₹85 ಲಕ್ಷ ವೆಚ್ಚದಲ್ಲಿ ಮಾಲಿನ್ಯ ನೀರು ಶುದ್ಧೀಕರಣ ಘಟಕ ನವೀಕರಣ

7

₹85 ಲಕ್ಷ ವೆಚ್ಚದಲ್ಲಿ ಮಾಲಿನ್ಯ ನೀರು ಶುದ್ಧೀಕರಣ ಘಟಕ ನವೀಕರಣ

Published:
Updated:
ಕುಶಾಲನಗರ ಸಮೀಪದ ಕೂಡಿಗೆ ಡೈರಿ ಆವರಣದಲ್ಲಿನ ನೀರು ಶುದ್ಧೀಕರಣ ಘಟಕ

ಕುಶಾಲನಗರ: ರಾಜ್ಯದ ಪ್ರಥಮ ಹಾಲಿನ ಡೈರಿ ಎಂಬ ಖ್ಯಾತಿಯನ್ನು ಹೊಂದಿರುವ ಕೂಡಿಗೆ ಹಾಲಿನ ಡೈರಿಯಲ್ಲಿನ ಮಾಲಿನ್ಯ ನೀರಿನ ಶುದ್ಧೀಕರಣ ಘಟಕದ ನವೀಕರಣಕ್ಕಾಗಿ ₹ 85 ಲಕ್ಷ ಅನುದಾನ ಮಂಜೂರಾಗಿದೆ.

1987ರಲ್ಲಿ ಕೂಡಿಗೆ ಹಾಲಿನ ಡೈರಿ ಹಾಸನದ ಹಾಲು ಒಕ್ಕೂಟದೊಂದಿಗೆ ವಿಲೀನಗೊಂಡು ಸಾಕಷ್ಟು ಪ್ರಗತಿಯನ್ನು ಕಂಡಿದ್ದು, ಹತ್ತು ವರ್ಷಗಳ ಹಿಂದೆ ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರ ವಿಶೇಷ ಪ್ರಯತ್ನದಿಂದ ₹3 ಕೋಟಿಯಲ್ಲಿ ಕೂಡಿಗೆ ಡೈರಿಯನ್ನು ನವೀಕರಿಸಲಾಯಿತು. ಈ ಡೈರಿಯಲ್ಲಿ ಅತ್ಯಾಧುನಿಕ ಶಿಥಲೀಕರಣ ಕೊಠಡಿಯಲ್ಲಿ ಸುಮಾರು 50 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಹಾಲಿನ ಶೇಖರಣೆ, ಸಂಸ್ಕರಣೆ, ಪ್ಯಾಕೆಟ್, ಮಾರಾಟ ವ್ಯವಸ್ಥೆಯೊಂದಿಗೆ ಗುಣಮಟ್ಟದ ಜೊತೆ ಅತ್ಯುತ್ತಮ ಸೇವೆ ನೀಡುತ್ತಿದೆ.

ಕೂಡಿಗೆ ಡೈರಿ ಪ್ರತಿನಿತ್ಯ 52 ಸಾವಿರ ಲೀಟರ್ ಹಾಲು, 25 ಸಾವಿರ ಲೀಟರ್ ಮೊಸರು ಮತ್ತು ಮಜ್ಜಿಗೆ ಸೇರಿದಂತೆ ಇನ್ನಿತರ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ದಿನಕ್ಕೆ ₹15 ಲಕ್ಷದಂತೆ ತಿಂಗಳಿಗೆ ₹4.5 ಕೋಟಿ ಮತ್ತು ವಾರ್ಷಿಕ ಸುಮಾರು ₹ 50 ಕೋಟಿ ವಹಿವಾಟು ನಡೆಸುತ್ತ ಲಾಭದ ಹಾದಿಯಲ್ಲಿದೆ.

ಡೈರಿಯಲ್ಲಿರುವ ಮಾಲಿನ್ಯ ನೀರು ಶುದ್ಧೀಕರಣ ಘಟಕದ ಆಧುನೀಕರಣಕ್ಕೆ ಹಾಸನ ಒಕ್ಕೂಟ ಮುಂದಾಗಿದ್ದು, ₹85 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಪ್ರತಿನಿತ್ಯ 10 ಸಾವಿರ ಲೀಟರ್ ನೀರನ್ನು ಶುದ್ಧೀಕರಣ ಮಾಡುವ ಯೋಜನೆ ಹೊಂದಲಾಗಿದೆ.

ಡೈರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಿ ಒಂದು ಎಕರೆ ಪ್ರದೇಶದಲ್ಲಿ ಮಾಲಿನ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಯೋಜನೆ ರೂಪುಗೊಂಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಮದ್ರಾಸ್‌ನ ನುರಿತ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ.

‘ಮುಂದಿನ ಎರಡು ತಿಂಗಳ ನಂತರ ಕಾಮಗಾರಿ ಪ್ರಾರಂಭಗೊಳ್ಳಲಿದೆ’ ಎಂದು ಉಪವ್ಯವಸ್ಥಾಪಕ ಎಚ್.ಎನ್. ನಂದೀಶ್ ಪ್ರಜಾವಾಣಿಗೆ ತಿಳಿಸಿದ್ದಾರೆ.

‘ಡಿಫ್ಯೂಷರ್ ಟ್ಯಾಂಕ್, ಕ್ಲಾರಿಫೈಯರ್ ಟ್ಯಾಂಕ್, ವಾಯುನೌಕೆ ಟ್ಯಾಂಕ್, ಅಂತಿಮ ಟ್ಯಾಂಕ್, ಬ್ಲೌವರ್ ರೂಮ್, ಪೂರ್ವಭಾವಿ ಶುದ್ಧೀಕರಣ ಘಟಕ, ಶೋಧನಾ ಟ್ಯಾಂಕ್, ಶೇಖರಣೆ, ಪಂಪ್ ಹೌಸ್ ಸೇರಿದಂತೆ ಇನ್ನಿತರ ಕಾಮಗಾರಿ ನಡೆಯಲಿದೆ. ಈ ಕೇಂದ್ರದಲ್ಲಿ ಶುದ್ಧೀಕರಣವಾದ ನೀರನ್ನು ಶೀಥಲೀಕರಣ ಘಟಕ ಹಾಗೂ ಡೈರಿ ನಿರ್ವಹಣೆಗೆ ಬಳಸಲಾಗುವುದು. ಅಲ್ಲದೇ ಹುಲ್ಲು ಬೆಳೆಸಲು ಹಾಗೂ ಇನ್ನಿತರ ಕೃಷಿ ಚಟುವಟಿಕೆಯಲ್ಲಿ ಬಳಸಲಾಗುವುದು’ ಎಂದು ಘಟಕದ ಮೇಲ್ವಿಚಾರಕ ಕಾಂತರಾಜ್ ತಿಳಿಸಿದ್ದಾರೆ.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !