ಶುಕ್ರವಾರ, ಆಗಸ್ಟ್ 12, 2022
22 °C
ದಿಡ್ಡಳ್ಳಿ ಬಸವನಹಳ್ಳಿ ಲಸಿಕಾ ಕಾರ್ಯಕ್ರಮದಲ್ಲಿ ಶಾಸಕ ಬೋಪಯ್ಯ ಮನವಿ

’ಹಾಡಿಗಳ ನಿವಾಸಿಗಳು ಲಸಿಕೆ ಪಡೆದುಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ‘ಜಿಲ್ಲೆಯ ಹಾಡಿಯ ನಿವಾಸಿಗಳು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು’ ಎಂದು ಶಾಸಕ ಕೆ.ಜಿ ಬೋಪಯ್ಯ ಮನವಿ ಮಾಡಿದರು.

ಮಾಲ್ದಾರೆ ಸಮೀಪದ ದಿಡ್ಡಳ್ಳಿ ಬಸವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆದಿವಾಸಿ ಹಾಡಿಯ ನಿವಾಸಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಾದ್ಯಂತ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಉಚಿತವಾಗಿ ಲಸಿಕೆಯನ್ನು ನೀಡುತ್ತಿದೆ. ಹಾಡಿಯಲ್ಲಿರುವ 18ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು. ಕೆಲವರು ಈ ಹಿಂದೆ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಆದಿವಾಸಿಗಳು ತಲೆಕೆಡಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಹಾಡಿಯ ನಿವಾಸಿಗಳು ದೂರದ ತಾಲ್ಲೂಕು ಕೇಂದ್ರಗಳಿಗೆ ತೆರಳಲು ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಹಾಡಿಯಲ್ಲಿಯೇ ಲಸಿಕೆ ನೀಡುವ ಅಭಿಯಾನ ಕೈಗೊಳ್ಳಲಾಗಿದೆ’ ಎಂದರು.

‘ಸೋಂಕು ಲಕ್ಷಣಗಳಿದ್ದರೇ ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದೀಗ ಮಳೆಗಾಲ ಆರಂಭವಾಗಿದ್ದು, ಆದಿವಾಸಿಗಳು ಮುತುವರ್ಜಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಮುಂದಿನ ದಿನಗಳಲ್ಲಿ ಸಿದ್ದಾಪುರದ ಅವರೆಗುಂದ ಸೇರಿದಂತೆ ವಿವಿಧ ಹಾಡಿಗಳಲ್ಲಿ ಲಸಿಕೆ ನೀಡುವ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮೊದಲು ಹಾಡಿಯ ಮನೆ ಮನೆಗಳಿಗೆ ತೆರಳಿದ ಶಾಸಕ ಬೋಪಯ್ಯ ಅವರು ಲಸಿಕೆ ಬಗ್ಗೆ ಹಾಡಿಯ ನಿವಾಸಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಪಶ್ಚಿಮಘಟ್ಟ ರಾಜ್ಯ ಕಾರ್ಯಪಡೆಯ ಅಧ್ಯಕ್ಷ  ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ‘ಶಾಸಕ ಕೆ.ಜಿ ಬೋಪಯ್ಯ ವಿರಾಜಪೇಟೆ ಕ್ಷೇತ್ರದ ಹಾಡಿಗಳ ನಿವಾಸಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಆರೋಗ್ಯ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು’ ಎಂದರು.

‘ಐಟಿಡಿಪಿ ಇಲಾಖೆಯಿಂದ 650 ಮನೆಗಳು ಮಂಜೂರಾಗಿದ್ದು, ಅರಣ್ಯಕ್ಕೆ ತೊಡಕಾಗದ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಹಕ್ಕುಪತ್ರ ಹೊಂದಿರುವ ಕುಟುಂಬಗಳಿಗೆ ಆರ್.ಟಿ.ಸಿ ತಯಾರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ತಹಶೀಲ್ದಾರರಾದ ಡಾ.ಯೋಗಾನಂದ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಯತಿರಾಜ್, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ, ಐ.ಟಿ.ಡಿ.ಪಿ ಜಿಲ್ಲಾ ಅಧಿಕಾರಿ ಶಿವಕುಮಾರ್, ತಾಲ್ಲೂಕು ಅಧಿಕಾರಿ ಗುರುಶಾಂತಪ್ಪ, ಚೆನ್ನಯ್ಯನಕೋಟೆ ಗ್ರಾ.ಪಂ ಅಧ್ಯಕ್ಷರಾದ ಗಾಯತ್ರಿ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಶಮೀರ್, ಕಂದಾಯ ಪರಿವೀಕ್ಷಕರಾದ ಬಾನುಪ್ರಿಯ, ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಕಾರ್, ಮುತ್ತಪ್ಪ, ಗೌಡಜ್ಜ ಸೇರಿದಂತೆ ಇನ್ನಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು