ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕುಸಿದ ರಸ್ತೆ ನಡುವೆಯೇ ಪಯಣ!

ಮಡಿಕೇರಿ, ಚಟ್ಟಳ್ಳಿ ಮಾರ್ಗದಲ್ಲಿ ಭೂಕುಸಿತ, ಭಯದಲ್ಲಿ ವಾಹನ ಚಾಲಕರು
Last Updated 11 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಅದು ಕೊಡಗಿನ ಸುಂದರ ರಸ್ತೆಗಳಲ್ಲಿ ಒಂದಾಗಿತ್ತು. ಮಡಿಕೇರಿ ಭಾಗದಿಂದ ತಮ್ಮ ಪಯಣ ಆರಂಭಿಸಿದರೆ, ಎಡಕ್ಕೆ ಗುಡ್ಡ, ಬಲಕ್ಕೆ ಪ್ರಪಾತ, ಎಷ್ಟು ದೂರ ಕಣ್ಣು ಹಾಯಿಸಿದರೂ ಕಾಫಿ ತೋಟದ ಸೊಬಗು, ದೂರದಲ್ಲಿ ಬೆಟ್ಟಗುಡ್ಡಗಳ ಸಾಲು, ಅಲ್ಲಲ್ಲಿ ನಕ್ಷತ್ರಗಳಂತೆ ಗೋಚರಿಸುವ ಮನೆಗಳು, ಕಾಫಿ ತೋಟದ ಲೈನ್‌ಮನೆಗಳು ಹಾಗೂ ಹೋಂ ಸ್ಟೆಗಳು. – ಆದರೆ, ಇಂದು ಅದೇ ರಸ್ತೆಯಲ್ಲಿ ಹಾದು ಹೋದರೆ ಸಾಕು ನಿಮ್ಮನ್ನು ಭಯ ಆವರಿಸಲಿದೆ.

ಈ ಭಯ ಹುಟ್ಟಲು ಕಾರಣವಾಗಿದ್ದು ಆಗಸ್ಟ್‌ನಲ್ಲಿ ಸುರಿದ ಮಹಾಮಳೆ. ಅದು ಯಾವ ರಸ್ತೆ ಎಂದುಕೊಂಡಿರಾ. ಅದೇ ಮಡಿಕೇರಿ – ಚಟ್ಟಳ್ಳಿ ಮಾರ್ಗ. ಮಡಿಕೇರಿಯಿಂದ ಸಿದ್ದಾಪುರದ ನಡುವೆ ಹಾದುಹೋಗಿರುವ ರಸ್ತೆಯು, ಕತ್ತಲೆಕಾಡು ವೃತ್ತದಿಂದ ಸುಮಾರು ನಾಲ್ಕೈದು ಕಿ.ಮೀ ಅಂತರದಲ್ಲಿ ಅಲ್ಲಲ್ಲಿ ಭೂಕುಸಿತವಾಗಿದೆ. ಇದು ವಾಹನ ಸವಾರರಿಗೆ ಭಯವನ್ನೇ ಹುಟ್ಟಿಸುತ್ತಿದೆ.

ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಈ ಮಾರ್ಗದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಘಾಟಿ ರಸ್ತೆಯ ಮಧ್ಯಭಾಗದಿಂದ ಚಟ್ಟಳ್ಳಿ ತನಕ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ವಾಹನ ಸಂಚಾರವನ್ನು ಮಾರ್ಚ್‌ನಿಂದಲೇ ನಿರ್ಬಂಧಿಸಲಾಗಿತ್ತು. ಹೀಗಾಗಿ, ಮಳೆಗಾಲದಲ್ಲಿ ವಾಹನ ಸಂಚಾರವಾಗಲಿ, ಜನರ ಸಂಚಾರವಾಗಲಿ ಇರಲಿಲ್ಲ. ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು ಅರಿವಿಗೇ ಬಂದಿರಲಿಲ್ಲ. ಭೂಕುಸಿತವಾಗಿರುವುದು ಇತ್ತೀಚಿಗೆ ಗಮನಕ್ಕೆ ಬಂದ ಬಳಿಕ, ಮರಳಿನ ಚೀಲವಿಟ್ಟು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ‍ಪಡಿಸಲಾಗಿದೆ. ಅದರ ನಡುವೆಯೂ ವಾಹನಗಳು ಸಂಚರಿಸುತ್ತಿವೆ. ಭಯ ಕಾಡುತ್ತಿದೆ.

ಜಲಪಾತಗಳು ಸೃಷ್ಟಿ: ಇನ್ನೂ ಈ ಮಾರ್ಗದಲ್ಲಿ ಅಬ್ಯಾಲ ಜಲಪಾತವಿತ್ತು. ಅದು ಈ ಮಾರ್ಗದಲ್ಲಿ ತೆರಳುವ ಪ್ರಯಾಣಿಕರ ಮನ ಸೆಳೆಯುತ್ತಿತ್ತು. ಇದೀಗ ಭೂಕುಸಿತವಾದ ಪ್ರದೇಶದಲ್ಲಿ ಹೊಸ ಜಲಪಾತಗಳು ಸೃಷ್ಟಿಯಾಗಿವೆ. ಅವುಗಳೂ ಈಗ ಆಕರ್ಷಣೀಯ ತಾಣವಾಗಿವೆ.

ಪ್ರಮುಖ ಮಾರ್ಗ: ಸಿದ್ದಾಪುರ, ಚಟ್ಟಳ್ಳಿ, ಒಂಟಿಯಂಗಡಿಗೆ ತೆರಳಲು ಇದು ಪ್ರಮುಖ ಮಾರ್ಗ. ಈ ರಸ್ತೆ ಬಂದ್‌ ಆದರೆ ಬಳಸು ಮಾರ್ಗದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಲಿದೆ. ನಾಲ್ಕೈದು ಕಿ.ಮೀ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಅದರ ಉದ್ಘಾಟನೆಯೂ ಆಗಿದೆ. ಅದೇ ಮಾದರಿಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

ಇದೇ ರಸ್ತೆಯನ್ನು ಕಾಫಿ, ಕಾಳು ಮೆಣಸು, ಬಾಳೆ ಸಾಗಣೆ ಮಾಡಲು ಬೆಳೆಗಾರರು ಬಳಕೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ನೂರಾರು ಕಾರ್ಮಿಕರು ನಿತ್ಯ ಕೆಲಸಕ್ಕೆ ತೆರಳುತ್ತಿದ್ದರು. ರಸ್ತೆಯ ಎಡಭಾಗಕ್ಕೆ ಪ್ರಪಾತವಿದೆ. ಎಲ್ಲಿಯೂ ಕಬ್ಬಿಣದ ತಡೆಗೋಡೆ ಇಲ್ಲ. ಎಲ್ಲಿ ಪ್ರಪಾತಕ್ಕೆ ಬಿದ್ದೆವೋ ಎಂಬ ಭಯದಲ್ಲೇ ವಾಹನ ಸವಾರರು ಓಡಾಟ ನಡೆಸುವ ಸ್ಥಿತಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT