ತಮ್ಮ ಪರಿಸರದಲ್ಲಿ ಸಿಕ್ಕಿದ ಪ್ರೇರಣೆ ಹಾಗೂ ಸ್ನೇಹಿತರು ಮತ್ತು ಕುಟುಂಬದ ಸಹಕಾರವನ್ನು ಸ್ಮರಿಸಿದರು.

ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಎಸ್.ಸುನಿಲ್ ಕುಮಾರ್ , ‘ಇಂತಹ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಸಹಕಾರಿಯಾಗಿವೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಂ.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ರೇವತಿ ರಮೇಶ್, ಸಮಿತಿ ನಿರ್ದೇಶಕ ಮೆ.ನಾ.ವೆಂಕಟನಾಯಕ,
ಮಡಿಕೇರಿ ತಾಲ್ಲೂಕು ಕ.ಸಾ.ಪ.ಅಧ್ಯಕ್ಷೆ ಕಡ್ಲೇರ ತುಳಸಿ, ಕುಶಾಲನಗರ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್,
ಕೋಶಾಧಿಕಾರಿ ಕೆ.ವಿ.ಉಮೇಶ್, ಹೆಬ್ಬಾಲೆ ಹೋಬಳಿ ಕ.ಸಾ.ಪ. ಅಧ್ಯಕ್ಷ ಎಂ.ಎನ್.ಮೂರ್ತಿ, ಬೇಬಿ ಮತ್ತು ಅವರ ಪತಿ ಪ್ರವೀಣ್ ಸೂಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT