ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ವಿದ್ಯಾರ್ಥಿಗಳ ಸಂಭ್ರಮ ಕಸಿದ ಕೊರೊನಾ

15 ದಿನಗಳ ಅವಧಿಯಲ್ಲಿ 1,153 ಮಕ್ಕಳಿಗೆ ಕೋವಿಡ್‌ ದೃಢ
Last Updated 27 ಜನವರಿ 2022, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೋವಿಡ್‌ನ 3ನೇ ಅಲೆಯು ಕೊಡಗು ಜಿಲ್ಲೆಯ ಶಾಲಾ, ಕಾಲೇಜು ಆವರಣದಲ್ಲಿ ಮಂಕು ಕವಿಯುವಂತೆ ಮಾಡಿದೆ.

ಒಂದೂವರೆ ವರ್ಷಗಳ ಬಳಿಕ ಸಂಭ್ರಮದಿಂದ ಶಾಲೆ ಹಾಗೂ ಕಾಲೇಜುಗಳತ್ತ ಹೆಜ್ಜೆ ಹಾಕಿದ್ದ ವಿದ್ಯಾರ್ಥಿಗಳ ಸಂಭ್ರಮವನ್ನು ಕೊರೊನಾ ಕಸಿದುಕೊಂಡಿದೆ. ಅಂಗನವಾಡಿಗಳತ್ತಲೂ ಮಕ್ಕಳು ಬರುವುದು ಕಡಿಮೆಯಾಗಿದೆ.

ಜಿಲ್ಲೆಯ ಕೆಲವು ಶಾಲೆಗಳ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು, ಶಿಕ್ಷಕರೂ ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆಯಿತ್ತು. ಆದರೆ, ಮೂರನೇ ಅಲೆಯಲ್ಲಿ ಶಾಲೆಗಳಿಗೆ ರಜೆ ನೀಡದಿರುವ ಕಾರಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ.

ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ, ವಿರಾಜಪೇಟೆ, ಗೋಣಿಕೊಪ್ಪಲಿನ ಖಾಸಗಿ ಕ್ಲಿನಿಕ್‌ಗಳಿಗೆ ಪೋಷಕರು ಮಕ್ಕಳನ್ನು ಕರೆ ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಜಿಲ್ಲೆಯ 12 ಶಾಲೆ ಹಾಗೂ 4 ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವುಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಕಳೆದ 15 ದಿನಗಳ ಅಂತರದಲ್ಲಿ 18 ವರ್ಷದ ಒಳಗಿನ 1,153 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಯ 732 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಯಾರೂ ಗಂಭೀರ ಸ್ಥಿತಿಯಲ್ಲಿ ಇಲ್ಲ. ಹೆಚ್ಚಿನ ಪ್ರಕರಣಗಳು ಪತ್ತೆಯಾದ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ. ಆ ಶಾಲೆಗಳಲ್ಲಿ ಸ್ಯಾನಿಟೈಸ್‌ ಮಾಡಿ ಇನ್ನೆರಡು ದಿನಗಳಲ್ಲಿ ಶಾಲೆ ಆರಂಭಿಸುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ ತಿಳಿಸಿದ್ಧಾರೆ.

‘ಪಿಯುಸಿ 65 ವಿದ್ಯಾರ್ಥಿಗಳಿಗೂ ಸೋಂಕು ತಗುಲಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು ಮಾಹಿತಿ ನೀಡಿದ್ಧಾರೆ.

ಜಿಲ್ಲೆಯ 9 ವರ್ಷದ ಒಳಗಿನ 122 ಮಕ್ಕಳಿಗೆ ಹಾಗೂ 10ರಿಂದ 18 ವರ್ಷದ ಒಳಗಿನ 1,031 ಮಕ್ಕಳಿಗೆ ಸೋಂಕು ತಗುಲಿದೆ. ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಕಾಲೇಜು ಹೊರತು ಪಡಿಸಿದಂತೆ ಎಂಜಿನಿಯರಿಂಗ್‌, ಡಿಪ್ಲೊಮಾ, ನರ್ಸಿಂಗ್‌, ಮೆಡಿಕಲ್‌ ಕಾಲೇಜಿನ 356 ವಿದ್ಯಾರ್ಥಿಗಳಿಗೂ ಕೋವಿಡ್‌ ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 15ರಿಂದ 17 ವರ್ಷದ ಒಳಗಿನ 23,115 ಮಕ್ಕಳಿದ್ದು, 21,247 ಮಕ್ಕಳು ಕೋವಿಡ್‌ ನಿರೋಧಕ ಲಸಿಕೆ ತೆಗೆದುಕೊಂಡಿದ್ದಾರೆ. ಶೇ 91ರಷ್ಟು ಪ್ರಗತಿಯಾಗಿದೆ. 1,868 ಮಕ್ಕಳು ಲಸಿಕೆ ಪಡೆಯಲು ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

‘ಶೈಕ್ಷಣಿಕವಾಗಿ ಮಕ್ಕಳು ಸಾಕಷ್ಟು ಹಿಂದುಳಿಯುವ ಸ್ಥಿತಿಯಿದೆ. ಕೊಡಗಿನ ಬಹುತೇಕ ಕಡೆ ನೆಟ್‌ವರ್ಕ್ ಸಮಸ್ಯೆಯಿದ್ದು ಮೊದಲೆರಡು ಅಲೆಗಳಲ್ಲೂ ಪಠ್ಯಕ್ರಮಗಳು ಪೂರ್ಣಗೊಂಡಿರಲಿಲ್ಲ. ಈ ವರ್ಷ ಬಹಳಷ್ಟು ಹುಮ್ಮಸ್ಸಿನಿಂದಲೇ ಶಾಲೆ ಆರಂಭಿಸಿದ್ದೆವು. ಆದರೆ, ಈಗ 3ನೇ ಅಲೆ ಬಾಧಿಸುತ್ತಿದೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT