ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಬರೆಯಲಿದ್ದಾರೆ 5,560 ಪಿಯು ವಿದ್ಯಾರ್ಥಿಗಳು

ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಅಧಿಕ!
Last Updated 8 ಮಾರ್ಚ್ 2023, 16:27 IST
ಅಕ್ಷರ ಗಾತ್ರ

ಕೊಡಗು ಜಿಲ್ಲೆಯ ಪಿಯು ಪರೀಕ್ಷೆಯ ಚಿತ್ರಣ

5,560; ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

4,831; ಹೊಸ ವಿದ್ಯಾರ್ಥಿಗಳು

396;ಪುನರಾವರ್ತಿತ ವಿದ್ಯಾರ್ಥಿಗಳು

333;ಖಾಸಗಿ ವಿದ್ಯಾರ್ಥಿಗಳು

19;ಒಟ್ಟು ಪರೀಕ್ಷಾ ಕೇಂದ್ರಗಳು

07;ಪ್ರಶ್ನೆಪತ್ರಿಕೆ ರವಾನೆಗೆ ಮಾರ್ಗಾಧಿಕಾರಿ ತಂಡ

05;ಜಾಗೃತ ದಳ

***

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಾರ್ಚ್ 9ರಿಂದ 29ರವವರೆಗೆ ನಡೆಯಲಿರುವ ಪಿಯು ಪರೀಕ್ಷೆಯನ್ನು 5,560 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಒಟ್ಟು 19 ಕೇಂದ್ರಗಳಲ್ಲಿ ಪರೀಕ್ಷೆಗಾಗಿ ಸಕಲ ಸಿದ್ಧತೆಗಳೂ ನಡೆದಿವೆ.

ಮಡಿಕೇರಿ ತಾಲ್ಲೂಕಿನಲ್ಲಿ 5, ವಿರಾಜಪೇಟೆಯಲ್ಲಿ 2, ಪೊನ್ನಂಪೇಟೆ ತಾಲ್ಲೂಕಿನಲ್ಲಿ 4, ಕುಶಾಲನಗರದಲ್ಲಿ 5, ಸೋಮವಾರಪೇಟೆಯ 3 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಈ ಬಾರಿಯ ಹೊಸ ವಿದ್ಯಾರ್ಥಿಗಳಲ್ಲಿ ಹುಡುಗಿಯರ ಸಂಖ್ಯೆಯೇ ಅಧಿಕವಿದೆ. 4,831 ಮಂದಿ ಹೊಸ ವಿದ್ಯಾರ್ಥಿಗಳ ಪೈಕಿ 2,526 ಹುಡುಗಿಯರೇ ಇದ್ದು, 2,305 ಹುಡುಗರಿದ್ದಾರೆ.

ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳು ಬಿಗಿ ಬಂದೋಬಸ್ತ್‌ನಲ್ಲಿ ಪ್ರತಿ ಕೇಂದ್ರಕ್ಕೂ ರವಾನೆಯಾಗಲಿವೆ. ತಹಶೀಲ್ದಾರ್ ನೇತೃತ್ವದಲ್ಲಿ ಒಟ್ಟು 7 ಮಾರ್ಗಾಧಿಕಾರಿ ತಂಡವನ್ನು ರಚಿಸಲಾಗಿದೆ. ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್‌ ವ್ಯವಸ್ಥೆಯ ಜತೆಗೆ ಶಸ್ತ್ರಧಾರಿ ಪೊಲೀಸ್‌ ರಕ್ಷಣೆಯನ್ನು ಒದಗಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಪ್ರತಿ ತಾಲ್ಲೂಕಿಗೂ ಒಂದೊಂದು ಜಾಗೃತ ದಳವನ್ನು ರಚಿಸಲಾಗಿದೆ. ಹೊರ ಜಿಲ್ಲೆಯ ಕಾಲೇಜುಗಳ ಒಬ್ಬ ಪ್ರಾಂಶುಪಾಲರು ಹಾಗೂ ಮೂವರು ಉಪನ್ಯಾಸಕರು ಇರುವ ಈ ತಂಡವು ಆಯಾ ತಾಲ್ಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ನಿಗಾವಹಿಸಲಿದೆ.

ಪ್ರತಿ ಕೇಂದ್ರಕ್ಕೆ ಇಬ್ಬರು ಪೊಲೀಸರಿದ್ದು ಅವರಲ್ಲಿ ಒಬ್ಬರು ಮಹಿಳಾ ಪೊಲೀಸರೂ ಇರಲಿದ್ದಾರೆ. ಇವರು ಪರೀಕ್ಷಾ ಕೇಂದ್ರದ ರಕ್ಷಣೆಯ ಹೊಣೆ ಹೊತ್ತಿದ್ದಾರೆ. ಇವರೊಂದಿಗೆ ಒಬ್ಬರು ಸ್ಟಾಫ್‌ ನರ್ಸ್‌ ಸಹ ಇದ್ದು, ವಿದ್ಯಾರ್ಥಿಗಳಿಗೆ ಉಂಟಾಗುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿನ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ. ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರ ವಿತರಿಸಲಾಗಿದೆ. ಸದ್ಯ, ಗುರುವಾರ ಕನ್ನಡ ವಿಷಯದ ಪರೀಕ್ಷೆ ನಡೆಯಲಿದೆ.

ನಾಪೋಕ್ಲು, ಪೊನ್ನಂಪೇಟೆ, ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ, ಕುಶಾಲನಗರ, ನೆಲ್ಲಿಹುದಿಕೇರಿ, ಕೂಡಿಗೆ, ಸುಂಟಿಕೊಪ್ಪದ ಸರ್ಕಾರಿ ಪಿಯು ಕಾಲೇಜುಗಳ ಜತೆಗೆ, ಗೋಣಿಕೊಪ್ಪಲಿನ ಕಾವೇರಿ ಪದವಿಪೂರ್ವ ಕಾಲೇಜು, ವಿದ್ಯಾನಿಕೇತನ ಪದವಿಪೂರ್ವ ಕಾಲೇಜು, ಮೂರ್ನಾಡು ಪದವಿಪೂರ್ವ ಕಾಲೇಜು, ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿಪೂರ್ವ ಕಾಲೇಜು, ಶ್ರೀಮಂಗಲ ಪದವಿಪೂರ್ವ ಕಾಲೇಜು, ಶನಿವಾರಸಂತೆ ಪದವಿಪೂರ್ವ ಕಾಲೇಜು, ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜು, ವಿರಾಜಪೇಟೆಯ ಸೆಂಟ್ ಆನ್ಸ್ ಪದವಿಪೂರ್ವ ಕಾಲೇಜು, ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ಪ್ರವೇಶಪತ್ರ ತೋರಿಸಿದರೆ ಉಚಿತ ಬಸ್‌ ಪ್ರಯಾಣ

ಪಿಯು ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರವನ್ನು ಬಸ್‌ ನಿರ್ವಾಹಕರಿಗೆ ತೋರಿಸಿದರೆ ಉಚಿತ ಪ್ರಯಾಣ ಲಭ್ಯವಾಗಲಿದೆ. ಇದರ ಸದುಪಯೋಗವನ್ನು ಪಡೆಯಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪುಟ್ಟರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT