ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದ ಸಚಿವ ಭೋಸರಾಜು

‘ಸರಳ ದಸರೆ ಬೇಡ; ಹಿಂದಿನ ವರ್ಷದಂತೆಯೇ ಇರಲಿ’: ದಸರಾ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲ ಒತ್ತಾಯ
Published 26 ಸೆಪ್ಟೆಂಬರ್ 2023, 6:25 IST
Last Updated 26 ಸೆಪ್ಟೆಂಬರ್ 2023, 6:25 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಡಿಕೇರಿ: ‘ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಎಂದಿನಂತೆ ಸಂಪ್ರದಾಯಬದ್ಧವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ತೊಂದರೆಯಾಗದಂತೆ ಹಣ ಬಿಡುಗಡೆ ಮಾಡಿಸಿಕೊಡುವೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿರುವೆ’ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು

ಇಲ್ಲಿ ಸೋಮವಾರ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಕುರಿತು ಪ್ರತ್ಯೇಕವಾಗಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

‘ಈಗಾಗಲೇ ಸರ್ಕಾರ ಬಜೆಟ್‌ನಲ್ಲಿ ದಸರಾಗೆ ಘೋಷಿಸಿರುವ ಅನುದಾನವನ್ನು ಕೊಡಿಸಿಕೊಡಲು ಪ್ರಯತ್ನಿಸುವೆ. ಜತೆಗೆ, ದಸರೆಗೂ ಮುನ್ನವೇ ಅನುದಾನ ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸುವೆ’ ಎಂದರು.

ಮಡಿಕೇರಿ ನಗರ ಮತ್ತು ಗೋಣಿಕೊಪ್ಪಲು ಪಟ್ಟಣಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರಸಭೆ ಪೌರಾಯುಕ್ತರಿಗೆ ಹಣ ಬಿಡುಗಡೆ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾವನ್ನು ಸಾಂಪ್ರದಾಯಿಕ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು’ ಎಂದೂ ಸ್ಪಷ್ಟಪಡಿಸಿದರು.

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸಂಪ್ರದಾಯದಂತೆ ಯಾವುದೇ ರೀತಿ ವ್ಯತ್ಯಾಸವಾಗದಂತೆ ದಸರಾ ಆಚರಿಸುವತ್ತ ದಸರಾ ಸಮಿತಿಯವರು ಗಮನಹರಿಸಬೇಕು. ದಸರಾ ಸಮಿತಿಯ ಪದಾಧಿಕಾರಿಗಳ ಎಲ್ಲರ ಸಲಹೆಯನ್ನು ಪರಿಗಣಿಸಿ, ಅದರಂತೆ ದಸರಾವನ್ನು ಮುಂದುವರಿಸಿಕೊಂಡು ಹೋಗಬೇಕು. ಸಣ್ಣ ಪುಟ್ಟ ಅಹಿತಕರ ಘಟನೆಗಳೂ ನಡೆಯದಂತೆ ಎಚ್ಚರ ವಹಿಸಬೇಕು ಎಂದೂ ಸೂಚನೆ ನೀಡಿದರು.

‘ಕಪ್ಪುಚುಕ್ಕೆ ಬಾರದ ಹಾಗೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಇದು ನಮ್ಮೂರು, ನಮ್ಮ ದಸರಾ ಎಂಬ ಭಾವನೆ ಎಲ್ಲರಲ್ಲಿರಬೇಕು’ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಬಹುತೇಕ ಮುಖಂಡರು, ‘ದಸರಾ ಆಚರಣೆ ಸರಳವಾಗುವುದು ಬೇಡ, ಹಿಂದಿನ ವರ್ಷದಂತೆಯೇ ಯಾವುದಕ್ಕೂ ಚ್ಯುತಿ ಬಾರದ ಹಾಗೆ ಆಚರಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ’ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ಪ್ರಕಾಶ್ ಆಚಾರ್ಯ ಅವರು, ‘ಹಿಂದಿನ ವರ್ಷದಂತೆ ದಸರಾ ಆಚರಣೆಗೆ ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಕಳೆದ ವರ್ಷದ ಅನುದಾನವೇ ₹ 25 ಲಕ್ಷ ಬಾಕಿ ಉಳಿದಿದೆ. ಅದರೊಂದಿಗೆ ಹೆಚ್ಚುವರಿ ಅನುದಾನ ಕೊಡಿಸಿಕೊಡಿ’ ಎಂದು ಒತ್ತಾಯಿಸಿದರು.

ವಿಜೃಂಭಣೆಯ ದಸರಾ ಆಚರಿಸುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿಕಂಡಿರುವವರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಮಾತನಾಡಿ, ‘ರಾತ್ರಿ ವೇಳೆ 10 ಗಂಟೆ ನಂತರ ಡಿ.ಜೆ. ಸ್ಥಗಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಇದನ್ನು ಸರಳೀಕರಣ ಮಾಡಬೇಕು. ಕಳೆದ ಬಾರಿಯ ₹ 25 ಲಕ್ಷ ಹಣವನ್ನು ಬಿಡುಗಡೆ ಮಾಡಬೇಕು. ಈ ಬಾರಿಯ ಮಡಿಕೇರಿ ದಸರಾಗೆ ಖಚಿತವಾಗಿ ಬಜೆಟ್‍ನಲ್ಲಿ ಇಂತಿಷ್ಟು ಹಣ ಎಂದು ಪ್ರಕಟಿಸಬೇಕು. ಜೊತೆಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಿಡುಗಡೆಯಾಗುವ ಹಣವನ್ನು ನೇರವಾಗಿ ನಗರಸಭೆ ಆಯುಕ್ತರಿಗೆ ಬಿಡುಗಡೆ ಮಾಡಬೇಕು’ ಎಂದು ಸಲಹೆ ನೀಡಿದರು.

ಮಡಿಕೇರಿ ದಸರಾ ಸಮಿತಿ ಖಜಾಂಜಿ ಅರುಣ್ ಶೆಟ್ಟಿ ಮಾತನಾಡಿ, ‘ವಿದ್ಯುತ್ ಕಂಬ ಶಿಥಿಲಾವಸ್ಥೆಯಲ್ಲಿದೆ. ಹೊಸ ಕಂಬ ಅಳವಡಿಸಬೇಕು’ ಎಂದು ತಿಳಿಸಿದರು.

ಮಡಿಕೇರಿ ದಸರಾ ಸಮಿತಿ ಗೌರವ ಅಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ‘ದಸರೆಗೂ ಮುನ್ನವೇ ಹಣ ಬಿಡುಗಡೆ ಮಾಡಿಸಿಕೊಡಬೇಕು. ದಶಮಂಟಪಗಳು ಸಂಚರಿಸುವ ದಾರಿಯಲ್ಲಿ ಮರದ ರೆಂಬೆ ಕತ್ತರಿಸಬೇಕು. ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಾಹನಗಳಿರಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಪದಾಧಿಕಾರಿ ರಾಕೇಶ್ ಮಾತನಾಡಿ, ‘ಬರದ ಛಾಯೆ ಇದೆ. ಆದರೆ ವ್ಯಾಪಾರಕ್ಕೆ ಅನುಕೂಲ ಆಗುವುದಕ್ಕಾಗಿ ದಸರಾಕ್ಕೆ ಆದ್ಯತೆ ಕೊಡಬೇಕು’ ಎಂದರು.

ಮುಖಂಡ ಚುಮ್ಮಿದೇವಯ್ಯ ಮಾತನಾಡಿ, ‘ಜನರಲ್ ತಿಮ್ಮಯ್ಯ ಪ್ರತಿಮೆ ಮರುಸ್ಥಾಪನೆಯನ್ನು ಅದೇ ಜಾಗದಲ್ಲಿ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾತ್ರಿ ವೇಳೆ ಕರ್ಕಶ ಶಬ್ದಧ ಮಾಡುವ ಪೀಪೀ ನಿಷೇಧ ಮಾಡಬೇಕು’ ಎಂದು ದಸರಾ ಸಮಿತಿಯ ಸದಸ್ಯರೊಬ್ಬರು ಒತ್ತಾಯಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ದಸರಾ ಸಮಿತಿ ಪದಾಧಿಕಾರಿಗಳು  ಇದ್ದರು.

ಮಡಿಕೇರಿ ದಸರಾ ಕುರಿತು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿದರು. ಶಾಸಕ ಡಾ.ಮಂತರ್‌ಗೌಡ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಜಿಲ್ಲಾಧಿಕಾರಿ ವೆಂಕಟ್ ರಾಜಾ ಇದ್ದಾರೆ
ಮಡಿಕೇರಿ ದಸರಾ ಕುರಿತು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿದರು. ಶಾಸಕ ಡಾ.ಮಂತರ್‌ಗೌಡ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಜಿಲ್ಲಾಧಿಕಾರಿ ವೆಂಕಟ್ ರಾಜಾ ಇದ್ದಾರೆ
ಮಡಿಕೇರಿಯಲ್ಲಿ ಸೋಮವಾರ ನಡೆದ ಗೋಣಿಕೊಪ್ಪಲು ದಸರೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ದಸರಾ ಸಮಿತಿಯ ಪದಾಧಕಾರಿಗಳು ಭಾಗವಹಿಸಿದ್ದರು
ಮಡಿಕೇರಿಯಲ್ಲಿ ಸೋಮವಾರ ನಡೆದ ಗೋಣಿಕೊಪ್ಪಲು ದಸರೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ದಸರಾ ಸಮಿತಿಯ ಪದಾಧಕಾರಿಗಳು ಭಾಗವಹಿಸಿದ್ದರು

‘ರಸ್ತೆ ಸರಿಪಡಿಸದಿದ್ದರೆ ಅವಮಾನ’

ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಮಡಿಕೇರಿ ನಗರದ ರಸ್ತೆಗಳನ್ನು ಸರಿಪಡಿಸದೇ ಹೋದರೆ ನಿಜಕ್ಕೂ ಅವಮಾನವಾಗುತ್ತದೆ’ ಎಂದರು. ದಸರೆಗಾಗಿ ಮಾತ್ರವೇ ಗುಂಡಿ ಮುಚ್ಚದೇ ಸಾರ್ವಜನಿಕರಿಗಾಗಿ ರಸ್ತೆ ದುರಸ್ತಿಪಡಿಸಬೇಕು. ಬೀದಿದೀಪಗಳನ್ನು ವ್ಯವಸ್ಥಿತವಾಗಿ ಅಳವಡಿಸಬೇಕು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಹೇಳಿದರು.

‘ಆದಿವಾಸಿಗಳ ಸಾಂಸ್ಕೃತಿಕ ಕಾರ್ಯಕ್ರಮವ ಪ್ರೋತ್ಸಾಹಿಸಿ’

ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ‘ಗೋಣಿಕೊಪ್ಪಲು ದಸರೆಯಲ್ಲಿ ಸ್ಥಳೀಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆದಿವಾಸಿಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು’ ಎಂದರು. ಕಳೆದ ಬಾರಿಯಂತೆ ದಸರೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ರಸ್ತೆಗಳನ್ನು ಸರಿಪಡಿಸಬೇಕು ಎಂದರು.

ತಮಿಳುನಾಡಿನಿಂದ ಡಿ.ಜೆ ತರಿಸುವುದು ಸರಿಯೇ?

ಗೋಣಿಕೊಪ್ಪಲು ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ‘ಇಲ್ಲಿನ ದಸರೆಯನ್ನು ಇಲ್ಲಿನ ಸಂಪ್ರದಾಯಕ್ಕೆ ಅನುಗುಣವಾಗಿ ಆಚರಿಸಬೇಕು. ಅದನ್ನು ಬಿಟ್ಟು ತಮಿಳುನಾಡಿನಿಂದ ಡಿ.ಜೆ ತರಿಸಿ ಆಚರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಎಲ್ಲರೂ ಆಲೋಚಿಸಬೇಕು’ ಎಂದು ಹೇಳಿದರು. ಈ ನಿಟ್ಟಿನಲ್ಲಿ ಕೊಡಗಿನ ಸಾಂಪ್ರದಾಯಿಕತೆ ಇಲ್ಲಿನ ಪರಿಶುದ್ಧ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಬೇಕು ಎಂದರು. ಗೋಣಿಕೊಪ್ಪಲು ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ ‘ಹಲವು ವರ್ಷಗಳಿಂದ ಗೋಣಿಕೊಪ್ಪಲು ದಸರಾವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು. ಗೋಣಿಕೊಪ್ಪ ದಸರಾಗೆ 25 ಸಾವಿರ ಜನರು ವಿಜಯದಶಮಿಯಂದು ಪಾಲ್ಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT