ಭಾನುವಾರ, ಜೂನ್ 26, 2022
29 °C
ಧರೆಗುರುಳಿದ ಮರಗಳು, ವಿದ್ಯುತ್‌ ವ್ಯತ್ಯಯ; ಕೃಷಿ ಚಟುವಟಿಕೆ ಬಿರುಸು

ಕೊಡಗು: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿಯಿತು.

ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಬೆಳಿಗ್ಗೆ 11ರ ಬಳಿಕ ತುಂತುರು ಮಳೆ ಆರಂಭಗೊಂಡಿತು. ಬಳಿಕ ನಡುನಡುವೆ ಬಿಡುವು ನೀಡುತ್ತಾ ಸಾಧಾರಣ ಪ್ರಮಾಣದಲ್ಲಿ ಮಳೆ ಮುಂದುವರಿಯಿತು.

ಪಟ್ಟಣ ಮಾತ್ರವಲ್ಲದೆ ಸಮೀಪದ ಆರ್ಜಿ, ಬೇಟೋಳಿ, ರಾಮನಗರ, ಹೆಗ್ಗಳ, ಮಾಕುಟ್ಟ, ಬಿಟ್ಟಂಗಾಲ, ಕುಕ್ಲೂರು, ಅಂಬಟ್ಟಿ, ಬಾಳುಗೋಡು ಗ್ರಾಮ ವ್ಯಾಪ್ತಿಯಲ್ಲು ಮಳೆ ಸುರಿದಿದೆ.

ರಸ್ತೆಗೆ ಬಿದ್ದ ಮರ
ಸಿದ್ದಾಪುರ:
ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗಿದೆ.

ಗಾಳಿಯಿಂದಾಗಿ ಕೆಲವೆಡೆ ಮರಗಳು‌ ಬಿದ್ದಿದ್ದು, ವಿದ್ಯುತ್ ಸ್ಥಗಿತಗೊಂಡಿದೆ. ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

ಬಿರುಸಿನ ಮಳೆ
ಸುಂಟಿಕೊಪ್ಪ:
ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆಯವರೆಗೂ ಮಳೆ ಸುರಿಯಲಾರಂಭಿಸಿತು.

ಬೆಳಿಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣವಿತ್ತು, ದಿಢೀರನೇ 11 ಗಂಟೆ ಸಮಯದಲ್ಲಿ ಗುಡುಗು, ಸಿಡಿಲು ಹಾಗೂ ಗಾಳಿ ಸಹಿತ ಮಳೆ ಸುರಿಯಿತು.

ಗಾಳಿ ಮಳೆಗೆ ಹೋಬಳಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಸಂಜೆಯ ವೇಳೆಗೆ ಮಳೆ ಇಳಿಮುಖಗೊಂಡರೂ ಶೀತಗಾಳಿಯು ಬೀಸುತ್ತಿತ್ತು.

ಕೊಡಗರಹಳ್ಳಿ, ಕಾನ್‌ಬೈಲ್, ನಾಕೂರು, ಕೆದಕಲ್, ಹರದೂರು, ಕಂಬಿಬಾಣೆ, ಮತ್ತಿಕಾಡು, ಭೂತನಕಾಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಗೋಣಿಕೊಪ್ಪಲು ವರದಿ

ಗೋಣಿಕೊಪ್ಪಲು: ಪಟ್ಟಣ ಸೇರಿದಂತೆ ಹಲವೆಡೆ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.

ಒಂದು ಗಂಟೆಗಳ ಕಾಲ ರಭಸವಾಗಿ ಸುರಿದ ಮಳೆಗೆ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.

ಗೋಣಿಕೊಪ್ಪಲು, ಮಾಯಮುಡಿ, ಪೊನ್ನಪ್ಪಸಂತೆ, ಬಾಳೆಲೆ, ಕುಂದ, ಪೊನ್ನಂಪೇಟೆ, ಕಿರುಗೂರು, ನಲ್ಲೂರು, ತಿತಿಮತಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು.

ಬಳಿಕ ಸಂಜೆವರೆಗೂ ದಟ್ಟ ಮೋಡ ಕವಿದು ತುಂತುರು ಮಳೆ ಬೀಳತೊಡಗಿತು. ಶ್ರೀಮಂಗಲ, ಇರ್ಪು, ಕುಟ್ಟ ಭಾಗಕ್ಕೂ ಮಧ್ಯಾಹ್ನ ಧಾರಾಕಾರ ಮಳೆ ಬಿದ್ದಿತು. ಅಲ್ಲಿನ ತೊರೆ ತೋಡುಗಳಲ್ಲಿ ಮಳೆ ನಿಂತ ಮೇಲೂ ನೀರು ಉಕ್ಕಿ ಹರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು