ಗುರುವಾರ , ಜೂನ್ 24, 2021
24 °C
ವಿರಾಜಪೇಟೆ ಪಟ್ಟಣದಲ್ಲಿ ವಾಹನ ಪ್ರವೇಶಕ್ಕೆ ತಡೆ: ಸಾರ್ವಜನಿಕರ ಅಸಮಾಧಾನ

ವಿರಾಜಪೇಟೆ: ಸಾಮಗ್ರಿ ಹೊತ್ತೊಯ್ಯಲು ಜನ ಹೈರಾಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಅಗತ್ಯ ವಸ್ತುಗಳನ್ನು ಖರೀದಿಸಿದರು. ಆದರೆ, ಹೊತ್ತುಕೊಂಡು ಹೋಗಲು ಬಹುತೇಕ ಕಷ್ಟಪಡುತ್ತಿದ್ದರು.

ಪಟ್ಟಣಕ್ಕೆ ನಾಲ್ಕು ದಿಕ್ಕುಗಳಲ್ಲಿ ವಾಹನಗಳ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದರಿಂದ ಪಟ್ಟಣದ ಒಳಗೆ ವಾಹನ ಸಂಚಾರ ಬಹುತೇಕ ಇರಲಿಲ್ಲ. ಇದರಿಂದ ರಸ್ತೆಗಳು ಖಾಲಿ ಖಾಲಿ ಜನದಟ್ಟಣೆಯೂ ವಿರಳವಾಗಿತ್ತು. ಅಗತ್ಯವಸ್ತು ಕೊಂಡುಕೊಳ್ಳಲು ನೂಕುನುಗ್ಗಲು ಉಂಟಾಗಬಹುದೆಂಬ ಆತಂಕದಿಂದ ಸೋಮವಾರ ಬೆಳಿಗ್ಗೆ 6ರ ಸುಮಾರಿಗೆ ಅಂಗಡಿಗಳ ಬಳಿ ಸಾಕಷ್ಟು ಗ್ರಾಹಕರು ಸೇರಿರುವುದು ಕಂಡುಬಂತು. 8 ಗಂಟೆಯ ಬಳಿಕ ಪಟ್ಟಣದಲ್ಲಿ ಜನದಟ್ಟಣೆ ಕಡಿಮೆಯಾಗುತ್ತಾ ಬಂತು. ಸಾರ್ವಜನಿಕರು ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗಲು ಸಾಧ್ಯ ವಾಗದೆ ಪರಿತಪಿಸುತ್ತಿದ್ದರು.

ವಾಹನವನ್ನು ಪಟ್ಟಣದ ಹೊರಭಾಗದಲ್ಲಿ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಕನಿಷ್ಠ ಆಟೊ ರಿಕ್ಷಾ ಸಂಚಾರವು ಇಲ್ಲ. ಇದೀಗ ಮನೆಗೆ ಅಕ್ಕಿ, ತರಕಾರಿ ಸೇರಿದಂತೆ ಸುಮಾರು 25 ರಿಂದ 30 ಕೆ.ಜಿ ಯಷ್ಟು  ಸಾಮಗ್ರಿಗಳನ್ನು ಹೇಗೆ ಸಾಗಿಸಬೇಕೆಂದು ತಿಳಿಯದಾಗಿದೆ ಎಂದು ಸಾರ್ವಜನಿಕರು ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ತರಕಾರಿ ವರ್ತಕ ಶ್ರೀನಿವಾಸ್ ಮಾತನಾಡಿ, ಪಟ್ಟಣಕ್ಕೆ ವಾಹನ ಪ್ರವೇಶಕ್ಕೆ ಅವಕಾಶ ನೀಡದ್ದರಿಂದ ಇಂದು ಗ್ರಾಹಕರ ಸಂಖ್ಯೆ ತೀರಾ ವಿರಳವಾಗಿತ್ತು. ತರಕಾರಿಗಳು ಮಾರಾಟ ವಾಗದೆ ನಷ್ಟ ಅನುಭವಿ ಸುವಂತಾಗಿದೆ ಎಂದರು. ಬಹುತೇಕ ವ್ಯಾಪಾರಿಗಳ ಪ್ರತಿಕ್ರಿಯೆಯೂ ಇದೇ ರೀತಿ ಇತ್ತು

ಕಾರೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯೆ ಮೇವಡ ವಸ್ಮಾ ಅವರು ಮಾತನಾಡಿ, ‘ಪಟ್ಟಣದೊಳಗೆ ಪೆಟ್ರೋಲ್ ಬಂಕ್‌ಗಳಿದ್ದು ಪೊಲೀಸರು ಪಟ್ಟಣ ಪ್ರವೇಶಕ್ಕೆ ಅನುಮತಿ ನೀಡದ್ದರಿಂದ ವಾಹನಗಳಿಗೆ ಪೆಟ್ರೋಲ್ ತುಂಬಿಸುವುದು ಅಸಾಧ್ಯವಾಗಿದೆ. ಪೊಲೀಸರ ಕ್ರಮ ಅವೈಜ್ಞಾನಿಕವಾಗಿದೆ’ ಎಂದರು.

ಬ್ಯಾಂಕ್‌ಗಳ ಮುಂಭಾಗದಲ್ಲಿ ಜನಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಕೆಲವೆಡೆ ಎಟಿಎಂ ಮುಂಭಾಗ ಹಣ ಪಡೆಯಲು ಸಾಕಷ್ಟು ಜನ ಸರತಿ ಸಾಲಿನಲ್ಲಿ ನಿಂತಿದ್ದರು.

ದ್ವಿಚಕ್ರ ವಾಹನ ಹಾಗೂ ಆಟೊರಿಕ್ಷಾ ಸಂಚಾರಕ್ಕಾದರೂ ಅವಕಾಶ ನೀಡಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಬಹುತೇಕ ಸಾರ್ವಜನಿಕರು ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು