ಮಂಗಳವಾರ, ನವೆಂಬರ್ 19, 2019
28 °C

ನೆರೆ ಸಂತ್ರಸ್ತರಿಗೆ ಸೂರು ಒದಗಿಸಿ: ಸಭಾಪತಿ ಕೆ.ಪ್ರತಾಪ್ ಚಂದ್ರಶೆಟ್ಟಿ ಸೂಚನೆ

Published:
Updated:
Prajavani

ಸಿದ್ದಾಪುರ: ಪ್ರವಾಹದಲ್ಲಿ ಮನೆ ಕಳೆದು ಕೊಂಡ ಕುಟುಂಬಗಳಿಗೆ ಶೀಘ್ರದಲ್ಲಿ ಮನೆ ಒದಗಿಸಿಕೊಡುವಂತೆ ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪ್ ಚಂದ್ರಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆಲ್ಯಹುದಿಕೇರಿ ಪರಿಹಾರ ಕೇಂದ್ರ, ಬೆಟ್ಟದಕಾಡು, ಕರಡಿಗೋಡು ಪ್ರವಾಹಪೀಡಿತ ಪ್ರದೇಶಕ್ಕೆ ಪರಿಶೀಲನೆ ನಡೆಸಿದರು. ಈ ಸಂದರ್ಭ ನೆಲ್ಯಹುದಿ ಕೇರಿ ಹಾಗೂ ಕರಡಿಗೋಡು ವ್ಯಾಪ್ತಿಯ ಸಂತ್ರಸ್ತರು ಪರಿಹಾರ ವಿಳಂಬ ವಾಗುತ್ತಿರುವ ಬಗ್ಗೆ ಗಮನ ಸೆಳೆದರು. ನದಿ ದಡದ ನಿವಾಸಿಗಳಿಗೆ ಜಿಲ್ಲಾಡಳಿತ ಮೂರು ತಿಂಗಳಲ್ಲಿ ಶಾಶ್ವತ ಸೂರು ಒದಗಿಸಿಕೊಡುವ ಬಗ್ಗೆ ಭರವಸೆಯನ್ನು ನೀಡಿದ್ದು, ಈವರೆಗೂ ಶಾಶ್ವತ ಸೂರು ಲಭಿಸಿಲ್ಲ ಎಂದು ಅಳಲನ್ನು ತೋಡಿಕೊಂಡರು.

ಕರಡಿಗೋಡುವಿನಲ್ಲಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಪ್ರತಾಪ್ ಚಂದ್ರ ಶೆಟ್ಟಿ, ಸ್ಥಳದಲ್ಲಿದ್ದ ವಿರಾಜಪೇಟೆ ತಹಶೀಲ್ದಾರ್‌ ಮಹೇಶ್ ಅವರಿಂದ ಮಾಹಿತಿ ಪಡೆದರು. ಪರಿಹಾರ ವಿಳಂಬ ವಾಗುತ್ತಿರುವ ಬಗ್ಗೆ ಪ್ರಶ್ನಿಸಿದ ಅವರು, ಸಂತ್ರಸ್ತರಿಗೆ ಶೀಘ್ರದಲ್ಲೇ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಸೂಚಿಸಿದರು.

ತಹಶೀಲ್ದಾರ್ ಮಹೇಶ್, ‘ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ. ಕೆಲವು ಜಾಗಗಳ ಗಡಿಯನ್ನು ಗುರುತಿಸ ಲಾಗಿದ್ದು, ಜಾಗದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ’ ಎಂದರು.

ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು. ‘ಕಳೆದ ಮೂರು ತಿಂಗಳಿನಿಂದ ನಾವು ಪರಿಹಾರ ಕೇಂದ್ರದಲ್ಲಿದ್ದು, ಶಾಶ್ವತ ಸೂರಿಗಾಗಿ ದಿನ ದೂಡುತ್ತಿದ್ದೇವೆ. ಕೂಡಲೇ ಶಾಶ್ವತ ಸೂರು ಒದಗಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಸಭಾಪತಿ, ‘ವಿಧಾನ ಪರಿಷತ್ತಿನಲ್ಲಿ ಜಿಲ್ಲೆಯ ನೆರೆ ಪರಿಹಾರದ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲೆ ಪರಿಸ್ಥಿತಿಯನ್ನು ತಿಳಿಯಲು ಖುದ್ದು ಭೇಟಿ ನೀಡಿದ್ದೇನೆ’ ಎಂದರು.

ಸಂತ್ರಸ್ತ ಕೃಷ್ಣ ಮಾತನಾಡಿ, ‘ಸಂತ್ರಸ್ತ ಕುಟುಂಬಗಳಿಗೆ ಬಾಡಿಗೆ ಹಣವನ್ನು ಸರ್ಕಾರ ನೀಡುವುದಾಗಿ ಘೋಷಿಸಿ, ಮೂರು ತಿಂಗಳು ಕಳೆದಿವೆ. ಈವರೆಗೂ ಬಾಡಿಗೆ ಹಣವನ್ನು ನೀಡಿಲ್ಲ. ನದಿ ದಡದ ನಿವಾಸಿಗಳು ವಾಸಿಸಲು ಮನೆ ಇಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ತ್ವರಿತವಾಗಿ ಶಾಶ್ವತ ಸೂರು ಒದಗಿಸಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜೆ, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್, ಪಿಡಿಒ ಅನಿಲ್ ಕುಮಾರ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್ ಹರೀಶ್, ಗ್ರಾಮಲೆಕ್ಕಿಗ ಓಮಪ್ಪ ಬಣಕಾರ್, ಅನೀಶ್, ಪಿಡಿಒ ವಿಶ್ವನಾಥ್, ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್. ಭರತ್, ಯಮುನಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)