ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವರ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ

ಸಮಾಜದ ಸಭೆಯಲ್ಲಿ ಕಾಳಿಮಾಡ ಮೋಟಯ್ಯ ಅಭಿಮತ
Last Updated 20 ಜೂನ್ 2022, 3:16 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಕೊಡವ ಸಮಾಜಗಳು ಕಲ್ಯಾಣ ಮಂಟಪಕ್ಕೆ ಸೀಮಿತವಾಗದೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಕ್ರಿಯಾಯೋಜನೆ ರೂಪಿಸ ಲಾಗುತ್ತಿದೆ’ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಕೊಡವ ಜನಾಂಗದ ಸರ್ವತೋಮುಖ ಏಳಿಗೆಗಾಗಿ 3 ವರ್ಷದ ಅವಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಕೊಡವಾಮೆಯನ್ನು ಬೆಳೆಸಿ ಪೋಷಿಸುವುದು, ಕೊಡವ ಜನಾಂಗದ ಸಂಸ್ಕೃತಿ, ಪರಂಪರೆ, ಹಬ್ಬಗಳ ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.

ಕೊಡವ ಪುಸ್ತಕ ಲೋಕ ಸ್ಥಾಪನೆ: ‘ಕೊಡವ ಭಾಷೆಯ ಪುಸ್ತಕಗಳನ್ನು ಸಂಗ್ರಹಿಸಿ ‘ಕೊಡವ ಪುಸ್ತಕ ಲೋಕ’ ಎಂಬ ಗ್ರಂಥಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೊಡವ ಭಾಷೆಯಲ್ಲಿ ಪ್ರಕಟವಾಗಿರುವ ಮೊದಲ ಪುಸ್ತಕದಿಂದ ಇಂದಿನವರೆಗೆ ಪ್ರಕಟವಾದ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಲಾಗುವುದು. ಈ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ತಂದ್– ಬೆಂದ್ ವೇದಿಕೆ: ‘ಕೊಡವ ಜನಾಂಗದಲ್ಲಿ ವಧು-ವರ ಅನ್ವೇಷಣೆಗೆ ತಂದ್– ಬೆಂದ್ ವೇದಿಕೆಯನ್ನು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವ ದೊಂದಿಗೆ ಮತ್ತೆ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ. ಇದರ ಜತೆಗೆ ಕೊಡವ ಸಮಾಜದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

‘ಜೂನ್‌ 21ರಂದು ಅಂತರ ರಾಷ್ಟ್ರೀಯ ಯೋಗ ದಿನವನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಚರಿಸಲಾಗುತ್ತಿದೆ. ಇದರಲ್ಲಿ ಕಾನೂರು– ಕೋತೂರು ಮಹಿಳಾ ಸಮಾಜ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮತ್ತು ಸ್ಥಳೀಯ ಸಂಸ್ಥೆ ಕೈಜೋಡಿಸಿವೆ. ಅಂತರರಾಷ್ಟ್ರೀಯ ಯೋಗಪಟು ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್ ಕಾರ್ಯಕ್ರಮ ನಡೆಸಿ ಕೊಡಲಿದ್ದು, ಈಗಾಗಲೇ 80 ಯೋಗಪಟುಗಳು ನೋಂದಾಯಿಸಿ ಕೊಂಡಿದ್ದಾರೆ’ ಎಂದು ಹೇಳಿದರು.

ಸಮಾಜ ಉಪಾಧ್ಯಕ್ಷೆ ಚಿರಿಯ ಪಂಡ ಇಮ್ಮಿ ಉತ್ತಪ್ಪ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಸಹಕಾರ್ಯದರ್ಶಿ ಆಲೇಮಾಡ ಸುಧೀರ್, ಕಾಯಂ ಆಹ್ವಾನಿತರಾದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ನಿರ್ದೇಶಕರಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಚೆಪ್ಪುಡೀರ ರಾಕೇಶ್ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ ಹಾಜರಿದ್ದರು.

‘ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಒತ್ತು’

‘ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾದ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. 10ನೇ ತರಗತಿಯಲ್ಲಿ ಸತತವಾಗಿ ಶೇ 100ರಷ್ಟು ಫಲಿತಾಂಶ ಪಡೆಯುತ್ತಿರುವ ವಿದ್ಯಾಲಯದಲ್ಲಿ ಇನ್ನಷ್ಟು ಗುಣಮಟ್ಟದ ಮತ್ತು ಸ್ಪರ್ಧಾತ್ಮಕ ಶಿಕ್ಷಣವನ್ನು ನೀಡಲು ಕಾರ್ಯಯೋಜನೆ ಕೈಗೆತ್ತಿಕೊಳ್ಳಲಾಗುವುದು. ಚಿಕ್ಕಮುಂಡೂರು ಗ್ರಾಮದಲ್ಲಿರುವ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಜಾಗದಲ್ಲಿ ಶಿಕ್ಷಣ ಸಂಸ್ಥೆಯಾಗಿ ಮುಂದುವರೆಸುವ ಅಥವಾ ಕೊಡವ ಜನಾಂಗದ ಹಿತದೃಷ್ಟಿಗೆ ಪೂರಕವಾದ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ’ ಎಂದು ಮೋಟಯ್ಯ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT